ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿ.ನಾ ರಾಮು ಹೇಳಿಕೆಗೆ ದಲಿತ ಮುಖಂಡರ ಖಂಡನೆ

ಎಂಟಿಬಿ ಸೋಲಿಗೆ ರಾಮು ಪರ ಪ್ರಚಾರವೂ ಕಾರಣ, ಅವರನ್ನು ಪಕ್ಷದಲ್ಲಿ ಮುಂದುವರೆಸಿದರೆ ಯಡಿಯೂರಪ್ಪಗೆ ಬೆಂಬಲವಿಲ್ಲ
Last Updated 13 ಡಿಸೆಂಬರ್ 2019, 16:30 IST
ಅಕ್ಷರ ಗಾತ್ರ

ಹೊಸಕೋಟೆ: ‘ಮಾವಳ್ಳಿ ಶಂಕರ್ ರಾಜ್ಯದಲ್ಲಿ 40 ವರ್ಷಗಳಿಂದ ದಲಿತರ ಪರ ನ್ಯಾಯಕ್ಕಾಗಿ ಹೋರಾಡಿದ್ದಾರೆ. ಇಂತಹವರನ್ನುಕಾಂಗ್ರೆಸ್ ಏಜೆಂಟ್ ಎಂದು ಚಿ.ನಾ. ರಾಮು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ.ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಅದಕ್ಕೆ ನಾವು ಸಿದ್ಧ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಂಗಳೂರು ವಿಭಾಗೀಯ ಸಂಘಟನಾ ಸಂಚಾಲಕ ಕೆ.ಆರ್. ಮುನಿಯಪ್ಪ ತಿಳಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಘಟನಾ ಸಂಚಾಲಕ ಶ್ರೀನಿವಾಸ್ ಮಾತನಾಡಿ, ‘ಚಿ.ನಾ. ರಾಮು ಅವರು ಬಡಕುಟುಂಬದ ಹಿನ್ನೆಲೆಯವರು. ಆದರೆ ಈಗ ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ ನಾಲ್ಕು ಕೋಟಿ ರೂಪಾಯಿಯ ಬಂಗಲೆಯಲ್ಲಿ ಅದ್ದೂರಿ ಜೀವನ ನಡೆಸುತ್ತಿದ್ದು, ಅವರ ವರಮಾನದ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು. ಅವರ ಸಂಘಟನೆ ತಾಲ್ಲೂಕಿನ ಯಾವುದೇ ಹಳ್ಳಿಯಲ್ಲಿ ಇಲ್ಲ. ಆದರೂ ಅವರು ತಮ್ಮ ಸಂಘಟನೆಯನ್ನು ಅಖಿಲ ಭಾರತೀಯ ಸಂಘಟನೆ ಎನ್ನುತ್ತಾರೆ. ಆದರೆ ಮಾವಳ್ಳಿ ಶಂಕರ್ ಅವರ ಸಂಘಟನೆ ರಾಜ್ಯದ ಮೂಲೆ ಮೂಲೆಗಳಲ್ಲಿ ಇದ್ದು ದಲಿತರ ಪರವಾದ ಹೋರಾಟಗಳಲ್ಲಿ ಸಕ್ರಿಯವಾಗಿದೆ’ ಎಂದರು.

‘ಚಿ. ನಾ. ರಾಮು ಈವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಅವರು ಮೊದಲು ಯಾವುದಾದರೂ ಚುನಾವಣೆಯಲ್ಲಿ ಸ್ಫರ್ಧಿಸಿ ಗೆಲ್ಲಲಿ. ದಲಿತರ ಕೋಟ್ಯಂತರ ರೂಪಾಯಿಯ ಭೂಮಿಯನ್ನು ನುಂಗಿದ್ದಾರೆ. ಅವರು ಮೊದಲು ಮೀಸಲಾತಿ ಬಿಡಲಿ, ನಂತರ ಮೀಸಲಾತಿ ರದ್ಧತಿ ಬಗ್ಗೆ ಮಾತನಾಡಲಿ’ ಎಂದು ಗುಡುಗಿದರು. ‌

‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲ ಜಾತಿಯ ಬಡವರಿಗೆ ಮೀಸಲಾತಿ ನೀಡಿದ್ದು, ಎಲ್ಲಿಯವರೆಗೆ ಅಸ್ಪೃಶ್ಯತೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಅನಿವಾರ್ಯ’ ಎಂದರು.

ಬೆಂಗಳೂರು ಜಿಲ್ಲಾ ಸಂಚಾಲಕ ಎಂ.ಮೂರ್ತಿ ಮಾತನಾಡಿ ‘ಇದೇ ರೀತಿ ಚಿ. ನಾ ರಾಮು ಮುಂದುವರೆದರೆ ಅವರ ವಿರುದ್ಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ನಡೆಸಲಾಗುವುದು. ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪ್ರತಿಭಟನೆ ಮಾಡಲಾಗುತ್ತದೆ’ ಎಂದರು.

‘ಅವರನ್ನು ಬಿಜೆಪಿ ಪಕ್ಷದಲ್ಲಿ ಮುಂದುವರಿಸಿದರೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದಲಿತರು ಬೆಂಬಲ ನೀಡುವುದಿಲ್ಲ. ಈಚೆಗೆ ತಾಲ್ಲೂಕಿನಲ್ಲಿ ನಡೆದ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರ ಸೋಲಿಗೆ ಚಿ.ನಾ ರಾಮೂ ಅವರ ಪರ ಪ್ರಚಾರ ಮಾಡಿದ್ದೇ ಕಾರಣ’ ಎಂದು ಆರೋಪಿಸಿದರು.

ತಾಲ್ಲೂಕು ಸಂಚಾಲಕ ಶಂಕರ್, ಅಲಗೊಂಡಹಳ್ಳಿ ಮುನಿಸ್ವಾಮಿ, ದುನ್ನಸಂದ್ರ ವೇಲು, ಕೊರಳೂರು ರಮೇಶ್, ವಾಗಟ ರವಿ, ಕೊರಳೂರು ಕಾರ್ತಿ ಮತ್ತು ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT