ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕ ತುಮಕೂರು ಕೆರೆಯಲ್ಲಿ ನೂರಾರು ಮೀನುಗಳ ಸಾವು

Published 20 ಮೇ 2024, 5:43 IST
Last Updated 20 ಮೇ 2024, 5:43 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಸರಣಿ ಕೆರೆಗಳಲ್ಲಿ ಮೀನುಗಳ ಸಾವಿನ ಸರದಿ ಭಾನುವಾರವೂ ಮುಂದುವರೆದಿದೆ. ದೊಡ್ಡಬಳ್ಳಾಪುರದ ಚಿಕ್ಕ ತುಮಕೂರು ಕೆರೆಯಲ್ಲಿ ನೂರಾರು ಮೀನುಗಳು ಮೃತಪಟ್ಟಿದ್ದು ನೀರಿನಲ್ಲಿ ತೇಲಿಕೊಂಡು ಕೋಡಿಗೆ ಬಂದಿವೆ.

ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಚಿಕ್ಕತುಮಕೂರು ಕೆರೆಗೆ ಹೆಚ್ಚಿನ ನೀರು ಹರಿದು ಬರುತ್ತಿವೆ. ಮಳೆ ನೀರಿನೊಂದಿಗೆ ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ತ್ಯಾಜ್ಯ ನೀರು, ಒಳಚರಂಡಿಯ ಕಲುಷಿತ ನೀರಿನ ಹರಿವು ಸಹ ಹೆಚ್ಚಾಗಿರುವುದು ಮೀನುಗಳ ಸಾವಿಗೆ ಮುಖ್ಯ ಕಾರಣ ಎಂದು ಸ್ಥಳೀಯರು ಹೇಳುತ್ತಾರೆ.

ಬಾಶೆಟ್ಟಿಹಳ್ಳಿ ಕೈಗಾರಿಕೆಗಳು ಮಳೆಗಾಲದಲ್ಲಿ ತ್ಯಾಜ್ಯ ನೀರನ್ನು ಚರಂಡಿಗಳಿಗೆ ಹರಿದು ಬಿಡುತ್ತಾರೆ. ಕೈಗಾರಿಕೆಗಳ ರಾಸಾಯನಿಕ ನೀರು  ಮಳೆ ನೀರಿನೊಂದಿಗೆ ಕೆರೆಗೆ ಹರಿದು ಬಂದಿರುವುದೇ ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ಮೃತಪಡಲು ಕಾರಣ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಳೆ ಬರುವ ಸಂದರ್ಭದಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಗಸ್ತು ನಡೆಸುವ ಮೂಲಕ ರಾಸಾಯನಿಕಯುಕ್ತ ತ್ಯಾಜ್ಯ ನೀರು ಕೆರೆ ಸೇರದಂತೆ ಎಚ್ಚರ ವಹಿಸಬೇಕು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಕೆರೆಗಳು ಸೇರಿದಂತೆ ಪರಿಸರ ಕಲುಷಿತವಾಗದೇ ಸ್ವಚ್ಛವಾಗಿರಬೇಕಾದರೆ ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿರುವ ದೊಡ್ಡಬಳ್ಳಾಪುರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ತುರ್ತಾಗಿ ತಾಲ್ಲೂಕು ಕೇಂದ್ರಕ್ಕೆ ಸ್ಥಳಾಂತರ ಮಾಡಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಚಿಕ್ಕ ತುಮಕೂರು ಮತ್ತು ದೊಡ್ಡ ತುಮಕೂರು ಕೆರೆಗೆ ಹರಿದು ಬರುತ್ತಿರುವ ದೊಡ್ಡಬಳ್ಳಾಪುರ ನಗರ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಲುಷಿತ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಿಸಿದ ನಂತರವಷ್ಟೇ ಕೆರೆಗಳಿಗೆ ಬಿಡಬೇಕು ಎಂದು ಒತ್ತಾಯಿಸಿ ದಶಕಗಳಿಂದಲೂ ಸ್ಥಳೀಯ ರೈತರು ಹೋರಾಟ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT