ಶುಕ್ರವಾರ, ಜನವರಿ 24, 2020
20 °C

ಶಿಕ್ಷಣ ಇಲಾಖೆಯ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿ: ಪುಟ್ಟಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಶಿಕ್ಷಣ ಇಲಾಖೆಯ ಅವೈಜ್ಞಾನಿಕ ನಿರ್ಧಾರಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿ, ಲಂಚಗುಳಿತನದಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಈ ಬಗ್ಗೆ ಶಿಕ್ಷಣ ಸಚಿವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಆಗ್ರಹಿಸಿದರು.

ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಶುಕ್ರವಾರ ನಗರದ ಆರ್.ಎಲ್.ಜೆ.ಐಟಿ ಕ್ಯಾಂಪಸ್‌ನಲ್ಲಿ ನಡೆದ ಗುರುವಂದನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶ ಬರುತ್ತಿದೆ. ಆದರೆ ಸರ್ಕಾರ ಖಾಸಗಿ ಶಾಲೆಗಳಿಗೆ ಅಧಿಕಾರಿಗಳು ವಿನಾಕಾರಣ ಭೇಟಿ ನೀಡಿ ಕಿರುಕುಳ ನೀಡುತ್ತಿದ್ದಾರೆ. ಶಿಕ್ಷಕರನ್ನು ಪಾಠ ಮಾಡುವುದನ್ನು ಬಿಟ್ಟು ಮಿಕ್ಕ ಕೆಲಸಗಳಿಗೆ ನಿಯೋಜಿಸುತ್ತಿದ್ದಾರೆ. ಪರೀಕ್ಷಾ ಸಮಯದಲ್ಲಿ ವಿವಿಧ ತರಬೇತಿಗಳು ಹಾಗೂ ಸಭೆಗಳನ್ನು ನಡೆಸುತ್ತಿದ್ದರೆ ಶಿಕ್ಷಕರು ಪಾಠ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಖಾಸಗಿ ಶಾಲೆಗಳಲ್ಲಿ ಮಕ್ಕಳ ಗಣತಿಯನ್ನು ಪ್ರತಿ ಸಾರಿ ಕೇಳುವುದರ ಹಿಂದೆ ದುರುದ್ದೇಶ ಅಡಗಿದೆ. ಖಾಸಗಿ ಶಾಲೆಗಳಲ್ಲಿ ಪೋಷಕರ ಒತ್ತಡಕ್ಕೆ ಶಿಕ್ಷಕರು ಪಾಠ ಮಾಡುವ ಪರಿಸ್ಥಿತಿಯಿದೆ. ಶಾಲಾ ನವೀಕರಣಗಳನ್ನು ತಡೆ ಹಿಡಿದುಕೊಂಡು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಲಾಗುತ್ತಿದೆ. 5 ವರ್ಷ ಅರ್ಜಿ ನವೀಕರಿಸಲು ಇರುವ ತೊಂದರೆಯಾದರೂ ಏನು. ಐಎಎಸ್ ಅಧಿಕಾರಿಗಳು ಶಿಕ್ಷಣ ಇಲಾಖೆಯ ಯಜಮಾನರಂತೆ ವರ್ತಿಸುತ್ತಿದ್ದಾರೆ. ಪ್ರಾಮಾಣಿಕ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸರ್ಜಿಕಲ್ ಸ್ಟ್ರೈಕ್ ನಡೆಸದಿದ್ದರೆ ವ್ಯವಸ್ಥೆ ಸರಿಹೋಗುವುದಿಲ್ಲ ಎಂದರು.

ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮಾತನಾಡಿ, ‘ಸರ್ಕಾರ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಖಾಸಗಿ ಶಾಲೆಯ ಶಿಕ್ಷಕರನ್ನು ಮಲತಾಯಿ ಧೋರಣೆ ಮಾಡದೇ ನೋಡಬೇಕು. ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡದೇ ಅವರನ್ನು ಪಾಸ್‌ ಮಾಡುವ ಕ್ರಮ ಸರಿಯಲ್ಲ. ಮಕ್ಕಳಿಗೆ ಪರೀಕ್ಷಾ ವಿಧಾನಗಳ ಬಗ್ಗೆ ತಿಳಿ ಹೇಳಿ, ಆ ನಂತರ ಪರೀಕ್ಷೆ ಎದುರಿಸಲು ಅನುವು ಮಾಡಿಕೊಡಬೇಕು. ಆರ್‌ಟಿಇ ಬಾಕಿ ಇರುವ ₹1,700 ಕೋಟಿ ಹಣ ಬಿಡುಗಡೆ ಮಾಡದಿದ್ದರೆ ಶಾಲೆಗಳನ್ನು ನಡೆಸುವುದಾದರೂ ಹೇಗೆ? ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕು ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ಖಾಸಗಿ ಶಾಲೆಗಳು ಇಲ್ಲದಿದ್ದರೆ ಶಿಕ್ಷಣ ಪಡೆಯುವಲ್ಲಿ ಬಹಳಷ್ಟು ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದರು. ಪ್ರತಿಯೊಬ್ಬರ ಬದುಕಿನ ಮೇಲೂ ಶಿಕ್ಷಕರ ಪ್ರಭಾವ ಇದ್ದೇ ಇರುತ್ತದೆ. ಉತ್ತಮ ಪ್ರಜೆಗಳನ್ನು ಸಿದ್ದಗೊಳಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದರು.

ಇಂದು ಕೈಗಾರಿಕಾ ವಲಯದಲ್ಲಿ ಹಲವಾರು ಕೈಗಾರಿಕೆಗಳು ಮುಚ್ಚುತ್ತಿವೆ. ಜೀವನ ಕಷ್ಟಕರವಾಗುತ್ತಿದೆ. ಶಿಕ್ಷಣ ಇಲಾಖೆಯ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದರು.

ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಎ.ಸುಬ್ರಮಣ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ವಿವಿಧ ಖಾಸಗಿ ಶಾಲೆಗಳ ಶಿಕ್ಷಕರನ್ನು ಅಭಿನಂದಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ, ಬಿಇಓ ಬೈಯಪ್ಪ ರೆಡ್ಡಿ, ಆರ್.ಎಲ್.ಜೆ.ಕ್ಯಾಂಪಸ್ ನಿರ್ದೇಶಕ ಜೆ.ರಾಜೇಂದ್ರ, ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಉಪಾಧ್ಯಕ್ಷೆ ಎಂ.ಶರಾವತಿ, ಪ್ರಧಾನ ಕಾರ್ಯದರ್ಶಿ ಎಸ್.ಆರ್.ರಮೇಶ್, ಖಜಾಂಚಿ ಕೆ.ಜಿ.ಶ್ರೀನಿವಾಸ ಮೂರ್ತಿ,ಸಂಯೋಜಕ ಲಕ್ಷ್ಮೀನಾರಾಯಣ್ ಹಾಗೂ ಸಂಘದ ಸದಸ್ಯರು ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು