ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಯಪ’ ಅಧ್ಯಕ್ಷ ಗಾದಿ ಕಾಂಗ್ರೆಸ್‌ನಲ್ಲಿ ಶೀತಲ ಸಮರ

ಸಂದೀಪ್
Published 6 ಫೆಬ್ರುವರಿ 2024, 4:52 IST
Last Updated 6 ಫೆಬ್ರುವರಿ 2024, 4:52 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಜ್ಯದಲ್ಲಿ ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಪಟ್ಟಿ ಹೊರಬಿದ್ದ ನಂತರ ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶಾಭಿವೃದ್ಧಿ ಯೋಜನಾ ಪ್ರಾಧಿಕಾರದ (ಬಯಪ) ಅಧ್ಯಕ್ಷಗಾದಿಗೆ ಕಾಂಗ್ರೆಸ್ಸಿಗರಲ್ಲಿ ಶೀತಲ ಸಮರ ಏರ್ಪಟ್ಟಿದೆ.

ಲೋಕಸಭಾ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿರುವ ಈ ವೇಳೆಯಲ್ಲಿಯೇ ಪಕ್ಷದ ಮುಖಂಡರಲ್ಲಿ ಪ್ರಾರಂಭವಾಗಿರುವ ಆಂತರಿಕ ಬಿಕ್ಕಟ್ಟಿನಿಂದಾಗಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಮೇಲೆ ಒತ್ತಡ ಹೆಚ್ಚಿಸಿದೆ.

ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಕೈಗಾರಿಕಾ ಉದ್ದೇಶಕ್ಕೆ ಭೂ ಸ್ವಾಧೀನವಾಗುತ್ತಿರುವ ಹಿನ್ನಲೆಯಲ್ಲಿ, ಆ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರು, ಕಾಂಗ್ರೆಸ್‌ ಮುಖಂಡರು ‘ಬಯಪ’ ಅಧ್ಯಕ್ಷಗಾದಿ ತೆಗೆದುಕೊಂಡು ಲಾಭದಾಯಕ ಹುದ್ದೆಯ ಮೇಲೆ ಹಿಡಿತ ಸಾಧಿಸಲು ಈಗಾಗಲೇ ಗುಪ್ತ ಸಭೆ ನಡೆಸಿದ್ದಾರೆ.

ಅದಕ್ಕಾಗಿ ಅವರ ಬೆಂಬಲಿಗರು, ವಿವಿಧ ಸಂಘಟನೆಗಳ ಮೂಲಕ ತಮ್ಮ ಪ್ರತಿಸ್ಪರ್ಧಿಗಳ ನೈತಿಕ ಬಲ ಕಡಿಮೆ ಮಾಡಲು, ಅವರ ಹಿಂದಿನ ಕ್ರಿಮಿನಲ್‌ ಪ್ರಕರಣಗಳು, ಭೂಮಾಫಿಯಾಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಾಮಾಜಿಕ ಜಾಲತಾಣ ಸೇರಿದಂತೆ, ಪತ್ರಿಕೆಗಳಲ್ಲಿ ಪ್ರಚಾರ ಮಾಡಲು ಯೋಜನೆ ರೂಪಿಸಿದ್ದಾರೆ.

ಇದಕ್ಕೆ ಪ್ರತಿತಂತ್ರ ಹೂಡಿಸಿರುವ ಆಕಾಂಕ್ಷಿಗಳು ಅವರ ಸಾರ್ವಜನಿಕ ಜೀವನಕ್ಕೆ ಧಕ್ಕೆಯಾಗದಂತೆ, ವ್ಯಕ್ತಿ ಗೌರವಕ್ಕೆ ಚ್ಯುತಿ ಬರದಂತೆ ಯಾವುದೇ ಮಾಹಿತಿ ಪ್ರಕಟಣೆ ಮಾಡದಂತೆ ಈಗಾಗಲೇ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದು, ಮಾತೃ ಪಕ್ಷದ ಮುಖಂಡರ ವಿರುದ್ಧವೇ ತೊಡೆ ತಟ್ಟಿದ್ದಾರೆ.

ಈಗಾಗಲೇ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಗುರುತಿಸಿಕೊಂಡಿರುವ ಬಹುಪಾಲು ಕಾಂಗ್ರೆಸ್‌ ಮುಖಂಡರಿಗೆ ‘ಬಯಪ’ ಅಧ್ಯಕ್ಷಗಾದಿ ವರವಾಗಿ ಪರಿಣಮಿಸಿದ್ದು, ಅದನ್ನು ಪಡೆಯಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಒಳ ಜಗಳದಿಂದಾಗಿ ಪಕ್ಷದ ಸಂಘಟನೆಗೆ ಕುತ್ತು ಬರಬಹುದೆಂದು ಸಾಮಾನ್ಯ ಕಾರ್ಯಕರ್ತರು ಭೀತಿ ವ್ಯಕ್ತಪಡಿಸುತ್ತಿದ್ದಾರೆ.

ಅಧ್ಯಕ್ಷಗಾದಿ ಪಾವಿತ್ರ್ಯ ಕಾಪಾಡಲು ಬಿಜೆಪಿ ಆಗ್ರಹ

ರಾಜ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ನಿಗಮ, ಮಂಡಳಿಗಳ ಅಧ್ಯಕ್ಷಗಾದಿಯೂ ಬಿಕರಿಯಾಗುತ್ತಿದೆ. ದೇವನಹಳ್ಳಿಯ ‘ಬಯಪ’ ವಿಚಾರದಲ್ಲಿ ಇದೇ ರೀತಿ ಆಗುತ್ತಿರುವ ಮಾಹಿತಿ ಇದ್ದು, ಅದರ ವಿರುದ್ಧ ಸದನದಲ್ಲಿ ಸೇರಿದಂತೆ ದೂರು ನೀಡಿ ಪ್ರತಿಭಟಿಸುತ್ತೇವೆ. ಬಡವರ, ರೈತರ ಭೂಮಿಗೆ ಕಾಂಪೌಂಡ್‌ ಹಾಕುವವರನ್ನು ಬಯಪ್ಪ ಅಧ್ಯಕ್ಷ ನೀಡಬಾರದು ಅದರ ಪಾವಿತ್ರ್ಯವನ್ನು ಹಾಳು ಮಾಡಬಾರದು ಎಂದು ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT