ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿ ರೂಪಿಸಿದ ‘ಬರವಣಿಗೆ’ ಬದುಕು

ಫಲಕ ಬರೆದು ಅರ್ಧ ದಶಕ ಕಳೆದ ಶಾಂತಮೂರ್ತಿ
Last Updated 3 ಸೆಪ್ಟೆಂಬರ್ 2020, 8:21 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಶಿಕ್ಷಣದಲ್ಲಿ ಮಾತೃ ಭಾಷೆಗೆ ಪ್ರಥಮ ಆದ್ಯತೆ ನೀಡುವಂತೆ 80ರ ದಶಕದಲ್ಲಿ ನಡೆದ ಗೋಕಾಕ್‌ ಚಳವಳಿ ಸಂದರ್ಭದಲ್ಲಿಯೇ ಎಲ್ಲಾ ನಾಮ ಫಲಕಗಳು ಕನ್ನಡದಲ್ಲಿಯೇ ಇರಬೇಕು ಎನ್ನುವ ಹೋರಾಟವು ತೀವ್ರವಾಗಿತ್ತು. ಹೀಗಾಗಿ ವಾಣಿಜ್ಯ ಮಳಿಗೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕನ್ನಡ ನಾಮಫಲಕಗಳ ಬರವಣಿಗೆಗೆ ಬೇಡಿಕೆ ಹೆಚ್ಚಾಯಿತು. ಅಂದಿನಿಂದ ಇಂದಿನವರೆಗೂ ನಾಮಫಲಕಗಳನ್ನು ಬರೆಯುವುದರಲ್ಲೇ ಬದುಕು ಕಟ್ಟಿಕೊಂಡಿದ್ದೇನೆ’ ಸುಮಾರು ಅರ್ಧ ದಶಕದ ತಮ್ಮ ನಾಮಫಲಕ ಬರವಣಿಗೆಯ ಬದುಕು ಸಾಗಿ ಬಂದ ನೆನಪುಗಳನ್ನು ಹಂಚಿಕೊಂಡರು ಶಾಂತಮೂರ್ತಿ.

ಮೂಲತಃ ಕೋಲಾರ ಜಿಲ್ಲೆಯ ದಿಂಬಾ ಗ್ರಾಮದವರಾದ ಶಾಂತಮೂರ್ತಿ ಅವರು ಎಸ್‌ಎಸ್‌ಎಲ್‌ಸಿ ಓದುವಾಗ ಚಿತ್ರಕಲೆಯನ್ನು ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡಿದ್ದರು. ಶಾಲೆಯ ಗೋಡೆಗಳ ಮೇಲೆ ಮುದ್ದಾದ ಅಕ್ಷರಗಳ ಮೂಲಕ ಘೋಷ ವಾಕ್ಯ, ಕವಿಗಳ ವಾಣಿಗಳನ್ನು ಬರೆಯುತ್ತಿದ್ದದನ್ನು ಗಮನಿಸಿದ್ದ ಗುರುಗಳು ಬರವಣಿಗೆ ಕಲೆಯಲ್ಲೇ ಉದ್ಯೋಗ ಕಂಡುಕೊಳ್ಳಲು ಹೇಳುತ್ತಿದ್ದರು. ಪಿಯುಸಿ ಮುಗಿದ ನಂತರ ನಾಮ ಫಲಕಗಳನ್ನು ಬರೆಯುವುದನ್ನೇ ಇಂದಿಗೂ ವೃತ್ತಿಯಾಗಿ ಮಾಡಿಕೊಂಡು ಬಂದಿದ್ದು, ದೊಡ್ಡಬಳ್ಳಾಪುರವೇ ನನ್ನ ಕಾರ್ಯ ಕ್ಷೇತ್ರ’ ಎಂದರು.

‘ಈಗ ತರಹೇವಾರಿ ಬಣ್ಣ ಬಣ್ಣದ ಡಿಜಿಟಲ್ ಬ್ಯಾನರ್‌, ಬೋರ್ಡ್‌ಗಳು ಬಂದಿದ್ದರೂ ನಮ್ಮ ಕೆಲಸ ನಿರಂತರವಾಗಿದೆ. ಕೈಯಲ್ಲಿ ಬರೆಯುವ ಕೆಲಸಗಳನ್ನು ಡಿಜಿಟಲ್‌ ಬ್ಯಾನರ್‌ ಮೂಲಕ ಮಾಡಲು ಸಾಧ್ಯವಿಲ್ಲ. ಡಿಜಿಟಲ್‌ ಬ್ಯಾನರ್‌ ಹೆಚ್ಚು ದಿನಗಳ ಕಾಲ ಬಾಳಿಕೆಯೂ ಬರುವುದಿಲ್ಲ. ಹೀಗಾಗಿ ರಸ್ತೆ ಬದಿಯಲ್ಲಿನ ಮೈಲಿಗಲ್ಲು, ಗ್ರಾಮಗಳ ಹೆಸರು, ಸೂಚನ ಫಲಕಗಳನ್ನು ಕೈ ಬರವಣಿಗೆ ಮೂಲಕವೇ ಬರೆಸುತ್ತಾರೆ. ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಿಸುವ ಗುತ್ತಿಗೆದಾರರು ದಶಕಗಳಿಂದಲು ನನ್ನ ಕೈಯಿಂದಲೇ ನಾಮಫಲಕಗಳನ್ನು ಬರೆಸುತ್ತಾ ಬಂದಿದ್ದಾರೆ’ ಎಂದರು.

‘3 ಅಡಿ ಉದ್ದ, 3 ಅಡಿ ಅಗಲ ಇರುವ ಒಂದು ನಾಮಫಲಕ ಬರೆಯಲು ₹ 400 ಪಡೆಯುತ್ತೇನೆ. ಕೆಲಸ ಹೆಚ್ಚಾಗಿದ್ದರೆ ದಿನಕ್ಕೆ 7 ರಿಂದ 9 ನಾಮ ಫಲಕಗಳವರೆಗೂ ಬರೆಯುತ್ತೇನೆ. ಇತ್ತೀಚೆಗೆ ಹೆಚ್ಚಾಗಿ ನೆಲದ ಮೇಲೆ ನಿಂತು ಬರೆಯುವ ಕೆಲಸವನ್ನು ಮಾತ್ರ ಮಾಡುತ್ತೇನೆ. ಲಾಕ್‌ಡೌನ್‌ ಸಂದರ್ಭದಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಕಾಮಗಾರಿ ಮುಕ್ತಾಯವಾಗಿದ್ದ ರಸ್ತೆ ಬದಿಗಳಲ್ಲಿನ ಸೂಚನ ಫಲಕ ಮತ್ತಿತರೆ ಬರಹಗಳನ್ನು ಬರೆಯುವುದರಲ್ಲೇ ಲಾಕ್‌ಡೌನ್‌ ಕಳೆದು ಹೋಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT