ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬೆಳವಂಗಲ: ಹುಲುಕುಡಿ ಜಾತ್ರಾ ಸಂಭ್ರಮ

Last Updated 29 ಜನವರಿ 2023, 5:02 IST
ಅಕ್ಷರ ಗಾತ್ರ

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ರಥಸಪ್ತಮಿ ಅಂಗವಾಗಿ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಕ್ಕೆ ಬಾಳೆ ಹಣ್ಣು, ದವನ ಅರ್ಪಿಸಿ ಧನ್ಯತೆ ಮೆರೆದರು.

ವೀರಗಾಸೆ ಕುಣಿತ, ಕಂಸಾಳೆ ಹಾಗೂ ಡೊಳ್ಳು ಕುಣಿತ ಜಾತ್ರೆಗೆ ಮೆರುಗು ನೀಡಿದವು. ಹುಲುಕುಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇಗುಲಕ್ಕೆ ಸಾವಿರಾರು ಜನರು ಭೇಟಿ ನೀಡಿ ದರ್ಶನ ಪಡೆದರು.

ದೇವಾಲಯದಲ್ಲಿ ಹೋಮ ಹಾಗೂ ವಿಶೇಷ ಪೂಜೆ, ಶುಕ್ರವಾರ ಸಂಜೆ ಉಯ್ಯಾಲೋತ್ಸವ, ವೀರಗಾಸೆ ಕುಣಿತ, ಅಗ್ನಿಕೊಂಡ, ಅಕ್ಕಿ ಪೂಜೆ ಹಾಗೂ ದೀಪಾರಾಧನೆ ಕಾರ್ಯಕ್ರಮಗಳು ನಡೆದವು.

ಬೇಲಿಮಠ ಸಂಸ್ಥಾನದ ಪೀಠಾಧ್ಯಕ್ಷ ಶಿವರುದ್ರ ಸ್ವಾಮೀಜಿ ಮಾತನಾಡಿ, ಸೇವಾ ಕಾರ್ಯ ಮಾಡುವುದು ಸಹ ಭಗವಂತನನ್ನು ಸಾಕ್ಷಾತ್ಕಾರ ಮಾಡಿ ಕೊಳ್ಳುವ ಹಾದಿಯಾಗಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.

ಇಂದಿನ ದಿನಗಳಲ್ಲಿ ಧಾರ್ಮಿಕ ಭಾವನೆಗಳು ಕಡಿಮೆಯಾಗುತ್ತಿವೆ. ದೇವರು, ಧರ್ಮದ ಬಗ್ಗೆ ಇಂದಿನ ಯುವಪೀಳಿಗೆ ಶ್ರದ್ಧೆ ಬೆಳೆಸಿಕೊಳ್ಳಬೇಕು. ಜಾತ್ರೆ, ಉತ್ಸವಗಳು ಎಲ್ಲಾ ಜಾತಿ, ವರ್ಗದ ಜನರು ಒಂದೆಡೆ ಸೇರಲು ಉತ್ತಮ ಅವಕಾಶ ಕಲ್ಪಿಸುತ್ತವೆ. ಕ್ಷೇತ್ರದಲ್ಲಿನ ಅನ್ನದಾಸೋಹ ಕಾರ್ಯ ಶ್ಲಾಘನೀಯವಾದುದು ಎಂದರು.

ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಹುಲುಕುಡಿ ಕ್ಷೇತ್ರ ತನ್ನದೇ ಆದ ಇತಿಹಾಸ ಹೊಂದಿದ್ದು, ವಿಶಿಷ್ಟವಾಗಿದೆ. ಭಕ್ತರು ಕ್ಷೇತ್ರದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸುವ ಮೂಲಕ ಕ್ಷೇತ್ರದ ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್‌ನ ಸದಸ್ಯರು ಇದ್ದರು. ಶಾಸಕ ವೆಂಕಟರಮಣಯ್ಯ ಸಹೋದರರಿಂದ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT