ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ|ಸ್ಮಶಾನಕ್ಕೆ ರಸ್ತೆ ಕಲ್ಪಿಸದಿದ್ದರೆ ಪ್ರತಿಭಟನೆ: ಗ್ರಾಮಸ್ಥರ ಎಚ್ಚರಿಕೆ

Published 17 ಜೂನ್ 2024, 14:19 IST
Last Updated 17 ಜೂನ್ 2024, 14:19 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಹೋಬಳಿಯ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗವಾರ, ದೊಡ್ಡಸಾಗರಹಳ್ಳಿ ಗ್ರಾಮಗಳ ಜನರಿಗೆ ಮೀಸಲಿಟ್ಟಿರುವ ಸ್ಮಶಾನಕ್ಕೆ ರಸ್ತೆ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸ್ಮಶಾನಕ್ಕೆ ರಸ್ತೆ ಇಲ್ಲದೆ ಇಲ್ಲಿನ ಪರದಾಡುತ್ತಿದ್ದಾರೆ. ರಸ್ತೆ ನಿರ್ಮಿಸಿಕೊಡಿ ಎಂದು ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಇನ್ಮುಂದೆ ಯಾರಾದರೂ ಮೃತಪಟ್ಟರೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಶವ ಇಟ್ಟು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಎರಡೂ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ, ರೈತರ ಜಮೀನು ಮೂಲಕ ಶವ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುತ್ತಿದ್ದೆವು. ಇದನ್ನೆ ರೂಢಿ ಮಾಡಿಕೊಂಡು, ರಸ್ತೆಯನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ಈಗ ರೈತರು ಬಿಡುತ್ತಿಲ್ಲ. ಎಲ್ಲ ರೈತರು ತಮ್ಮ ತೋಟಗಳಿಗೆ ಬೇಲಿ ಹಾಕಿಕೊಂಡಿದ್ದಾರೆ. ಶವ ಹೊತ್ತು ಸಾಗಲು ಜಾಗವಿಲ್ಲ. ರಾಜಕಾಲುವೆ ಮೂಲಕ ಓಡಾಡುತ್ತಿದ್ದೆವು. ಈಗ ಅವು ಒತ್ತುವರಿಯಾಗಿವೆ ಎಂದು ಸಿಂಗವಾರ ಗ್ರಾಮದ ಸರಸ್ವತಮ್ಮ ದೂರಿದರು.

ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೆ ಸ್ಥಳಪರಿಶೀಲನೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಸೂಚನೆ ನೀಡಿದ್ದರು. ಅವರು, ಬಂದು ಸ್ಥಳ ಪರಿಶೀಲನೆ ನಡೆಸಿ, ಒತ್ತುವರಿಯಾಗಿದ್ದ ರಾಜಕಾಲುವೆಯ ಸ್ವಲ್ಪ ಭಾಗ ತೆರವುಗೊಳಿಸಿದರು. ಸ್ಥಳೀಯ ರೈತರು, ತೋಟಗಳಿಗೆ ಅಳವಡಿಸಿದ್ದ ಕಲ್ಲಿನ ಕೂಚಗಳು, ಮರಗಳು ತೆರವುಗೊಳಿಸಿಕೊಳ್ಳುತ್ತೇವೆ ನಮಗೆ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದರಿಂದ ಬಿಟ್ಟಿದ್ದರು. ನಂತರ ತೆರವುಗೊಳಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಸ್ವ ನಿರೀಕ್ಷಕರು ರಾಜಕಾಲುವೆ ತೆರವುಗೊಳಿಸಿದ್ದರು. ಸ್ಮಶಾನಕ್ಕೆ ದಾರಿ ಬಿಡಿಸಿದ್ದೆವು. ಸ್ಥಳೀಯರಲ್ಲಿನ ಗೊಂದಲದಿಂದ ಸಮಸ್ಯೆ ಉಂಟಾಗಿದೆ. ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುವುದು
- ಶಿವರಾಜ್ ತಹಶೀಲ್ದಾರ್ ದೇವನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT