ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ದ್ರಾಕ್ಷಿಗೆ ಮಾರುಕಟ್ಟೆ ಕೊರತೆ

ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಒತ್ತಾಯ
Last Updated 31 ಮಾರ್ಚ್ 2023, 7:13 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಅಂತರ್ಜಲ ಕುಸಿತದ ನಡುವೆಯೂ ಛಲಬಿಡದೇ ಹನಿ ನೀರಾವರಿ ಪದ್ಧತಿ ಮೂಲಕ ಈ ಭಾಗದ ರೈತರು ದ್ರಾಕ್ಷಿ ಬೆಳೆದಿದ್ದಾರೆ. ಆದರೆ ಸೂಕ್ತ ಮಾರುಕಟ್ಟೆ ಸೌಲಭ್ಯ, ಕೋಲ್ಡ್‌ ಸ್ಟೋರೆಜ್‌ ಮತ್ತು ವೈಜ್ಞಾನಿಕ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ದೇವನಹಳ್ಳಿ ತಾಲ್ಲೂಕಿನಲ್ಲಿ 1600 ಹೆಕ್ಟೇರ್ ಪ್ರದೇಶದಲ್ಲಿ ರೈತರು ದ್ರಾಕ್ಷಿ ಬೆಳೆದಿದ್ದಾರೆ. ವಿಜಯಪುರ ಹೋಬಳಿ ಹಾಗೂ ಚನ್ನರಾಯಪಟ್ಟಣ ಹೋಬಳಿಯಲ್ಲಿ 850 ಹೆಕ್ಟೇರ್‌ನಲ್ಲಿ ಸೀಡ್‌ಲೆಸ್ ಬೆಳೆಯಲಾಗಿದೆ. ಕುಂದಾಣ ಮತ್ತು ಕಸಬಾ ಹೋಬಳಿಗಳಲ್ಲಿ ಬೆಂಗಳೂರು ನೀಲಿ ದ್ರಾಕ್ಷಿ ಬೆಳೆಯಲಾಗಿದೆ.

ಹೋಬಳಿಯ ಹಾರೋಹಳ್ಳಿ,
ಇರಿಗೇನಹಳ್ಳಿ, ವೆಂಕಟಗಿರಿಕೋಟೆ, ಬಿಜ್ಜವಾರ, ಬೀಡಿಗಾನಹಳ್ಳಿ, ದಿನ್ನೂರು, ದಂಡಿಗಾನಹಳ್ಳಿ, ಬೈರಾಪುರ, ಕೋರಮಂಗಲ, ಸೇರಿದಂತೆ ವಿವಿಧಡೆ ದ್ರಾಕ್ಷಿ ಬೆಳೆದಿದ್ದಾರೆ. ಆದರೆ ಮಾರುಕಟ್ಟೆ ಸೌಲಭ್ಯ ಇಲ್ಲದ ಕಾರಣ ನ್ಯಾಯಯುತವಾಗಿ ರೈತರಿಗೆ ಸಿಗಬೇಕಾದ ಲಾಭ ಸಿಗುತ್ತಿಲ್ಲ.

ಮಾರುಕಟ್ಟೆ ಸೌಲಭ್ಯ ಇಲ್ಲದೆ ಕಾರಣ ವ್ಯಾಪಾರಿಗಳೇ ತೋಟಗಳಿಗೆ ನೇರ ಭೇಟಿ ನೀಡಿ ಕಟಾವು ಮಾಡುತ್ತಾರೆ. ಎಷ್ಟು ಕಟಾವು ಮಾಡಲಾಗಿದೆ?, ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂಬ ಮಾಹಿತಿ ರೈತರಿಗೆ ನೀಡುವುದಿಲ್ಲ. ಇಂತಿಷ್ಟು
ದ್ರಾಕ್ಷಿ ಕಟಾವು ಮಾಡಲಾಗಿದೆ ಎಂದು
ಬಿಳಿ ಚೀಟಿಯಲ್ಲಿ ಬರೆದುಕೊಡುತ್ತಾರೆ. ಆ ಚೀಟಿ ಕಳೆದುಕೊಂಡರೇ ಹಣ ಸಿಗುವುದಿಲ್ಲ
ಎನ್ನುತ್ತಾರೆ ಬೆಳೆಗಾರರು.

ಸರಿಯಾದ ಮಾರುಕಟ್ಟೆ ಮತ್ತು ಕೋಲ್ಡ್‌ ಸ್ಟೋರೆಜ್‌ ಇಲ್ಲದೆ ಅನಿವಾರ್ಯವಾಗಿ ವ್ಯಾಪಾರಿಗಳಿಗೆ ಮಾರಾಟ ಮಾಡಬೇಕಿದೆ. ಇದರಿಂದ ರೈತರು ನಿರೀಕ್ಷಿತ ಲಾಭಗಳಿಸಲು ಆಗುತ್ತಿಲ್ಲ.

ಈ ಭಾಗದ ದ್ರಾಕ್ಷಿ ಬೆಳೆಗಾರರ ಅನುಕೂಲಕ್ಕೆ ಕೋಲ್ಡ್‌ ಸ್ಟೋರೆಜ್‌ ನಿರ್ಮಿಸಬೇಕೆಂದು ಬಹುದಿನ ಬೇಡಿಕೆ.

ಈ ಹಿಂದೆ ಇಲ್ಲಿನ ತೋಟಗಳಿಗೆ ತೋಟಗಾರಿಕೆ ಸಚಿವ ನಾರಾಯಣಗೌಡ ಭೇಟಿ ನೀಡಿದ ವೇಳೆ ಪ್ರಾಕೃತಿಕ ವಿಕೋಪದಿಂದ ಆಗುತ್ತಿರುವ ನಷ್ಟದ ಕುರಿತು ವಿವರಿಸಿದ್ದೆವು. ಕೋಲ್ಡ್ ಸ್ಟೋರೇಜ್ ನಿರ್ಮಿಸಿಕೊಡಿ ಎಂದು ಮನವಿಯನ್ನೂ ಕೊಟ್ಟಿದ್ದೇವೆ. ಅವರು ಭರವಸೆ ನೀಡಿದರು. ಆ ಭರವಸೆ ಈಡೇರಿಸಲಿಲ್ಲ ಎನ್ನುತ್ತಾರೆ ರೈತ ಹಾರೋಹಳ್ಳಿ ಮುನಿರಾಜು ಹೇಳಿದರು.

ಬೆಲೆ ಕುಸಿತ: ರೈತ ಕಂಗಾಲು: ಈ ವೇಳೆಗೆ ದಾಕ್ಷಿ ಉತ್ತಮ ಬೆಲೆ ಪಡೆದುಕೊಳ್ಳಬೇಕಿತ್ತು. ಆದರೆ ಬೆಲೆ ಕುಸಿತದಿಂದ ರೈತರಿಗೆ ನಿರೀಕ್ಷಿತ ಆದಾಯ ಸಿಗುತ್ತಿಲ್ಲ. ನೀಲಿ ದ್ರಾಕ್ಷಿ ಪ್ರತಿ ಕೆ.ಜಿ.ಗೆ ₹18, ರೆಡ್ ಗ್ಲೋಬ್ ₹110, ದಿಲ್ ಕುಶ್ ₹23, ಸೋನಾಕ ₹24, ಶರತ್ ₹70, ಕೃಷ್ಣ ಶರತ್ ₹75, ಪ್ಲೇಮ್ ₹65ಗೆ ವ್ಯಾಪಾರಿಗಳು ತೋಟಗಳಲ್ಲಿ ಖರೀದಿಸುತ್ತಿದ್ದಾರೆ. ಆದರೆ, ವ್ಯಾಪಾರಿಗಳು ರೈತರ ಬಳಿ ಖರೀದಿಸುವ ಬೆಲೆಗೂ ಅವರು ಗ್ರಾಹಕರಿಗೂ ಮಾರಾಟ ಮಾಡುವ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ.

ಇದರಿಂದ ರೈತರು ಮಾರಾಟ ಮಾಡಲೂ ಆಗದೇ, ಶೇಖರಿಸಿ ಇಟ್ಟುಕೊಳ್ಳಲು ಆಗದೆ ದ್ರಾಕ್ಷಿ ಬೆಳೆಗಾರರು ಪರದಾಡುತ್ತಿದ್ದಾರೆ. ಈಗಿನ ಬೆಲೆಗಳಲ್ಲಿ ರೈತರು ತೋಟಗಳಿಗೆ ಹಾಕಿರುವ ಬಂಡವಾಳವೂ ಅವರ ಕೈ ಸೇರುತ್ತಿಲ್ಲ. ಮುಂದಿನ ಬೆಳೆಗೆ ಬಂಡವಾಳ ಹಾಕುವುದು ಹೇಗೆ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ.

ಬೇಡಿಕೆ ಕಡಿಮೆ: ‘ಪ್ರತಿವರ್ಷ ಬೇಸಿಗೆಯಲ್ಲಿ ಒಳ್ಳೆಯ ಬೇಡಿಕೆ ಇರುತ್ತಿತು. ಆದರೆ, ಈ ಬಾರಿ ಬೇಡಿಕೆ ಇಲ್ಲದ ಕಾರಣ, ನಾವೂ ಕೂಡಾ ತೋಟಗಳಲ್ಲಿ ಖರೀದಿ ಮಾಡಲು ಆಗುತ್ತಿಲ್ಲ. ವ್ಯಾಪಾರಸ್ಥರ ಬಳಿ ಹಣಕಾಸಿನ ಮುಗ್ಗಟ್ಟು ಜಾಸ್ತಿಯಾಗಿದೆ ಎನ್ನುತ್ತಾರೆ ವ್ಯಾಪಾರಿ ಮುರಳಿ.

ಆಲಿಕಲ್ಲು ಭಯ: ಹೋಬಳಿಯ ಇರಿಗೇನಹಳ್ಳಿ, ಹಾರೋಹಳ್ಳಿ, ವೆಂಕಟಗಿರಿಕೋಟೆ, ಮುದುಗುರ್ಕಿ ಭಾಗದಲ್ಲಿ ಆಲಿಕಲ್ಲು ಹೆಚ್ಚಾಗಿ ಬೀಳುವ ಪ್ರದೇಶವಾಗಿದೆ. ಹಲವಾರು ಬಾರಿ ಇದೇ ಪ್ರದೇಶದಲ್ಲೆ ಬೆಳೆ ಆಲಿಕಲ್ಲಿನ ಮಳೆಗೆ ಆಹುತಿಯಾಗಿವೆ. ಇತ್ತಿಚೆಗೆ ಮೋಡ ಕವಿದ ವಾತಾವರಣ ಹೆಚ್ಚಾಗಿದ್ದು, ಮತ್ತೆ ಅದೇ ದುರಂತ ಸಂಭವಿಸದಬಹುದೇ ಎನ್ನುವ ಭೀತಿ ರೈತರನ್ನು ಆವರಿಸಿದೆ.

‘ಆಲಿಕಲ್ಲಿನ ಮಳೆಯಾದರೆ, ತೋಟಗಳಲ್ಲಿ ಬೆಳೆದು ನಿಂತಿರುವ ದ್ರಾಕ್ಷಿ ಉದುರಿ ಹೋಗಲಿವೆ. ದ್ರಾಕ್ಷಿ ಹೊಡೆದು ಹೋಗುವುದರಿಂದ ತೋಟಗಳಲ್ಲಿಯೇ ಕೊಳೆಯಲಿದೆ ಎನ್ನುವ ಭಯ ರೈತರನ್ನು ಕಾಡುತ್ತಿದೆ. ಹಲವು ಬಾರಿ ಇದೇ ರೀತಿ ಕೈಗೆ ಬಂದ ಬೆಳೆಗಳು ಅಕಾಲಿಕ ಮಳೆಗೆ ಸಿಕ್ಕಿ ನಾಶ ಆಗಿರುವುದು ಇನ್ನೂ ನಮ್ಮ ಕಣ್ಮುಂದೆ ಇದೆ’ ಎಂದು ರೈತ ಕೃಷ್ಣಪ್ಪ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT