ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ದೇವನಹಳ್ಳಿಗೆ ಪಂಚರತ್ನ: ಆಲೂರು ದುದ್ದನಹಳ್ಳಿಯಲ್ಲಿ ಎಚ್‌ಡಿಕೆ ವಾಸ್ತವ್ಯ

Last Updated 27 ನವೆಂಬರ್ 2022, 4:03 IST
ಅಕ್ಷರ ಗಾತ್ರ

ದೇವನಹಳ್ಳಿ:ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯು ನ. 28ರಂದು ತಾಲ್ಲೂಕನ್ನು ಪ್ರವೇಶಿಸಲಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಹಳ್ಳಿ ಕ್ರಾಸ್‌ನಲ್ಲಿ ಚಿಕ್ಕಬಳ್ಳಾಪುರದಿಂದ ಬರುತ್ತಿರುವ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. ತಾಲ್ಲೂಕಿನಾದ್ಯಂತ ರಥ ಸಂಚಾರ ಮಾಡಲಿದೆ. ಗ್ರಾಮೀಣ ಬದುಕಿಗೆ ಮಹತ್ವದ ಯೋಜನೆಗಳನ್ನು ಹೊತ್ತು ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ ಎಂದರು.

ಯಾತ್ರೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಲಿದ್ದು, ಹಣ ಕೊಟ್ಟು ಯಾರನ್ನು ಕರೆಯಿಸುವುದಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಗ್ರಾ.ಪಂ. ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳನ್ನು ಎಚ್‌ಡಿಕೆ ಮಾತನಾಡಿಸಲಿದ್ದಾರೆ. ಅವರ ಜನಪ್ರಿಯತೆಯಿಂದಲೇ ಸಾವಿರಾರು ಜನರು ಸೇರುತ್ತಾರೆ ಎಂದು ಹೇಳಿದರು.

ದೇವನಹಳ್ಳಿಯು ರೇಷ್ಮೆ, ಹಾಲು ಉತ್ಪಾದನೆ, ದ್ರಾಕ್ಷಿ ಕೃಷಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಜನರ ಕಷ್ಟಸುಖದ ಬಗ್ಗೆ ಅವರೇ ಭೇಟಿ ನೀಡಿ ಮಾಹಿತಿ ಪಡೆಯುವ ಸದುದ್ದೇಶದ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.

ವೈಜ್ಞಾನಿಕವಾಗಿ ತಯಾರಾದ ಯೋಜನೆ:ಶಿಕ್ಷಣ, ಆರೋಗ್ಯ, ರೈತ, ವಸತಿ, ಯುವಕರು ಹಾಗೂ ಮಹಿಳಾ ಸಬಲೀಕರಣಕ್ಕೆ ವಿಶಿಷ್ಟವಾದಂತಹ ಯೋಜನೆಗಳನ್ನು ಹೊತ್ತು ಪಂಚರತ್ನ ರಥವು ತಾಲ್ಲೂಕಿಗೆ ಬರುತ್ತಿದೆ. ನಿವೃತ್ತ ಐಎಎಸ್‌ ಅಧಿಕಾರಿಗಳು, ವಿಚಾರಶೀಲರು, ತಜ್ಞರು, ಪ್ರಗತಿಪರರೊಂದಿಗೆ ಚರ್ಚಿಸಿ ಈ ಯೋಜನೆ ರೂಪಗೊಂಡಿದೆ ಎಂದು ಹೇಳಿದರು.

ರೈತರ ಸಾಲ ಮನ್ನಾ ಮಾಡಿ ನುಡಿದಂತೆ ನಡೆದ ಕುಮಾರಸ್ವಾಮಿ ಅವರ ದೂರದೃಷ್ಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

5 ಕಡೆ ಸಾರ್ವಜನಿಕ ಸಭೆ: ಯಾತ್ರೆಗೆ ಈಗಾಗಲೇ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವನಹಳ್ಳಿಯಲ್ಲಿ ಕುಮಾರಸ್ವಾಮಿ ಸಂಚರಿಸಲಿದ್ದಾರೆ. ಆವತಿ, ಹಾರೋಹಳ್ಳಿ, ಚನ್ನರಾಯಪಟ್ಟಣ, ಬೂದಿಗೆರೆ ಹಾಗೂ ಕುಂದಾಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಆರ್‌. ಮುನೇಗೌಡ ತಿಳಿಸಿದರು.

ದೊಡ್ಡಬಳ್ಳಾಪುರದ ಗಡಿಗೆ ಹೊಂದಿಕೊಂಡಿರುವ ಆಲೂರು ದುದ್ದನಹಳ್ಳಿಯಲ್ಲಿ ಸೋಮವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅಂದು ರಾತ್ರಿ 10ಗಂಟೆಗೆ ಪ್ರಗತಿಪರ ಹಾಲು ಉತ್ಪಾದಕರೊಂದಿಗೆ ವಿಶೇಷ ಸಂವಾದ ಹಮ್ಮಿಕೊಳ್ಳಲಾಗಿದೆ. ದಲಿತರು, ಅಲ್ಪಸಂಖ್ಯಾತರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಮುಖಂಡರಾದ ಆನಂದ್‌, ದುಬೈ ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT