ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೇಲ್ದರ್ಜೆ ನಂತರ ಚುನಾವಣೆ ನಡೆಸಿ’

ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ತಡೆ ಹಿಡಿಯಲು ಮುಖಂಡರ ಮನವಿ
Last Updated 5 ಡಿಸೆಂಬರ್ 2020, 2:59 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಸರ್ಕಾರ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸುವ ನಿರ್ಧಾರ ಸ್ವಾಗತಾರ್ಹ. ಆದರೆ, ಈಗಾಗಲೇ ಪ್ರಾರಂಭವಾಗಿರುವ ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆ ತಡೆ ಹಿಡಿದು, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರವೇ ಚುನಾವಣೆ ನಡೆಸಬೇಕು ಎಂದು ಬಿಜೆಪಿ ಜಿಲ್ಲಾ ಖಜಾಂಚಿ ಸಿ.ನಾರಾಯಣಸ್ವಾಮಿ ಒತ್ತಾಯಿಸಿದರು.

ಈ ಕುರಿತು ಸರ್ವ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಇಡೀ ರಾಜ್ಯದಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಪಂಚಾಯಿತಿ. ಹಲವು ಪ್ರಶಸ್ತಿಗಳು ಸಹ ಸಂದಿವೆ. ಅಭಿವೃದ್ಧಿಯತ್ತ ಸಾಗುತ್ತಿರುವ ಈ ಪಂಚಾಯಿತಿಗೆ 2011ರಿಂದ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಲಾಗುತ್ತಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಮುಂದೂಡುತ್ತ ಬರಲಾಗುತಿದೆ ಎಂದರು. ‌

ಪಂಚಾಯಿತಿಯ ಎರಡು ಗ್ರಾಮಗಳ ಕುರಿತಾಗಿ ಉಂಟಾಗಿದ್ದ ಸಮಸ್ಯೆ ಬಗೆಹರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಂಪುಟ ಸಭೆ ತೀರ್ಮಾನಿಸಿದೆ. ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸರ್ಕಾರದ ಅಧೀನ ಕಾರ್ಯದರ್ಶಿ ಎ.ವಿಜಯಕುಮಾರ್ ವಿಶೇಷ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದ್ದಾರೆ. ಈ ಕ್ರಮಕ್ಕಾಗಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ. ಆದರೆ, ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸೂಕ್ತವಾಗಿಲ್ಲದ ಕಾರಣ ತಡವಾಗಿಯಾದರೂ ಪಟ್ಟಣ ಪಂಚಾಯಿತಿಯನ್ನಾಗಿ ಪರಿವರ್ತಿತವಾದ ನಂತರ ಚುನಾವಣೆ ನಡೆಸಬೇಕಿದೆ. ಈ ಕುರಿತು ಚುನಾವಣಾ ಆಯೋಗಕ್ಕೂ ಮನವಿ ಸಲ್ಲಿಸಲಾಗಿದೆ ಎಂದರು.

ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ ಮಾತನಾಡಿ, 1993ರಲ್ಲಿ ಗ್ರಾಮ ಪಂಚಾಯಿತಿಯಾಗಿ ರೂಪುಗೊಂಡ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈಗ 47ಮಂದಿ ಸದಸ್ಯರಿದ್ದು, ಇಡೀ ತಾಲ್ಲೂಕಿನಲ್ಲಿಯೇ ದೊಡ್ಡ ಗ್ರಾಮ ಪಂಚಾಯಿತಿಯಾಗಿದೆ. ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರಲ್ಲಿ ಪಂಚಾಯಿತಿ ಮಾದರಿಯಾಗಿದೆ. ಪಂಚಾಯಿತಿಯನ್ನು ಪುರಸಭೆಯಾಗಿ ಮಾಡುವಂತೆ ನಾವು ಮನವಿ ಸಲ್ಲಿಸಲಾಗಿತ್ತು. ಆದರೆ, ಕೆಲ ಮಾನದಂಡಗಳಿಂದ ಸಾಧ್ಯವಾಗಿಲ್ಲ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುತ್ತಿರುವುದು ಸಂತಸದ ಸಂಗತಿ. ಸರ್ಕಾರ ಕೆಐಡಿಬಿಎಗೆ ತೆರಿಗೆ ಸಂಗ್ರಹಕ್ಕೆ ಅವಕಾಶ ನೀಡದೇ ಗ್ರಾಮ ಪಂಚಾಯಿತಿಗೆ ತೆರಿಗೆ ಸಂಗ್ರಹಣ ಮಾಡಲು ಅವಕಾಶ ಮಾಡಿಕೊಡಬೇಕಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಬಿ.ಕೆ.ಮುನಿರಾಜು ಮಾತನಾಡಿ, ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೆ ಪಂಚಾಯಿತಿ ಅಭಿವೃದ್ದಿಗೆ ಪೂರಕವಾಗಲಿದೆ. ವಿವಿಧ ಮೂಲ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ಲಭಿಸುತ್ತದೆ. ಮುಂದಿನ ದಿನಗಳಲ್ಲಿ ಪುರಸಭೆಯಾಗುವ ಅವಕಾಶಗಳಿವೆ ಎಂದರು.

ಸಭೆಯಲ್ಲಿ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಎಂ.ಮುನಿರಾಜಪ್ಪ, ಬಿಜೆಪಿ ಮುಖಂಡ ಪ್ರೇಮ್‌ಕುಮಾರ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT