ದೊಡ್ಡಬಳ್ಳಾಪುರ: ರಸ್ತೆ ಬದಿಗಳಲ್ಲಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳನ್ನು ತುರ್ತಾಗಿ ತೆರವು ಮಾಡುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಪ್ ಸಾಲಿಯಾನ ಅವರು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನ್ಯಾಯಾಧೀಶರ ನಡೆ ಹಳ್ಳಿಕಡೆ ಕಾರ್ಯಕ್ರಮದ ಅಂಗವಾಗಿ ನಗರದ ಅರಣ್ಯ ಇಲಾಖೆ ಸೇರಿದಂತೆ ವಿವಿಧಡೆಗಳಿಗೆ ಭೇಟಿ ನೀಡಿದ್ದ ಅವರು ಪರಿಶೀಲಿಸಿದರು.
ನಗರದ ಎಪಿಎಂಸಿ ಬಳಿ ಇತ್ತೀಚೆಗಷ್ಟೆ ನಡೆದ ಭೀಕರ ಅಪಘಾತದಲ್ಲಿ ತಂದೆ, ಮಗಳು ಮೃತಪಟ್ಟ ಘಟನೆ ಕುರಿತಂತೆ ಪ್ರಸ್ತಾಪಿಸಿದ ಅವರು, ಮೃತರ ಕುಟುಂಬಕ್ಕೆ ಪರಿಹಾರ ಕೊಡಬಹುದೇ ಹೊರತು, ಮೃತಪಟ್ಟವರನ್ನು ಮರಳಿ ತರಲು ಸಾಧ್ಯವಿಲ್ಲ. ಇಂತಹ ಭೀಕರ ಅಪಘಾತಗಳಂತಹ ಘಟನೆಗಳು ಮರುಕಳಿಸದಂತೆ ನಗರಸಭೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.
ರಸ್ತೆ ಬದಿಯಲ್ಲಿ ಅನಧಿಕೃತ ಮಳಿಗೆ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ನಗರ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಅನಧಿಕೃತ ಪಾದಚಾರಿ ಮಾರ್ಗಗಳ ಒತ್ತುವರಿ ತಡೆಯುವಲ್ಲಿ ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಯಾವುದೇ ಪಾದಚಾರಿ ಮಾರ್ಗಗಳು ಒತ್ತುವರಿಯಾಗದಂತೆ ತಡೆಯುವ ಕೆಲಸ ನಿರಂತರವಾಗಿ ನಡೆಯಬೇಕು. ಇಲ್ಲವಾದರೆ ಸೂಕ್ತ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ತಾಲ್ಲೂಕಿನ ಸಾಸಲು ಹೋಬಳಿಯ ಕಲ್ಲುಕುಂಟೆ, ಪಚ್ಚರ್ಲಾಹಳ್ಳಿ ಗ್ರಾಮಗಳೀಗೆ ಭೇಟಿ ನೀಡಿದ ನ್ಯಾಯಾಧೀಶರು ಗ್ರಾಮಸ್ಥರ ಕುಂದು ಕೊರತೆ ಆಲಿಸಿದರು.
ನ್ಯಾಯಾಧೀಶರಾದ ದೀಪ, ತಹಶೀಲ್ದಾರ್ ವಿಭಾವಿದ್ಯಾರಾಥೋಡ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ, ಹೊಸಹಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ವಿಜಯಲಕ್ಷ್ಮಿ,ಅರಣ್ಯ ಇಲಾಖೆ ಅಧಿಕಾರಿ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧಿಕಾರಿ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.