ಶಾಲೆಗಳಲ್ಲಿ ಸಮಯಪಾಲನೆ ಕಡ್ಡಾಯವಾಗಲಿ

ಗುರುವಾರ , ಜೂಲೈ 18, 2019
27 °C
ಪ್ರೌಢಶಾಲಾ ಮುಖ್ಯಶಿಕ್ಷಕರ ಮಾಸಿಕ ಸಭೆಯನ್ನು ಉದ್ಘಾಟನೆ

ಶಾಲೆಗಳಲ್ಲಿ ಸಮಯಪಾಲನೆ ಕಡ್ಡಾಯವಾಗಲಿ

Published:
Updated:
Prajavani

ವಿಜಯಪುರ: ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಹೆಚ್ಚು ಹೊಣೆಗಾರಿಕೆ ಹೊತ್ತುಕೊಂಡು ಈ ಬಾರಿಯೂ ಉತ್ತಮ ಫಲಿತಾಂಶ ನೀಡುವಲ್ಲಿ ಮುಖ್ಯ ಶಿಕ್ಷಕರುಗಳ ಪಾತ್ರ ಮಹತ್ತರವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕರ ಮಾಸಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ ಜನರು ಇಂದು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲು ಮಾಡುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಮೇಲೆ ಅವರು ಇಟ್ಟಿರುವ ನಂಬಿಕೆ ಮತ್ತು ಹೊಣೆಗಾರಿಕೆ ಹೆಚ್ಚಾಗಿದೆ’ ಎಂದರು.

ಈ ವರ್ಷದಲ್ಲಿ ’ಟಾರ್ಗೆಟ್ 100’ ಘೋಷ ವಾಕ್ಯವನ್ನು ಇಟ್ಟುಕೊಂಡು ಮುಂದಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಬೋರ್ಡ್‌ನಿಂದ ನೀಡಿರುವ ಎಲ್ಲ ರೀತಿಯ ಮಾರ್ಗದರ್ಶನ ಅನುಸರಿಸುವ ಕಡೆಗೆ ಶಿಕ್ಷಕರು ಗಮನಹರಿಸಬೇಕು. ಶಿಕ್ಷಕರು ಸಮಯವನ್ನು ವ್ಯರ್ಥಮಾಡದೆ ಮಕ್ಕಳಿಗೆ ಕಲಿಸುವುದಕ್ಕಾಗಿ ವಿನಿಯೋಗ ಮಾಡಬೇಕು ಎಂದರು.

ಶಾಲೆಗಳಲ್ಲಿನ ಎಲ್ಲ ಮಕ್ಕಳ ಆಧಾರ್‌ ಸಂಖ್ಯೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಶಾಲೆಗಳಲ್ಲಿ ಸಮಯಪಾಲನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಮುಖ್ಯಶಿಕ್ಷಕರು ಪ್ರಾರ್ಥನೆಯ ಸಮಯಕ್ಕೆ ಹಾಜರಿರಬೇಕು. ಮಕ್ಕಳಿಗೆ ಬರವಣಿಗೆ ಕೌಶಲವನ್ನು ಹೆಚ್ಚಿಸುವ ಮೂಲಕ ಪರೀಕ್ಷೆಗಳಲ್ಲಿ ಸುಲಲಿತವಾಗಿ ಬರೆಯುವಂತೆ ನೋಡಿಕೊಳ್ಳಬೇಕು ಎಂದರು.

ಈ ಬಾರಿ 10 ನೇ ತರಗತಿ ಪರೀಕ್ಷೆಯಲ್ಲಿ  ವಿಷಯ ನಿರೂಪಣೆ ಬದಲಾಗಿದೆ. ಅದನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಮಕ್ಕಳು ಹೊಂದಾಣಿಕೆಯಾಗುವಂತೆ ನೋಡಿಕೊಳ್ಳಬೇಕು. ಅವರ ಕಲಿಕೆಯ ಸಾಮರ್ಥ್ಯ ಮತ್ತು ಕಲಿಕಾಸಕ್ತಿಯ ಕುರಿತು ಖಾತರಿ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯ ಕಡೆಗೆ ಶಿಕ್ಷಕರು ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟೇ ಕಾಳಜಿಯನ್ನು ಮುಖ್ಯಶಿಕ್ಷಕರು ವಹಿಸಿಕೊಳ್ಳಬೇಕಾಗುತ್ತದೆ. ಮಕ್ಕಳು ಕೇವಲ ಪಠ್ಯಪುಸ್ತಕಗಳಲ್ಲಿ ಕಲಿಯುವಂತಹ ಶಿಕ್ಷಣದಿಂದ ಅವರು ಪರಿಪೂರ್ಣವಾದ ಶಿಕ್ಷಣವಾಗುವುದಿಲ್ಲ, ಕ್ರೀಡೆ, ಸಾಹಿತ್ಯ, ವ್ಯಾಕರಣ, ಜಾನಪದ, ಹೀಗೆ ಹತ್ತು ಹಲವು ವಿಭಾಗಗಳಲ್ಲೂ ಅವರು ತೊಡಗಿಸಿಕೊಳ್ಳುವಂತೆ ನಾವು ನೋಡಿಕೊಳ್ಳಬೇಕು ಎಂದರು.

ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಪರಶುರಾಮ್, ಮುರಳಿ, ಮಂಜುನಾಥ್, ವಂದನಾಂಪ್ರಿಯ, ನಾಗರತ್ನಮ್ಮ, ಲಕ್ಷ್ಮೀನರಸಿಂಹಯ್ಯ, ಬಡಿಗೇರ, ರೇಖಾ, ನವೀನ್, ರಿಯಾಜ್, ಸಿ.ಆರ್.ಪಿ. ವಿಜಯಕುಮಾರ್, ಪಿ.ಎಂ. ಕೊಟ್ರೇಶ್ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !