ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಬೆಲೆ ಏರಿಸಲು ಸರ್ಕಾರಕ್ಕೆ ರೈತರ ಮನವಿ

Last Updated 10 ಮಾರ್ಚ್ 2022, 2:32 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಹಾಲು ಉತ್ಪಾದಕರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಹಿತರಕ್ಷಣಾ ಸಮಿತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಕೆಎಂಎಫ್‌ ನಿರ್ದೇಶಕ ಬಿ.ಸಿ. ಆನಂದ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಬೇಡಿಕೆಗಳ ಕುರಿತು ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ರಾಜಕುಮಾರ್, ಹಾಲು ಉತ್ಪಾದಕರು ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬದುಕು ನಡೆಸುವುದು ಕಷ್ಟಕರವಾಗಿದೆ. ಇದೇ ಸಮಯದಲ್ಲಿ ಒಕ್ಕೂಟ ಸಹ ಎರಡು ಬಾರಿ ಹಾಲಿನ ಬೆಲೆ ಕಡಿಮೆ ಮಾಡಿದ್ದರೂ ಒಕ್ಕೂಟದ ಹಿತದೃಷ್ಟಿಯಿಂದ ರೈತರು ವಿರೋಧಿಸದೆ ಒಪ್ಪಿಕೊಂಡಿದ್ದಾರೆ ಎಂದು
ಹೇಳಿದರು.

ಆದರೆ, ಈಗಷ್ಟೇ ಹಾಲಿನ ಮಾರಾಟ ಹೆಚ್ಚಾಗುತ್ತಿದೆ. ಈಗ ಬೇಸಿಗೆಯೂ ಆರಂಭವಾಗಿದೆ. ಹಾಲು ಉತ್ಪಾದನೆ ಕಡಿಮೆಯಾಗಿದೆ. ನಂದಿನಿ ಹಾಲಿನ ಉತ್ಪನ್ನಗಳ ಬೆಲೆ, ಹಸಿರು ಮೇವು, ಹಿಂಡಿ, ಬೂಸ, ಪಶು ಆಹಾರದ ಬೆಲೆ ಎಲ್ಲವೂ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಸರಬರಾಜು ಮಾಡುತ್ತಿರುವ ಹಾಲಿನ ಬೆಲೆಯನ್ನು ಲೀಟರ್‌ಗೆ ಕನಿಷ್ಠ ₹ 3ಗೆ ಹೆಚ್ಚಿಸಬೇಕು. ಈ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಆಡಳಿತ ಮಂಡಳಿಯವರು ಹಾಗೂ ರೈತರು ನೌಕರರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ 2022-23ನೇ ಸಾಲಿನ ಬಜೆಟ್‌ನಲ್ಲಿ ಅಂಗನವಾಡಿ, ಬಿಸಿಯೂಟದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರೆ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಿದೆ. ಕೋವಿಡ್ ಸಂಕಷ್ಟದ ಸಮಯದಲ್ಲೂ ಹಾಲು ಉತ್ಪಾದಕರ ಸಂಘದ ನೌಕರರು ಪ್ರತಿದಿನಗಳಂತೆಯೇ ಕೆಲಸ ನಿರ್ವಹಿಸಿ ರೈತರು, ಗ್ರಾಹಕರು ಹಾಗೂ ಒಕ್ಕೂಟದ ನೆರವಿಗೆ ಬೆನ್ನೆಲುಬಾಗಿ ನಿಂತಿದ್ದೇವೆ ಎಂದು ಹೇಳಿದರು.

ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ನೌಕರರು ಜೀವನ ನಡೆಸುವುದು ದುಸ್ತರವಾಗಿದೆ. ಈ ಎಲ್ಲಾ ಕಾರಣಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ವೇತನವನ್ನು ಹೆಚ್ಚಿಸಬೇಕು ಎಂದರು.

ನೌಕರರ ಹಿತರಕ್ಷಣಾ ಸಮಿತಿಯ ಮನವಿ ಸ್ವೀಕರಿಸಿ ಮಾತನಾಡಿದ ಬಿ.ಸಿ. ಆನಂದ್‌ಕುಮಾರ್‌, ರೈತರಿಂದ ಖರೀದಿಸುವ ಹಾಲಿನ ಬೆಲೆ ಏರಿಸುವ ಕುರಿತು ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಸಂಘಕ್ಕೆ ₹ 10 ಲಕ್ಷ ನೀಡಲಾಗುವುದು. ಸಂಘವನ್ನು ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ನೌಕರರು ಸದಾ ರೈತರು ಹಾಗೂ ಒಕ್ಕೂಟದ ಒಳಿತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ ಎಂದು ಸಲಹೆ
ನೀಡಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ರವೀಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ದೇವರಾಜು, ಖಜಾಂಚಿ ಆರ್‌.ಎಸ್‌. ಸತೀಶ್‌, ಸಂಘಟನಾ ಕಾರ್ಯದರ್ಶಿ ವನಜಾಕ್ಷಿ, ಸಮಿತಿಯ ಪದಾಧಿಕಾರಿಗಳು ಮತ್ತು ನಿರ್ದೇಶಕರು
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT