ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೋರೇಟ್‍ ಲಾಬಿ:ಆಕ್ರೋಶ

ದೊಡ್ಡಬಳ್ಳಾಪುರದಲ್ಲಿ ಕೃಷಿ ಕಾಯ್ದೆ ವಿರುದ್ಧ ಜನಜಾಗೃತಿ ಜಾಥಾ, ರೈತ ಮಹಿಳೆಯರ ಪ್ರತಿಭಟನೆ
Last Updated 19 ಜನವರಿ 2021, 1:38 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶ ಮಾಡುವುದು, ರಾಷ್ಟ್ರ ಧ್ವಜ ಹಾರಿಸುವುದು ಸಂವಿಧಾನ ಬದ್ಧ ಹಕ್ಕು. ಜ.26ರಂದು ಇದನ್ನು ಮಾಡಿಯೇ ತೀರುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಅವರು ಸೋಮವಾರ ನಗರದಲ್ಲಿ ರೈತ, ಕಾರ್ಮಿಕ, ದಲಿತ ಹಾಗೂ ಕನ್ನಡ ಪರ ಸಂಘಟನೆಗಳ ವತಿಯಿಂದ ತಾಲ್ಲೂಕಿನಾದ್ಯಂತ ಜನ ಜಾಗೃತಿ ಜಾಥಾದ ಸಮಾರೋಪ ಹಾಗೂ ರೈತ ಮಹಿಳೆಯರ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು.

ದೆಹಲಿಯ ಗಡಿಯಲ್ಲಿ ಲಕ್ಷಾಂತರ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ಬೆಚ್ಚಿದೆ. ಆದರೆ, ಕೃಷಿ ಕಾಯ್ದೆಗಳ ಪರವಾಗಿ ಆರ್‌ಎಸ್‍ಎಸ್ ಹಾಗೂ ಬಿಜೆಪಿ ಮುಖಂಡರ ಬಾಯಲ್ಲಿ ಮಾತನಾಡಿಸುತ್ತಿದ್ದಾರೆ. ಕೃಷಿ ಕಾಯ್ದೆ ಹಿಂಪಡೆಯುವವರೆಗೂಹೋರಾಟ ನಡೆಸುವುದು ಅನಿವಾರ್ಯ. ಗಣರಾಜ್ಯೋತ್ಸವದ ದಿನ ಮುಖ್ಯಮಂತ್ರಿ ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದ ನಂತರ ಬೆಂಗಳೂರಿನಲ್ಲಿ ಬೃಹತ್ ಸಂಖ್ಯೆಯಲ್ಲಿ ರೈತರು ರಾಷ್ಟ್ರ ಧ್ವಜ, ಹಸಿರು ಧ್ವಜ ಹಿಡಿದು, ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ಜಾಥಾ ನಡೆಸಲಿದ್ದಾರೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ಪರಿಣಿತರು. ಚುನಾವಣೆಗೆ ಮುನ್ನ ನೀಡಿರುವ ಯಾವುದೇ ಭರವಸೆ ಈಡೇರಿಸಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ಕುರಿತಾಗಿ ಸ್ವಾಮಿನಾಥನ್ ವರದಿ ಬಗ್ಗೆ ಚಕಾರವಿಲ್ಲ. ಕೃಷಿ ಕಾಯ್ದೆ ತಿದ್ದುಪಡಿ ಮಾಡುವುದಾದರೆ, ಸ್ವಾಮಿನಾಥನ್ ವರದಿಯಂತೆ ಪ್ರತಿವರ್ಷ ಕನಿಷ್ಠ ಬೆಂಬಲ ಬೆಲೆ ಪರಿಷ್ಕರಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದರು.

ಸಿಪಿಐಎಂ ಮುಖಂಡ ಕೆ.ಎನ್.ಉಮೇಶ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿರುವ ಎಲ್ಲ ಕಾಯ್ದೆಗಳು ಜನ ವಿರೋಧಿಯಾಗಿವೆ. ಕಾರ್ಮಿಕ ಸಂಹಿತೆಗಳಾದ ವೇನತ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ, ಉದ್ಯೋಗ ಸುರಕ್ಷತೆ ಮೊದಲಾದ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ವಿರೋಧವಾಗಿವೆ. ಹೋರಾಟದ ಮೂಲಕ ತಕ್ಕ ಪಾಠ ಕಲಿಸಬೇಕಿದೆ ಎಂದು ಅವರು ಹೇಳಿದರು

ಸಭೆಯಲ್ಲಿ ರೈತ, ದಲಿತ, ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರಾದ ಆರ್.ಚಂದ್ರತೇಜಸ್ವಿ, ಪ್ರಸನ್ನ, ಸತೀಶ್, ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಸಿದ್ದಲಿಂಗಯ್ಯ, ಸಿ.ಎಚ್.ರಾಮಕೃಷ್ಣ, ಹನುಮೇಗೌಡ, ಬಿಎಸ್‌ಪಿ ಮುಖಂಡ ಪುರುಷೋತ್ತಮ್, ಡಾ.ರಕ್ಷಿತ್, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ನಾಯಕ್,ಡಿ.ಪಿ.ಆಂಜನೇಯ, ದಲಿತ ಸಂಘಟನೆ ರಾಜುಸಣ್ಣಕ್ಕಿ, ನೇಕಾರ ಸಂಘಟನೆಯ ಪಿ.ಎ.ವೆಂಕಟೇಶ್, ರೇಣುಕಾರಾದ್ಯ, ರುದ್ರಾರಾಧ್ಯ, ನಳಿನಾಕ್ಷಿ ಇತರರು ಇದ್ದರು. ರೈತ ಮಹಿಳಾ ಜಾಥಾ ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಾಲ್ಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಸಭೆಯಲ್ಲಿ ದೆಹಲಿ ರೈತ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಸಂತಾಪ ಸೂಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT