ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಬಂದರೂ ನಿಲ್ಲದ ನೀರಿನ ಬವಣೆ

ಬೆಂಗಳೂರು ಜಲಮಂಡಳಿಯಿಂದ ನೀರು ಪೂರೈಕೆಯಾದ ಏಕೈಕ ಪಟ್ಟಣ ಆನೇಕಲ್‌ l ಅಲ್ಲಲ್ಲಿ ಸೋರಿಕೆ
Last Updated 2 ಡಿಸೆಂಬರ್ 2019, 10:33 IST
ಅಕ್ಷರ ಗಾತ್ರ

‌ಆನೇಕಲ್: ಪಟ್ಟಣದ ಜನರ ಕುಡಿಯುವ ನೀರಿನ ಬವಣೆ ನಿವಾರಣೆಗಾಗಿ ಕಾವೇರಿ ಬಂದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಸ್ಥಳೀಯರ ಜನರ ಬಹುದಿನಗಳ ಬೇಡಿಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಸುಮಾರು ₹175ಕೋಟಿ ವೆಚ್ಚದಲ್ಲಿ ಮಂಜೂರಾಗಿ ಕಾವೇರಿ ನೀರು ಬೆಂಗಳೂರು ಜಲ ಮಂಡಳಿಯಿಂದ ಪೂರೈಕೆಯಾಗುತ್ತಿದೆ. ಆದರೆ, ಸಮರ್ಪಕವಾಗಿ ನೀರು ಜನರಿಗೆ ಪೂರೈಕೆ ಆಗದಿರುವುದು ‌ವಿಪರ್ಯಾಸ.

ಬಿಬಿಎಂಪಿ ವ್ಯಾಪ್ತಿಯಿಂದ ಹೊರಗೆ ಬೆಂಗಳೂರು ಜಲಮಂಡಳಿಯಿಂದ ನೀರು ಪೂರೈಕೆಯಾದ ಏಕೈಕ ಪಟ್ಟಣ ಎಂಬ ಹೆಗ್ಗಳಿಕೆ ಆನೇಕಲ್‌ನದ್ದು. ಪ್ರತಿದಿನ 15-20ಲಕ್ಷ ಲೀಟರ್‌ ಕಾವೇರಿ ನೀರು ಪೂರೈಕೆಯಾಗುತ್ತಿದೆ. 75-80 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ದಾಖಲೆಗಳಲ್ಲಿ ನಮೂದು ಆಗಿದೆ. ಕಾವೇರಿ ನೀರು ಪೂರೈಕೆಗೂ ಮುನ್ನ ವಾರಕ್ಕೊಮ್ಮೆ ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಕೆಯಾಗುತ್ತಿತ್ತು. ಆದರೆ, ಕಾವೇರಿ ನೀರು ಬಂದ ನಂತರ ಕೆಲವು ದಿನಗಳು ಮಾತ್ರ ವಾರಕ್ಕೊಮ್ಮೆ ನೀರು ಬರುತ್ತಿತ್ತು. ನಂತರ 18-20 ದಿನಗಳಿಗೊಮ್ಮೆ ನೀರು ಪೂರೈಕೆಯಾಗಿದ್ದು ಕಾವೇರಿ ನೀರು ಬರುವುದೋ ಇಲ್ಲವೋ ಎಂಬ ಅನುಮಾನ ಜನರನ್ನು ಕಾಡುತ್ತಿದೆ.

ಸಿಹಿ ನೀರಿನ ಜತೆಗೆ ಕೆಲವು ವಾರ್ಡ್‌ಗಳಿಗೆ ಉಪ್ಪು ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈಚೆಗೆ ಕೆಲವು ವಾರ್ಡ್‌ಗಳಲ್ಲಿ ಉಪ್ಪು ನೀರಿನ ಪೂರೈಕೆ ಸಹ ಸಮರ್ಪಕವಾಗಿಲ್ಲ ಎಂಬ ದೂರುಗಳು ಎಲ್ಲ ವಾರ್ಡ್‌ಗಳಿಂದಲೂ ಕೇಳಿ ಬರುತ್ತಿದೆ.

18 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ವಾರಕ್ಕೊಮ್ಮೆ ನೀರು ಕೊಟ್ಟರೆ ಟ್ಯಾಂಕರ್‌ ನೀರು ಪಡೆಯದೆ ಮನೆ ನಿರ್ವಹಿಸಬಹುದು. ಆದರೆ, 18-20 ದಿನಕ್ಕೆ ನೀರು ನೀಡಲಾಗುತ್ತಿದೆ. ಯಾವಾಗ ಕೇಳಿದರೂ ಪೈಪ್‌ ಒಡೆದಿದೆ. ನೀರಿಲ್ಲ, ಕರೆಂಟ್‌ ಇಲ್ಲ ಎಂಬ ಕಾರಣ ಹೇಳುವುದೇ ಹೆಚ್ಚು. ಆದರೆ, ನೀರು ಪೂರೈಕೆ ಆಗುತ್ತಿಲ್ಲ ಎಂದು ಪಟ್ಟಣದ ಬಡಾವಣೆಯೊಂದರ ತಿಮ್ಮಕ್ಕ ಹೇಳಿದ ಮಾತು ಇಲ್ಲಿನ ಪರಿಸ್ಥಿತಿಗೆ ಹಿಡಿದ
ಕನ್ನಡಿ.

ಆನೇಕಲ್‌ನ ಹಳೆ ಪೇಟೆ ಹೊರತುಪಡಿಸಿ ಹೊಸಪೇಟೆ ಬಡಾವಣೆಯಲ್ಲಿ 18-20 ದಿನಗಳಿಗೆ ನೀರು ಪೂರೈಕೆಯಾಗುತ್ತಿದೆ. ಆನೇಕಲ್ ಪಟ್ಟಣದ ಹೊರವಲಯದ ವಾರ್ಡ್‌ಗಳಲ್ಲಿ ತಿಂಗಳಿಗೊಮ್ಮೆ ನೀರು ಪೂರೈಕೆ ಮಾಡಿದ ಉದಾಹರಣೆಯೂ ಇದೆ.

ಕನಿಷ್ಠ ವಾರಕ್ಕೊಮ್ಮೆ ನೀರು ಬಂದರೂ ಬರ ನೀಗಿಸಿಕೊಳ್ಳಬಹುದು. ಮನೆಗಳ ಬಳಿ ಸಂಪ್‌ ಕಟ್ಟಿಸಿಕೊಂಡಿರುವವರು ಹಣ ನೀಡಿ ಟ್ಯಾಂಕರ್‌ ಮೂಲಕ ನೀರು ಖರೀದಿಸುತ್ತಾರೆ. ಆದರೆ, ಸಂಪ್‌ ಇಲ್ಲದವರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಇದೆ. ಟ್ಯಾಂಕರ್‌ಗಳಿಗೆ ₹400-500 ನೀಡಬೇಕಾಗಿದೆ. ಆದಾಯದ ಒಂದು ಭಾಗ ನೀರಿಗಾಗಿಯೇ ಮೀಸಲಿಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ವೀವರ್ಸ್‌ ಕಾಲೊನಿ ವಿ.ಕೃಷ್ಣಮೂರ್ತಿ ಹೇಳುತ್ತಾರೆ.

ಆನೇಕಲ್‌ಗೆ ಬೆಂಗಳೂರು ಜಲಮಂಡಳಿಯಿಂದ ಪ್ರತಿದಿನ 15-20ಲಕ್ಷ ಲೀಟರ್‌ ಕಾವೇರಿ ನೀರು ಪೂರೈಕೆಯಾಗುತ್ತದೆ. ಇದಕ್ಕೆ ಪುರಸಭೆಯಿಂದ ಹಣ ಕೂಡ ಪಾವತಿ ಮಾಡಲಾಗುತ್ತದೆ. ಆನೇಕಲ್‌ನ ಜನಸಂಖ್ಯೆ ಅಂದಾಜು 50ಸಾವಿರವಿದ್ದು ಪ್ರತಿದಿನ ಒಬ್ಬ ವ್ಯಕ್ತಿಗೆ ಸರಾಸರಿ 40ಲೀಟರ್‌ ನೀರು ಪೂರೈಕೆ ಮಾಡಬಹುದಾಗಿದೆ. ಆದರೆ, ನೀರು ಪೂರೈಕೆ ಮಾತ್ರ ಆಗುತ್ತಿಲ್ಲ. ಪ್ರತಿ ತಿಂಗಳು ಪುರಸಭೆ ₹12-15ಲಕ್ಷ ಹಣ ಬೆಂಗಳೂರು ಜಲಮಂಡಳಿಗೆ ಪಾವತಿಸಬೇಕಾಗಿದೆ. ಸಮರ್ಪಕವಾಗಿ ನೀರು ಪೂರೈಕೆ ಮಾಡದೇ ಇರುವುದರಿಂದ ನೀರಿನ ಬಿಲ್‌ ವಸೂಲಿಯೂ ಸಮರ್ಪಕವಾಗಿ ಆಗುತ್ತಿಲ್ಲ. ಜಲಮಂಡಳಿಗೆ ನೀರಿನ ಬಿಲ್‌ ಪಾವತಿ ಬಾಕಿ ಇದೆ.

ಎಲ್ಲಂದರಲ್ಲಿ ಪೈಪ್‌ಗಳಲ್ಲಿ ಸೋರಿಕೆ, ಎಚ್‌.ಡಿ ಪೈಪ್‌ಗಳ ರಿಪೇರಿ, ವಾಟರ್‌ಮನ್‌ಗಳ ಕೊರತೆ, ಸಲಕರಣೆಗಳ ಕೊರತೆ, ಎಲ್ಲಕ್ಕಿಂತ ಮಿಗಿಲಾಗಿ ನಿರ್ವಹಣೆ ಮತ್ತು ದಕ್ಷತೆ ಕೊರತೆಯಿಂದ ಜನರು ಪರದಾಡುವಂತಾಗಿದೆ. ಕಾವೇರಿ ನೀರಿದ್ದರೂ ಕೈಗೆಟುಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯರ ಅಳಲು.

ನೀರಿನ ಪೂರೈಕೆ ನಿರ್ವಹಿಸಲು ವಾಟರ್‌ಮನ್‌, ಎಂಜಿನಿಯರ್‌ ಮತ್ತು ಅಧಿಕಾರಿಗಳ ಒಂದು ತಂಡ ಸಮರ್ಪಕವಾದ ಕಾರ್ಯಯೋಜನೆ ರೂಪಿಸಬೇಕು. ಪ್ರತಿವಾರ್ಡ್‌ಗೆ ನೀರು ಪೂರೈಕೆಯಾದ ಬಗ್ಗೆ ಮತ್ತು ನೀರಿನ ಲಭ್ಯತೆ ಬಗ್ಗೆ ಸಮರ್ಪಕವಾದ ಮಾಹಿತಿ ರೂಪಿಸಿದರೆ ಪಟ್ಟಣದ ಜನರು ಅಗತ್ಯಕ್ಕೆ ತಕ್ಕಷ್ಟು ನೀರು ಬಳಸಬಹುದು. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬದ್ಧತೆ ಕೊರತೆಯಿಂದಾಗಿ ಪರದಾಡುವಂತಾಗಿದೆ. ತೆರಿಗೆ ನೀಡಿಯೂ ಟ್ಯಾಂಕರ್‌ಗಳಿಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಬಹುತೇಕ ವಾರ್ಡ್‌ಗಳಲ್ಲಿ ಇದೆ.

ನೀರಿನ ಸಮರ್ಪಕ ನಿರ್ವಹಣೆ ಮಾಡಬೇಕಾದ ತಂಡದ ಕೊರತೆ ಎದ್ದು ಕಾಣುತ್ತಿದೆ. ಪೂರ್ಣಾವಧಿ ಎಂಜಿನಿಯರ್‌ ಇಲ್ಲ. ನಿಯೋಜನೆ ಮೇಲೆ ಬರುತ್ತಾರೆ. ಆದರೆ, ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಮುಖ್ಯಾಧಿಕಾರಿ ಹುದ್ದೆ ಖಾಲಿ ಇದೆ. ಹೆಚ್ಚುವರಿ ಮುಖ್ಯಾಧಿಕಾರಿ ನಿಯೋಜನೆ ಮೇಲಿದ್ದಾರೆ. ಎರಡೆರಡು ಪುರಸಭೆ ನಿರ್ವಹಿಸುತ್ತಿದ್ದಾರೆ. ವಾಟರ್‌ಮನ್‌ಗಳು ನೀರು ಪೂರೈಕೆ ಬಿಟ್ಟು ಇತರ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಚುನಾವಣೆ ನಡೆದು ಆರು ತಿಂಗಳು ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಇದರಿಂದಾಗಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ ಎಂಬುದು ಕೆಲವರ ಆರೋ‍ಪ.

ಪಂಪ್‌ಹೌಸ್‌ಗಳಿಗೆ ನೀರು ಪೂರೈಕೆ ಮಾಡಲು ನಾಲ್ಕು ಇಂಚು ಪೈಪ್‌ಗಳಿವೆ. ಆರು ಇಂಚಿನ ಪೈಪ್‌ ಅಳವಡಿಸಬೇಕು. ಇದರಿಂದ ನೀರಿನ ಪೈಪ್‌ಗಳು ಒಡೆದು ಹೋಗಿ ಸೋರಿಕೆಯಾಗುವುದಿಲ್ಲ ಮತ್ತು ಹೆಚ್ಚಿನ ನೀರು ಪೂರೈಕೆ ಮಾಡಬಹುದು. ವಿತರಣೆ ಪೈಪ್‌ಲೈನ್‌ ತುಂಬಾ ಹಳೆಯವಾಗಿದೆ. ಮೂರು ಇಂಚು ಪೈಪ್‌ಗಳಾಗಿ ಮೇಲ್ದರ್ಜೆಗೇರಿಸಬೇಕು ಎನ್ನುತ್ತಾರೆ ಸ್ಥಳೀಯರು.

ವಾರಕ್ಕೊಮ್ಮೆಯಾದರೂ ಎಲ್ಲ ವಾರ್ಡ್‌ಗಳಿಗೂ ನೀರು ಸರಬರಾಜು ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ಪರಿಹರಿಸುವರೇ ಎಂಬ ದೂರದ ಆಸೆಯಿಂದ ಜನರು ಕಾದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT