ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನುವಂಡನಹಳ್ಳಿ ಸರ್ಕಾರಿ ಶಾಲೆ: ಕಲ್ಲು ಚಪ್ಪಡಿ ಚಾವಣಿ, ಸುಣ್ಣ–ಬಣ್ಣ ಕಾಣದ ಕಟ್ಟಡ

ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಶಾಲೆ
Published 26 ಜೂನ್ 2024, 3:23 IST
Last Updated 26 ಜೂನ್ 2024, 3:23 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಹಳೆ ಕಟ್ಟಡ, ಸೋರುತ್ತಿರುವ ಕಲ್ಲಿನ ಚಾವಣಿ, ಒಂದೇ ಕೊಠಡಿಯಲ್ಲೇ ಪಾಠ ಕೇಳಬೇಕಾದ ಅನಿವಾರ್ಯತೆ. ಪಾಠ ಕಲಿಯುವ ಕೊಠಡಿಯಲ್ಲೇ ಶಾಲೆಯಲ್ಲಿನ ಎಲ್ಲ ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗಿದೆ. ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಮರೀಚಿಕೆಯಾಗಿದೆ.

ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನುವಂಡನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ ಇದು. 1974ರಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಶಾಲೆ ಕಟ್ಟಡ ಸುಣ್ಣ ಬಣ್ಣವಿಲ್ಲದೆ ಸೊರಗಿದೆ. ಕಟ್ಟಡ ಚಾವಣಿ ಕಲ್ಲು ಚಪ್ಪಡಿಗಳಿಂದ ಕೂಡಿದೆ.

ಮಳೆ ಬಂದರೆ ಸೋರುತ್ತಿದೆ. ಮಳೆ ನೀರು ಸೋರುವುದರಿಂದ ಮಕ್ಕಳು ಕಲಿಕೆಗಾಗಿ ಜೋಡಿಸಿರುವ ಪುಸ್ತಕಗಳೆಲ್ಲ ಹಾಳಾಗುತ್ತಿವೆ. ಮಳೆ ನಿಂತ ಮೇಲೂ ಒಂದೆರಡು ದಿನಗಳ ಕಾಲ ಮಳೆ ನೀರಿನ ಹನಿ ತೊಟ್ಟಿಕ್ಕುವುದರಿಂದ ಕುಳಿತುಕೊಂಡು ಪಾಠ ಕಲಿಯಲು ಕಷ್ಟವಾಗುತ್ತಿದೆ. ಶಾಲೆ ಕಿಟಕಿಗಳೆಲ್ಲವೂ ಗೆದ್ದಲು ತಿಂದು ಹಾಳಾಗಿವೆ. ತಾತ್ಕಾಲಿಕವಾಗಿ ಮರದ ತುಂಡುಗಳನ್ನು ಅಡ್ಡ ಇಟ್ಟು ಕಿಟಕಿಗಳನ್ನು ಮುಚ್ಚಲಾಗಿದೆ. ಶೌಚಾಲಯ ಸುತ್ತಲೂ ಗಿಡಗಂಟಿ ಬೆಳೆದಿದೆ. ಮಕ್ಕಳು ಹೋಗಿ ಬರಲು ಭಯಪಡುವಂತಾಗಿದೆ. ಹಲವು ಬಾರಿ ಹಾವುಗಳು ಕೂಡ ಬರುತ್ತವೆ ಎಂದು ಇಲ್ಲಿನ ಜನರು ಹೇಳುತ್ತಾರೆ.

ಶಾಲೆ ದುಸ್ಥಿತಿಯಿಂದಾಗಿ ಇಲ್ಲಿಗೆ ಮಕ್ಕಳನ್ನು ದಾಖಲು ಮಾಡಬೇಕಾದರೆ ಪೋಷಕರು ನಿರಾಸಕ್ತಿ ತೋರುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 5ಮಂದಿ ಮಕ್ಕಳಿದ್ದಾರೆ. 1-5ನೇ ತರಗತಿವರೆಗೂ ಇಲ್ಲಿ ಕಲಿಯುತ್ತಾರೆ. ಒಬ್ಬ ಶಿಕ್ಷಕ ಇದ್ದಾರೆ. ಹೆಚ್ಚು ಮಕ್ಕಳು ದಾಖಲಾದರೂ ಕುಳಿತುಕೊಳ್ಳಲು ಜಾಗವಿಲ್ಲ. ಅಕ್ಷರಶಃ ಇದು ಶಾಲೆ ಕೊಠಡಿ ಎನ್ನುವುದಕ್ಕಿಂತ ಮಕ್ಕಳು ದಾಸ್ತಾನು ಕೊಠಡಿಯಲ್ಲಿ ಕಲಿಯುತ್ತಿದ್ದಾರೆ ಎನ್ನುವಂತಾಗಿದೆ. ಶಾಲೆ ದುಸ್ಥಿತಿಯಿಂದಾಗಿ ಗ್ರಾಮದಲ್ಲಿನ ಬಡವರೂ ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲು ಮಾಡಿಸಿದ್ದಾರೆ.

ಶಾಲಾ ಕಟ್ಟಡದ ಚಾವಣಿ ಮೇಲೆ ಸಿಮೆಂಟ್ ಕಾಂಕ್ರೀಟ್ ಹಾಕಬೇಕು. ಶಾಲೆ ಮುಂಭಾಗದಲ್ಲಿ ಗೇಟ್ ಅಳವಡಿಸಬೇಕು. ಶಾಲೆಗೆ ಸುಣ್ಣ ಬಣ್ಣ ಬಳಿಯಬೇಕು. ಶಾಲೆ ಆವರಣದಲ್ಲಿರುವ ಶೌಚಾಲಯಗಳನ್ನು ತೆರವುಗೊಳಿಸಿ ಉತ್ತಮವಾಗಿ ನಿರ್ಮಾಣ ಮಾಡಿಕೊಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಕಟ್ಟಡ ಸೋರಿಕೆ

ಶಾಲೆ ಕಟ್ಟಡದ ಮೇಲೆ ಹಲವು ಬಾರಿ ಸಿಮೆಂಟ್ ಕಾಂಕ್ರೀಟ್ ಹಾಕಿಸಲಾಗಿದೆ. ಆದರೂ ಮಳೆ ಬಂದರೆ ಕಟ್ಡಡ ಸೋರುತ್ತಿದೆ. ಈಗ ಮತ್ತೆ ರಿಪೇರಿ ಮಾಡಿಸಲು ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರದಿಂದ ಸಿಗುವ ಸೌಲಭ್ಯ ಕುರಿತು ಅರಿವು ಮೂಡಿಸಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುವುದು. ಮುನೇಗೌಡ ಮುಖ್ಯ ಶಿಕ್ಷಕ ಅನುದಾನಕ್ಕಾಗಿ ಬೇಡಿಕೆ ಶಿಥಿಲವಾಗಿರುವ ಶಾಲೆಗಳ ಪಟ್ಟಿಯನ್ನು ಇಲಾಖೆಗೆ ಸಲ್ಲಿಸಲಾಗಿದೆ. ಶಾಲೆ ಕಟ್ಟಡಗಳು ರಿಪೇರಿ ಮತ್ತು ಸುಣ್ಣ ಬಣ್ಣ ಬಳಿಯುವುದಕ್ಕಾಗಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. ಮಕ್ಕಳಿಗೆ ಅನಾನುಕೂಲವಾಗದಂತೆ ಕ್ರಮ ವಹಿಸುತ್ತೇವೆ. ಮುನಿಯಪ್ಪ ಕ್ಷೇತ್ರ ಸಂಪನ್ಮೂಲ ವ್ಯಕ್ತಿ

ದಾಸ್ತಾನು ಕೊಠಡಿಯಂತಿರುವ ಶಾಲೆಯಲ್ಲೇ ಕಲಿಯುತ್ತಿರುವ ಮಕ್ಕಳು
ದಾಸ್ತಾನು ಕೊಠಡಿಯಂತಿರುವ ಶಾಲೆಯಲ್ಲೇ ಕಲಿಯುತ್ತಿರುವ ಮಕ್ಕಳು
ಚಾವಣಿ ಸೋರಿರುವುದು

ಚಾವಣಿ ಸೋರಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT