ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ | ಸಮಯಕ್ಕೆ ಬರಲಿ ಬಸ್‌, ಅರ್ಧದಲ್ಲೇ ನಿಲ್ಲದೇ ಇರಲಿ

ಈ ಶೈಕ್ಷಣಿಕ ಸಾಲಿನಲ್ಲಾದರೂ ಸಮಸ್ಯೆ ಬಗೆಹರಿಯಲಿ; ವಿದ್ಯಾರ್ಥಿಗಳ ಕೂಗು
Published 10 ಜೂನ್ 2024, 4:33 IST
Last Updated 10 ಜೂನ್ 2024, 4:33 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‌ಇಡೀ ವರ್ಷ ಶಾಲಾ–ಕಾಲೇಜು ವಿದ್ಯಾರ್ಥಿಗಳು ತರಗತಿಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್‌ ಸೌಲಭ್ಯ ಇಲ್ಲದೆ ಹಾಗೂ ಇರುವ ಬಸ್‌ಗಳು ಮಾರ್ಗ ಮಧ್ಯದಲ್ಲೇ ಕೆಟ್ಟು ನಿಲ್ಲುತ್ತಿದ್ದವು. ಇದರ ವಿರುದ್ಧ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಸ್‌ ತಡೆದು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರು. ಈಗ ಶಾಲೆ–ಕಾಲೇಜುಗಳು ಆರಂಭವಾಗಿದೆ. ಈ ಬಾರಿಯಾದರೂ ಯಾವುದೇ ಸಮಸ್ಯೆ ಇಲ್ಲದೆ ತರಗತಿಗೆ ತೆರಳಲು ಸೂಕ್ತ ಬಸ್‌ ವ್ಯವಸ್ಥೆ ಮಾಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ವಿವಿಧ ಹಳ್ಳಿ ಹಾಗೂ ನಗರದಿಂದ ಉನ್ನತ ಶಿಕ್ಷಣಕ್ಕೆ ಬೆಂಗಳೂರಿನ ಕಾಲೇಜುಗಳಿಗೆ ಹೋಗಲು ಬೆಳಗ್ಗೆ ಬಸ್‌ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ‌. ಬರುವ ಒಂದೆರಡು‌ ಬಸ್‌ ಜನರಿಂದ ತುಂಬಿರುತ್ತಿತು. ಇದರಿಂದ ಬೆಸತ್ತಿದ್ದ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಸಿಡಿದಿದ್ದರು. ಬಸ್‌ಗಳನ್ನು ತಡೆದು, ಬಸ್‌ ನಿಲ್ದಾಣ ಮತ್ತು ಡಿಪೊದಲ್ಲಿದಲ್ಲಿ ಪ್ರತಿಭಟನೆ ನಡೆಸಿದ್ದರು.

ಇದರ ಫಲವಾಗಿ ಸಂದರ್ಭದಲ್ಲಿ ಶಾಸಕರು ಹಾಗೂ ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ಬಸ್‌ ನಿಲ್ದಾಣದಲ್ಲೇ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ್ದರು. ಅದರೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಿ ವ್ಯವಸ್ಥೆ ಮಾತ್ರ ಇಡೀ ವರ್ಷ ಸರಿದಾರಿಗೆ ಬರಲೇ ಇಲ್ಲ.

2024-25ನೇ ಸಾಲಿನ ಶೈಕ್ಷಣಿಕ ವರ್ಷ ಈಗಷ್ಟೆ ಪ್ರಾರಂಭವಾಗಿದ್ದು, ಶಾ-ಕಾಲೇಜುಗಳಲ್ಲಿ ತರಗತಿ ನಡೆಯುತ್ತಿವೆ. ಈ ಸಾಲಿನ ಶೈಕ್ಷಣಿಕ ವರ್ಷದಲ್ಲಾದರೂ ವಿದ್ಯಾರ್ಥಿಗಳು ಸುಗಮವಾಗಿ ಶಾಲೆ–ಕಾಲೇಜಿಗೆ ಹೋಗಿ ಬರುವಂತಾಗಲಿದೆಯೆ ಎನ್ನುವ ಪ್ರಶ್ನೆ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ಬಸ್ ಹತ್ತಲು ವಿದ್ಯಾರ್ಥಿಗಳ ನೂಕು ನುಗ್ಗಲು (ಸಂಗ್ರಹ ಚಿತ್ರ)
ಬಸ್ ಹತ್ತಲು ವಿದ್ಯಾರ್ಥಿಗಳ ನೂಕು ನುಗ್ಗಲು (ಸಂಗ್ರಹ ಚಿತ್ರ)

ಸಾಸಲು ಹೋಬಳಿ ಹಾಗೂ ತೂಬಗೆರೆ ಹೋಬಳಿಯಲ್ಲಿ ಬಸ್‌ ಸಮಸ್ಯೆ ಹೆಚ್ಚಾಗಿದೆ. ತಾಲ್ಲೂಕು ಕೇಂದ್ರದಿಂದ ಸುಮಾರು 28 ಕಿ.ಮೀ ದೂರದ ಸಾಸಲು ಹೋಬಳಿಯಲ್ಲಿ ಪ್ರೌಢ ಶಾಲೆ ನಂತರ ಶಿಕ್ಷಣ ಮುಂದುವರೆಸಲು ಯಾವುದೇ ರೀತಿಯ ಶೈಕ್ಷಣಿಕ ಸಂಸ್ಥೆಗಳು ಇಲ್ಲ. ಹೆಚ್ಚಿನ ಶಿಕ್ಷಣ ಪಡೆಯಲು ನಗರಕ್ಕೆ ಬರಬೇಕು ಅಥವಾ ಬೇರೆ ಕಡೆ ಹೋಗುವುದು ಅನಿವಾರ್ಯ. ತೂಬಗೆರೆ ಹೋಬಳಿ ಕೇಂದ್ರದಲ್ಲಾದರೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇದೆ. ಆದರೆ ಸಾಸಲು ಹೋಬಳಿಯ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಇಲ್ಲ. ಹೀಗಾಗಿ ಇವರೆಲ್ಲ ಸರ್ಕಾರಿ ಬಸ್‌ನ್ನೆ ಅವಲಂಭಿಸಿದ್ದಾರೆ.

ದೊಡ್ಡಬಳ್ಳಾಪುರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಮಯಕ್ಕೆ ಬಾರದ ಹಾಗೂ ಹೆಚ್ಚುವರಿ ಬಸ್‌ಗಳಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿದ್ದರು (ಸಂಗ್ರಹ ಚಿತ್ರ)  
ದೊಡ್ಡಬಳ್ಳಾಪುರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಮಯಕ್ಕೆ ಬಾರದ ಹಾಗೂ ಹೆಚ್ಚುವರಿ ಬಸ್‌ಗಳಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿದ್ದರು (ಸಂಗ್ರಹ ಚಿತ್ರ)  

ಸಾಸಲು ಹೋಬಳಿಯಲ್ಲಿ ಖಾಸಗಿ ಬಸ್‌ಗಳ ಸಂಚಾರವು ವಿರಳ. ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಬಸ್‌ ಇಲ್ಲದೆ ಹೋದರೆ ದುಬಾರಿ ಹಣ ತೆತ್ತು ಆಟೊದಲ್ಲಿ ಬರಬೇಕು. ಇಲ್ಲವೆ ಕಾಲೇಜು ಶಿಕ್ಷಣ ನಿಲ್ಲಿಸಬೇಕು, ಬೇರೆ ಮಾರ್ಗವೇ ಇಲ್ಲ. 2020ರ ಕೋವಿಡ್‌ ಲಾಕ್‌ಡೌನ್‌ಗೂ ಹಿಂದೆ ಬಸ್‌ ಸೌಲಭ್ಯಗಳ ಸಮಸ್ಯೆ ಅಷ್ಟಾಗಿ ಇರಲಿಲ್ಲ. ಆದರೆ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಸಾಸಲು ಹಾಗೂ ತೂಬಗೆರೆ ಹೋಬಳಿಯ ವಿವಿಧ ಗ್ರಾಮಗಳ ಮೂಲಕ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ರದ್ದಾದ ನಂತರ ಬಹುತೇಕ ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ಪುನಾರಂಭವಾಗಿಯೇ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಇಲ್ಲಿ ಬಸ್‌ ಜರೂರಾಗಿಬೇಕು
ಶಾಲಾ–ಕಾಲೇಜು ಸಮಯಕ್ಕೆ ಹೋದಾಣಿಕೆ ಆಗುವಂತೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಬಸ್‌ ಸೌಲಭ್ಯ ಅತ್ಯಗತ್ಯ ಇರುವ ಮಾರ್ಗಳೆಂದರೆ ತಾಲ್ಲೂಕು ಕೇಂದ್ರದ ಗಡಿ ಭಾಗದ ಸಾಸಲು ಹೋಬಳಿಯ ಮಂಚೇನಹಳ್ಳಿಶ್ರೀರಾಮನಹಳ್ಳಿಆರೂಢಿ ಅಮಲಗುಂಟೆ ಹೊಸಕೋಟೆ ಗುಂಡಮಗೆರೆ ತೂಬಗೆರೆ ಹೋಬಳಿಯ ಲಗುಮೇನಹಳ್ಳಿ ಸಾಧುಮಠ ಎಸ್‌.ನಾಗೇನಹಳ್ಳಿ ಮೇಳೆಕೋಟೆ ದೊಡ್ಡಬೆಳವಂಗಲ ಹೋಬಳಿಯ ಕನಕೇನಹಳ್ಳಿ ಕಾಡತಿಪ್ಪೂರು ಭಕ್ತರಹಳ್ಳಿ ಕಾಮನ ಅಗ್ರಹಾರ ಮಧುರೆ ಹೋಬಳಿ ಹೊನ್ನಾವಾರ ಪುರುಷನಹಳ್ಳಿ ರಾಮದೇವನಹಳ್ಳಿ ಕುಕ್ಕನಹಳ್ಳಿ ಕಾಡನೂರು.
ರಶ್ಮಿತಾ
ರಶ್ಮಿತಾ

ತಪುತ್ತಿದೆ ಮೊದಲ ತರಗತಿ

ಬಸ್‌ ಇಲ್ಲದ ಸಮಯದಲ್ಲಿ ಗಂಡುಮಕ್ಕಳು ಆಟೊಗಳಲ್ಲಿ ಬರುತ್ತಾರೆ. ಆದರೆ ಹೆಣ್ಣು ಮಕ್ಕಳು ಆಟೊಗಳಲ್ಲಿ ಒಬ್ಬರ ಮೇಲೆ ಒಬ್ಬರು ಕುಳಿತುಕೊಂಡು ಬರುವುದು ಕಷ್ಟ. ಬಸ್‌ ವಿಳಂಬವಾದ ಬಹುತೇಕ ಸಮಯದಲ್ಲಿ ಮೊದಲ ತರಗತಿಗಳಿಗೆ ತಪ್ಪಿಸಿಕೊಳ್ಳೂವುದು ಅನಿವಾರ್ಯವಾಗಿತ್ತು. ಈ ವರ್ಷದ ಕಾಲೇಜು ದಿಗಳಲ್ಲಾದರು ಮೊದಲ ತರಗತಿಯ ಪಾಠ ಕೇಳುವಂತಾಗಬೇಕು.

-ರಶ್ಮಿತಾ ಕೊನೆಘಟ್ಟ ಕಾಲೇಜು ವಿದ್ಯಾರ್ಥಿನಿ

ಎನ್.ಅರುಣ್ ಕುಮಾರ್‌
ಎನ್.ಅರುಣ್ ಕುಮಾರ್‌

ಇಡೀ ವರ್ಷ ಸಮಯಕ್ಕೆ ಸರಿಯಾಗಿ ಒಮ್ಮೆಯೂ ಕಾಲೇಜಿಗೆ ಬರಲು ಸಾಧ್ಯವಾಗಿಲ್ಲ. ಈ ವರ್ಷವಾದರು ಸರಿಯಾದ ಸಮಯಕ್ಕೆ ಬಸ್‌ ಸೌಲಭ್ಯ ದೊರೆಯುವಂತೆ ಆಗಬೇಕಿದೆ

-ಎನ್‌.ಅರುಣ್‌ಕುಮಾರ್ ಕಾಲೇಜು ವಿದ್ಯಾರ್ಥಿ

ಸಮಸ್ಯೆ ಮರುಕಳಿಸದು

ಸಾಸಲು ಹೋಬಳಿಯ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಬಸ್ ಸಂಚಾರ ಸಮಯವನ್ನು 3.30ಕ್ಕೆ ಬದಲಾಗಿ 4 ಗಂಟೆಗೆ ಬದಲಾಯಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಈಗಷ್ಟೆ ಶಾಲಾ–ಕಾಲೇಜುಗಳ ಪ್ರಾರಂಭವಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಹಿಂದಿನ ಸಮಸ್ಯೆಗಳು ಮರುಕಳಿಸದಂತೆ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರು ಸರ್ಕಾರಿ ಬಸ್‌ಗಳಲ್ಲಿಯೇ ಪ್ರಯಾಣಿಸಬೇಕು. ಇದರಿಂದ ಸಂಸ್ಥೆ ಲಾಭದಾಯಕವಾಗಿ ನಡೆಯಲು ಸಹಕಾರಿಯಾಗಲಿದೆ.

-ನಟರಾಜ್‌ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ದೊಡ್ಡಬಳ್ಳಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT