ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಧನಕ್ಕೆ ದ್ರಾಕ್ಷಿ ಬೆಳೆಗಾರರ ಆಗ್ರಹ

Last Updated 3 ಜೂನ್ 2021, 4:23 IST
ಅಕ್ಷರ ಗಾತ್ರ

ವಿಜಯಪುರ:ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ರೈತರು ಪರದಾಡುತ್ತಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿಯೂ ರೈತರು ಬೆಳೆದಿರುವ ಬೆಂಗಳೂರು ಬ್ಲೂ ದ್ರಾಕ್ಷಿಗೆ ಬೆಲೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಹೊಸಹುಡ್ಯ ಗ್ರಾಮದ ರೈತ ಮಹಿಳೆ ಆಂಜಿನಮ್ಮ ಮನವಿ ಮಾಡಿದ್ದಾರೆ.

‘ನಾವು 2 ಎಕರೆ ಜಾಗದಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆದಿದ್ದೇವೆ. ಕಳೆದ ವರ್ಷ ಉತ್ತಮವಾಗಿ ಬೆಳೆ ಬಂದಿತ್ತು. ಲಾಕ್‌‌ಡೌನ್‌ನಿಂದಾಗಿ ಕಟಾವು ಮಾಡುವವರಿಲ್ಲದೆ ತೋಟಗಳಲ್ಲೇ ಬೆಳೆ ಕೊಳೆಯಿತು. ನಾವು ಹಾಕಿದ್ದ ಬಂಡವಾಳವೂ ಕೈಗೆ ಬರಲಿಲ್ಲ. ಇದರಿಂದಾಗಿ ಮಾಡಿದ್ದ ಸಾಲ ತೀರಿಸಲಾಗದೆ ಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ’ ಎಂದು ನೋವು ತೋಡಿಕೊಂಡರು.

‘ಈ ವರ್ಷವೂ ಬೆಳೆ ಬರುವ ಸಮಯಕ್ಕೆ ಕೊರೊನಾ ಪುನಃ ಆವರಿಸಿಕೊಂಡಿದೆ. ಈಗ ಒಂದು ಕೆ.ಜಿ.ಗೆ ₹ 5ಕ್ಕೆ ಕೇಳ್ತಾರೆ. ಕೊಡ್ತೀವಿ ಅಂದ್ರೂ ತೋಟಕ್ಕೆ ಬಂದು ಕಟಾವು ಮಾಡುವವರಿಲ್ಲ. ತೋಟಗಳಲ್ಲಿ ದ್ರಾಕ್ಷಿ ಹಣ್ಣಾಗಿದ್ದು, ನೊಣ ಬೀಳುತ್ತಿವೆ. ಮುಂದಿನ ಒಂದು ವಾರದಲ್ಲಿ ದ್ರಾಕ್ಷಿ ಕಟಾವು ಮಾಡದೇ ಇದ್ದರೆ, ಬೆಳೆದಿರುವ ಬೆಳೆ ಪೂರ್ತಿ ನಾಶವಾಗುತ್ತದೆ. ಲಕ್ಷಾಂತರ ರೂಪಾಯಿ ಸಾಲ ಹೊತ್ತುಕೊಳ್ಳಬೇಕಾಗುತ್ತದೆ. ಈ ಬೆಳೆಯಲ್ಲಿ ಬಂಡವಾಳ ಸಿಗದಿದ್ದರೆ ಮುಂದಿನ ಬೆಳೆಗೆ ಬಂಡವಾಳ ಹಾಕಲಿಕ್ಕೆ ಕಷ್ಟವಾಗುತ್ತದೆ. ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು. ಒಂದು ಹೆಕ್ಟೇರ್‌ಗೆ ಕನಿಷ್ಠ ₹ 1 ಲಕ್ಷ ಪರಿಹಾರ ಧನ ನೀಡಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡ ಬಿ.ಕೆ. ನಾರಾಯಣಸ್ವಾಮಿ ಮಾತನಾಡಿ, ಪ್ರತಿ ಬಾರಿ ಬೆಳೆ ಬೆಳೆದಾಗಲೆಲ್ಲಾ ವ್ಯಾಪಾರಸ್ಥರ ಬಳಿ ಅಂಗಲಾಚಿಕೊಂಡು ತೋಟಗಳು ಖಾಲಿ ಮಾಡಿಸಿಕೊಳ್ಳಬೇಕು. ಬೆಳೆ ಕಟಾವು ಮಾಡಿಕೊಂಡು ಹೋದರೂ ನಿಗದಿತ ಸಮಯಕ್ಕೆ ಹಣ ಕೊಡಲ್ಲ. ಬಿಳಿ ಚೀಟಿಯಲ್ಲಿ ಲೆಕ್ಕ ಬರೆದುಕೊಟ್ಟು ಹೋಗುತ್ತಾರೆ. ಅವರು ಕೊಟ್ಟಷ್ಟು ನಾವು ಕೈಯೊಡ್ಡಬೇಕು. ಇದರಿಂದ ಬೆಳೆಗೆ ಬಂಡವಾಳ ಹಾಕಬೇಕಾದರೆ ಸಾಲ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT