ಆನೇಕಲ್ : ತಾಲ್ಲೂಕಿನ ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯಲ್ಲಿ 4ನೇ ವಾರ್ಡ್‌ನಲ್ಲಿ ಹೈಮಾಸ್ಕ್ ದೀಪ, ಕೊಳವೆ ಬಾವಿ, ಯೋಗ ಮಂದಿರ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಬಿ.ಶಿವಣ್ಣ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಬೊಮ್ಮಸಂದ್ರ ಪುರಸಭೆಯು ಕೈಗಾರಿಕ ಪ್ರದೇಶವಾಗಿದೆ. ಸಾವಿರಾರು ಕಾರ್ಮಿಕರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸಲಾಗುವುದು. ನೀರಿನ ಸಮಸ್ಯೆ ಪರಿಹರಿಸಲು ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಸಾರ್ವಜನಿಕರು ಸಂಜೆಯ ವೇಳೆಯಲ್ಲಿ ಸುಲಭ ಸಂಚಾರಕ್ಕ ಅನುವಾಗುವಂತೆ ಹೈಮಾಸ್ಕ್ ದೀಪವನ್ನು ಉದ್ಘಾಟಿಸಲಾಗಿದೆ ಎಂದರು.
ಯೋಗ, ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಯೋಗ ಕೇಂದ್ರ ಅವಶ್ಯಕವಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯೋಗ ಮಂದಿರವನ್ನು ಸ್ಥಾಪಿಸಲಾಗಿದ್ದು ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯ ಜನತೆ ಯೋಗ ಮಂದಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಬೊಮ್ಮಸಂದ್ರ ಕೈಗಾರಿಕ ಪ್ರದೇಶದ ಅಧ್ಯಕ್ಷ ಎ.ಪ್ರಸಾದ್, ಬೊಮ್ಮಸಂದ್ರ ಪುರಸಭಾ ಅಧ್ಯಕ್ಷ ಗೋಪಾಲ್, ಸದಸ್ಯ ಚಲಪತಿ, ಮುಖಂಡರಾದ ಕಿರಣ್ ಕುಮಾರ್, ಮ್ಯಾಥ್ಯು, ಮಂಜುನಾಥ್, ಪುನೀತ್ ಪ್ರಸಾದ್, ದಿಲೀಪ್, ಅನಿಲ್, ಜಗದೀಶ್, ರಾಜು ಇದ್ದರು.