ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್: ತೃತೀಯ ದರ್ಜೆಗಿಳಿದ ಪ್ರಥಮ ದರ್ಜೆ ಕಾಲೇಜು

ಆನೇಕಲ್‌ನ ಏಕೈಕ ಕಾಲೇಜಿಗೆ ಸೌಕರ್ಯಗಳಿಲ್ಲ । ಕೊರತೆಗಳ ನಡುವೆ ಕಲಿಕೆ । ಮಳೆ ಬಂದರೆ ಸೋರುವ ಮೇಲ್ಛಾವಣಿ । ಅನೈತಿಕ ಚಟುವಟಿಕೆ ತಾಣ ಕಾಲೇಜು ಆವರಣ
Published 26 ಆಗಸ್ಟ್ 2024, 6:24 IST
Last Updated 26 ಆಗಸ್ಟ್ 2024, 6:24 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಆನೇಕಲ್: ಮಳೆ ಬಂದರೆ ಸೋರುವ ಕೊಠಡಿ, ಪಾಳು ಬಿದ್ದ ಶೌಚಾಲಯ, ನಿರ್ವಹಣೆ, ಭದ್ರತೆ ಇಲ್ಲದ ಮೈದಾನ...

–ಇದು ಆನೇಕಲ್‌ ತಾಲ್ಲೂಕಿನ ಏಕೈಕ ಪ್ರಥಮ ದರ್ಜೆ ಕಾಲೇಜು ಆಗಿರುವ ಡಾ.ಎಸ್‌.ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದುಸ್ಥಿತಿ.

ಕಾಲೇಜು ಪ್ರಥಮ ದರ್ಜೆ ಆದರೂ ಇಲ್ಲಿನ ಸೌಲಭ್ಯಗಳಿಂದ ತೃತೀಯ ದರ್ಜೆಗೆ ಇಳಿದಿದೆ. ಇಲ್ಲಿನ ವಿದ್ಯಾರ್ಥಿ ಕೊರತೆಗಳ ನಡುವೆ ಕಲಿಕೆಯಲ್ಲಿ ತೊಡಗಿದ್ದಾರೆ.

ಡಾ.ಎಸ್‌.ಗೋಪಾಲರಾಜು ಪ್ರಥಮ ದರ್ಜೆ ಕಾಲೇಜು 1984ರಲ್ಲಿ ಆರಂಭವಾಯಿತು. ಅನಿವಾಸಿ ಭಾರತೀಯ ಆನೇಕಲ್‌ನ ಡಾ.ಎಸ್‌.ಗೋಪಾಲರಾಜು ಅವರು ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದರಿಂದ ಕಾಲೇಜಿಗೆ ಅವರ ಹೆಸರು ನಾಮಕರಣ ಮಾಡಲಾಯಿತು. ಸಾವಿರಾರು ಮಂದಿ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ ಸೇರಿದಂತೆ ನಾಲ್ಕು ವಿಭಾಗಗಳು ಇಲ್ಲಿವೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಕಾಲೇಜಿನಲ್ಲಿ ಒಟ್ಟು 12 ಕೊಠಡಿಗಳು ಬಳಕೆ ಬರುತ್ತಿವೆ. ಅದರಲ್ಲಿ ಆರು ಕೊಠಡಿಗಳು ಸುರಿಯುತ್ತಿವೆ. ಇದರಿಂದ ಮಳೆ ಬಂದರೆ ಎರಡೇ ಕೊಠಡಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ.

ಕಟ್ಟಡ ನಿರ್ಮಾಣವಾಗಿ 40 ವರ್ಷ ಕಳೆದಿದ್ದು, ಕಟ್ಟಡ ಶಿಥಿಲವಾಗಿದೆ. ಈ ಕೊಠಡಿಗಳ ದುರಸ್ತಿಯಾಗಬೇಕು. ಕಿಟಕಿಯ ಗಾಜು ಹೊಡೆದು ಹೋಗಿದ್ದು, ವಿಪರೀತ ದೂಳು ಕೊಠಡಿಗೆ ಬರುತ್ತಿದೆ. ಒಟ್ಟಾರೆ ಕಾಲೇಜು ಕಟ್ಟಡ ದುರಸ್ತಿಗೊಳಿಸಿ ಹೈಟೆಕ್‌ ಸ್ಪರ್ಶ ನೀಡಬೇಕೆಂದು ಇಲ್ಲಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಕಾಲೇಜಿನ ಮೈದಾನದಲ್ಲಿ ಹೊಸದಾಗಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಈ ಕಟ್ಟಡಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಹೀಗಾಗಿ ಸಂಜೆ ಆದರೆ ಕುಡುಕರ ತಾಣವಾಗುತ್ತದೆ. ಅನೈತಿಕ ಚಟುವಟಿಕೆ ನಡೆಯುತ್ತಿವೆ. ಜತೆಗೆ ಶ್ವಾನಗಳ ಆವಾಸ ಸ್ಥಾನವು ಆಗಿದೆ. ಹೀಗಾಗಿ ಕಾಲೇಜಿನ ಸುತ್ತ ತಡೆಗೋಡೆ ನಿರ್ಮಿಸಬೇಕು. ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು ಎನ್ನುವುದು ವಿದ್ಯಾರ್ಥಿಗಳ ಮನವಿ.

ಕೊಠಡಿಗಳಲ್ಲಿ ಕಲಿಕೆಗೆ ತಕ್ಕಂತೆ ಸುಸಜ್ಜಿತ ಪೀಠೋಪಕರಣ ವ್ಯವಸ್ಥೆ ಇಲ್ಲ. ಹಳೆಯ ಕಾಲದ ಬ್ಲ್ಯಾಕ್‌ ಬೋರ್ಡ್‌ಗಳಿದ್ದು, ಅದರಲ್ಲಿ ಉಪನ್ಯಾಸಕರು ಬರೆದು ಪಾಠ ಮಾಡಲು ಆಗುತ್ತಿಲ್ಲ. ಆಧುನಿಕತೆಗೆ ತಕ್ಕಂತೆ ಗ್ರೀನ್ ಬೋರ್ಡ್‌ ಅಥವಾ ವೈಟ್‌ ಬೋರ್ಡ್‌ ವ್ಯವಸ್ಥೆ ಆಗಬೇಕು. ಸ್ಮಾರ್ಟ್‌ ತರಗತಿ ನಡೆಸಲು ಅಗತ್ಯ ಸೌಲಭ್ಯ ಒದಗಿಸಬೇಕೆಂದು ಉಪನ್ಯಾಸಕರ ಮನವಿ.

ಕಾಲೇಜಿಗೆ ಕಾಯಂ ಗ್ರೂಪ್‌ ಡಿ ನೌಕರರಿಲ್ಲ. ಹೀಗಾಗಿ ಸ್ವಚ್ಛತೆಯ ನಿರ್ವಹಣೆ ಸವಾಲಾಗಿದೆ. ಕಾಲೇಜಿನ ಮುಂಭಾಗದಲ್ಲಿ ಸುತ್ತಮುತ್ತಲ ಪ್ರದೇಶದ ವಾಹನ ನಿಲ್ಲಿಸಲಾಗುತ್ತದೆ. ಕಾಲೇಜಿಗೆ ತಡೆಗೋಡೆ ನಿರ್ಮಿಸಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹೊರತುಪಡಿಸಿ ಹೊರಗಿನವರು ಬರದಂತೆ ತಡೆ ಮಾಡಬೇಕು. ಇದಕ್ಕಾಗಿ ಕಾಲೇಜಿನ ಮುಂಭಾಗದಲ್ಲಿಯೇ ಭದ್ರತೆ ವ್ಯವಸ್ಥೆ ಮಾಡಬೇಕು.

ಇತ್ತ ಕಾಲೇಜು ಶಿಕ್ಷಣ ಇಲಾಖೆ ಗಮನಹರಿಸಿ ಸೌಕರ್ಯ ಕಲ್ಪಿಸಿ, ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕೆಂದು ಕಾಲೇಜು ಆಡಳಿತ ವರ್ಗದ ಮತ್ತು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಕಾಲಿಡಲು ಸಾಧ್ಯವಾಗದೇ ಪಾಳುಬಿದ್ದಿರುವ ಶೌಚಾಲಯ
ಕಾಲಿಡಲು ಸಾಧ್ಯವಾಗದೇ ಪಾಳುಬಿದ್ದಿರುವ ಶೌಚಾಲಯ
ಕಾಲೇಜಿನ ಆವರಣದಲ್ಲಿ‌ ಕಟ್ಟಡ ತ್ಯಾಜ್ಯ
ಕಾಲೇಜಿನ ಆವರಣದಲ್ಲಿ‌ ಕಟ್ಟಡ ತ್ಯಾಜ್ಯ
ಆನೇಕಲ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ತೆರೆಯುವಂತೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ನೀಡಲಾಗಿದೆ. ಕಾಲೇಜು ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು
ಬಿ.ಶಿವಣ್ಣ ಶಾಸಕ
ಕಾಲೇಜಿನಲ್ಲಿ ಭದ್ರತೆ ಇಲ್ಲ. ಹೀಗಾಗಿ ಕಾಲೇಜಿನ ಕಟ್ಟಡಗಳು ಹಾಳಾಗಿವೆ. ಭದ್ರತಾ ವ್ಯವಸ್ಥೆ ಮಾಡಬೇಕು. ತರಗತಿಗಳಿಗೆ ಪೀಠೋಪಕರಣಗಳ ವ್ಯವಸ್ಥೆ ಮಾಡಬೇಕು. ಹೊರಗಿನವರು ಕಾಲೇಜು ಒಳಗೆ ಬರುವುದನ್ನು ತಡೆಯಬೇಕು
ಹೆಸರೇಳಲು ಇಚ್ಛಿಸದ ವಿದ್ಯಾರ್ಥಿ
ಡಾ.ಎಸ್‌.ಗೋಪಾಲರಾಜು ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿದ್ದಾರೆ. ಇವರಿಗೆ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾಲೇಜಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು
ಮಮತ ಗಮನ ಮಹಿಳಾ ಒಕ್ಕೂಟ
400 ವಿದ್ಯಾರ್ಥಿಗಳಿಗೆ ನಾಲ್ಕೇ ಶೌಚಾಲಯ
ಕಾಲೇಜಿನಲ್ಲಿರುವ 400 ವಿದ್ಯಾರ್ಥಿಗಳಿಗೆ ಇರುವುದು ಐದು ಶೌಚಾಲಯ. ವಿದ್ಯಾರ್ಥಿನಿಯರಿಗೆ ಮೂರು ವಿದ್ಯಾರ್ಥಿಗಳಿಗೆ ಎರಡು ಶೌಚಾಲಯ ವ್ಯವಸ್ಥೆ ಮಾಡಲಾಗಿ‌ದೆ. ಸಿಬ್ಬಂದಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದೆ ಇದೇ ಶೌಚಾಲಯ ಬಳಸಬೇಕಿದೆ. ಸುಮಾರು 10 ವರ್ಷಗಳ ಹಿಂದೆ ₹7.8ಲಕ್ಷ ವೆಚ್ಚದಲ್ಲಿ ಕಾಲೇಜಿಗೆಂದು ನಿರ್ಮಿಸಿದ ಶೌಚಾಲಯವು ನಿರ್ವಹಣೆಯಿಲ್ಲದೇ ಪಾಳುಬಿದ್ದಿದೆ. ಶೌಚಾಲಯಕ್ಕೆ ಹೋಗಲು ಸಹ ಆಗದಂತಹ ಪರಿಸ್ಥಿತಿಯಿದೆ. ಇದನ್ನು ಸುಸಜ್ಜಿತಗೊಳಿಸಬೇಕು. ಶೌಚಾಲಯಗಳಿಗೆ ಪೈಪ್‌ ವ್ಯವಸ್ಥೆ ಮಾಡಿ ನೀರು ಬರುವಂತೆ ಮಾಡಬೇಕು. ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ತ್ವರಿತ ಕ್ರಮವಹಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಕೊರತೆ ಹಲವಾರು ಬಿಎಸ್‌ಸಿ ಕೋರ್ಸ್‌ ಆರಂಭಕ್ಕೆ ಒತ್ತಾಯ: ಕಾಲೇಜಿಗೊಂದು ಸಭಾಂಗಣ ಆಟದ ಮೈದಾನ ಗ್ರಂಥಾಲಯ ಪ್ರಯೋಗಾಲಯ ಕಾಯಂ ಬೋಧಕರು ವಿದ್ಯುತ್‌-ನೀರಿನ ವ್ಯವಸ್ಥೆಯ ಅವಶ್ಯಕತೆ ಇದೆ. ಕಾಲೇಜಿನ ಬಿಬಿಎ ಮತ್ತು ಬಿಸಿಎಗೆ ಕೋರ್ಸ್‌ಗೆ ಕಾಯಂ ಉಪನ್ಯಾಸಕರಿಲ್ಲ. ಕಾಲೇಜಿನಲ್ಲಿ ವಿಜ್ಞಾನ ವಿಭಾಗಗಳನ್ನು ತೆರೆಯಬೇಕಾಗಿದೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿಗೆ ಹೈಟೆಕ್‌ ಸೌಲಭ್ಯಗಳನ್ನು ನೀಡಿ ತಾಲ್ಲೂಕಿನ ಏಕೈಕ ಸರ್ಕಾರಿ ಕಾಲೇಜನ್ನು ಮಾದರಿ ಕಾಲೇಜನ್ನಾಗಿ ಮಾಡಲು ಸರ್ಕಾರ ಪ್ರಥಮ ಆದ್ಯತೆ ನೀಡಬೇಕು ಎನ್ನುವುದು ಆಡಳಿತ ವರ್ಗದ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT