ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಜಲವರ್ಣದ ಜಾಡು ಹಿಡಿದು...

ಲಾಕ್‌ಡೌನ್‌ನಲ್ಲಿ ಸಹೃದಯರ ಮನತಣಿಸುವ ಚಿತ್ರ ಬರೆದ ಚಿತ್ರಕಲಾ ಶಿಕ್ಷಕ ಪ್ರಕಾಶ್ ‌ಕೋಟಿ
Last Updated 23 ಮೇ 2020, 20:00 IST
ಅಕ್ಷರ ಗಾತ್ರ
ADVERTISEMENT
""

ದೊಡ್ಡಬಳ್ಳಾಪುರ: ಯಾವುದೇ ಹವ್ಯಾಸ ಇಲ್ಲದವರಿಗೆ ಲಾಕ್‌ಡೌನ್‌ ದಿನಗಳು ಘೋರ ಎನಿಸಿದ್ದು ನಿಜ. ಆದರೆ, ಚಿತ್ರ ಕಲಾವಿದ ಶಿಕ್ಷಕರೊಬ್ಬರು ಈ ಸಂದರ್ಭದಲ್ಲಿ ಯಾವುದೇ ಒತ್ತಡ, ಜಂಜಾಟಕ್ಕೆ ಒಳಗಾಗದೇ ಏಕಾಗ್ರತೆಯಿಂದ ಲ್ಯಾಂಡ್‌ಸ್ಕೇಪ್‌ ಮಾದರಿಯ ಜಲವರ್ಣದ ಚಿತ್ರಗಳನ್ನು ಬರೆದಿದ್ದಾರೆ. ಈ ಚಿತ್ರಗಳು ಸಹೃದಯರ ಮನತಣಿಸುವಂತಿವೆ.

ತಾಲ್ಲೂಕಿನ ಸಕ್ಕರೆಗೊಳ್ಳಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚಿತ್ರ ಕಲಾ ಶಿಕ್ಷಕರಾಗಿರುವ ಪ್ರಕಾಶ್ ‌ಕೋಟಿ ಹೇಳುವಂತೆ ‘ಲಾಕ್‌ಡೌನ್‌ ಜಾರಿಯಾದ ಕೆಲ ದಿನಗಳ ನಂತರ ಶಾಲೆಯ ಕೆಲ ಆಸಕ್ತ ವಿದ್ಯಾರ್ಥಿಗಳು ಕರೆ ಮಾಡಿ ಚಿತ್ರಗಳ ಬಗ್ಗೆ ಮಾಹಿತಿ ಕೇಳಿದಾಗ ಖುಷಿಗೊಂಡು ಆನ್‌ಲೈನ್‌ ಮೂಲಕವೇ ಚಿತ್ರಗಳ ಬರೆಯುವಿಕೆ ಕುರಿತಂತೆ ಮಾಹಿತಿ ನೀಡಿದೆ. ಚಿತ್ರಗಳನ್ನು ತಿದ್ದಿದೆ’ ಎಂದರು.

‘ಇದಾದ ನಂತರ ನಾನು ಮನೆಯಲ್ಲಿಯೇ ಕುಳಿತು ಸಮಯ ವ್ಯರ್ಥ ಮಾಡದೇ ಚಿತ್ರಗಳನ್ನು ಏಕೆ ಬರೆಯಬಾರದು ಎಂದುಕೊಂಡು ಬರೆಯಲು ಆರಂಭಿಸಿದೆ. ಶಾಲೆಗೆ ಹೋಗುವ ಸಂದರ್ಭದಲ್ಲಿ ಕೆಲವೊಮ್ಮೆ ಮನಸ್ಸಿನಲ್ಲಿ ಯಾವುದಾದರೂ ಒಂದು ಚಿತ್ರ ಕಲ್ಪನೆ ಮೂಡಿದರೆ ಬಿಡಿಸುವ ಸಮಯವೇ ಸಿಗುತ್ತಿರಲಿಲ್ಲ. ರಜೆ ಇದ್ದಾಗ ಮಾತ್ರ ಬರೆಯಲು ಅವಕಾಶ ಇತ್ತು. ಆದರೆ, ಲಾಕ್‌ಡೌನ್‌ ಸಂದರ್ಭದಲ್ಲಿ ಇಡೀ ದಿನ ಕುಳಿತು ಸಮಯದ ಪರಿವೆಯೇ ಇಲ್ಲದೆ ಚಿತ್ರಬಿಡಿಸಿದ್ದೇನೆ. ಇಂತಹ ಸಂದರ್ಭ ನಾನು ಚಿತ್ರಗಳನ್ನು ಬರೆಯಲು ಆರಂಭಿಸಿದಾಗಿನಿಂದಲೂ ಸಿಕ್ಕಿರಲಿಲ್ಲ’ ಎಂದು ಲಾಕ್‌ಡೌನ್‌ ಸಂದರ್ಭದ ಸಮಯವನ್ನು ಸ್ಮರಿಸಿದರು.

ಶಾಲೆಯಿಂದ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಪ್ರವಾಸ ಹೋದಾಗ ಚಿತ್ರದುರ್ಗದ ಕೋಟೆಯಲ್ಲಿ ಕಂಡಿದ್ದ ತುಲಾಭಾರದ ಸ್ಥಳ, ಹಂಪಿಯಲ್ಲಿನ ವಿವಿಧ ಕಲ್ಯಾಣಿಗಳು, ಮಲೆನಾಡು ಪ್ರದೇಶದಲ್ಲಿನ ಕಾಡಿನಲ್ಲಿ ಕಂಡಿದ್ದ ಒಂಟಿ ಮನೆಗಳು ಸದಾ ಮನಸ್ಸಿನಲ್ಲಿ ಕಾಡುತ್ತಿದ್ದವು. ಆದರೆ ಈ ಚಿತ್ರಗಳನ್ನು ಬಿಡಿಸಲು ತಪಸ್ಸಿನಂತೆ ಕುಳಿತುಕೊಳ್ಳಬೇಕಾಗಿತ್ತು. ಸಮಯದ ಕೊರತೆಯಿಂದಾಗಿ ತುಂಬಾ ವರ್ಷಗಳಿಂದ ಹಾಗೆಯೇ ಉಳಿದು ಹೋಗಿ ದ್ದವು. ಲಾಕ್‌ಡೌನ್‌ ಸಂದರ್ಭದಲ್ಲಿ ಮನಸ್ಸಿನಲ್ಲಿ ಸದಾ ಕಾಡುತ್ತಿದ್ದ ಒಂದಿಷ್ಟು ಚಿತ್ರಗಳನ್ನು ನೆಮ್ಮದಿಯಾಗಿ ಕುಳಿತು ಬರೆಯಲು ಸಾಧ್ಯವಾಗಿದೆ ಎಂದರು.

ಬಯಲು ಸೀಮೆಯ ಮನೆಗಳ ವಿನ್ಯಾಸಕ್ಕೂ ಮಲೆನಾಡಿನ ಕಾಡಿನ ಮಧ್ಯದಲ್ಲಿ ಇರುವ ಮನೆಗಳಿಗು ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿ ಈ ಮನೆಗಳ ಕುರಿತಂತೆ ಒಂದಿಷ್ಟು ಚಿತ್ರಗಳನ್ನು ಬಿಡಿಸುವ ಕನಸು ಈಗ ನನಸಾಗಿದೆ. ಇನ್ನು ಹಂಪಿ, ಚಿತ್ರದುರ್ಗದ ಕೋಟೆಗಳಲ್ಲಿನ ಸ್ಥಳಗಳ ಚಿತ್ರಗಳನ್ನು ಬರೆಯುವುದೆಂದರೆ ನನಗೆ ಅತ್ಯಂತ ಇಷ್ಟವಾದದ್ದು. ಈ ಸ್ಥಳಗಳ ಸಾಕಷ್ಟು ಚಿತ್ರಗಳನ್ನು ಈಗಾಗಲೇ ಬರೆದಿದ್ದೇನೆ. ಚಿತ್ರದುರ್ಗ, ಹಂಪಿ ಕ್ಷೇತ್ರದಲ್ಲಿನ ಐತಿಹಾಸಿಕ ಸ್ಥಳಗಳ ಕುರಿತು ಸಾವಿರಾರು ಚಿತ್ರಗಳನ್ನು, ಸಾವಿರಾರು ಕಲಾವಿದರು ಬಿಡಿಸಿದರು ಸಹ ನೋಡಿಗರಿಗೆ ಬೇಸರವೇ ಆಗದಷ್ಟು ಇದ್ದೇ ಇರುತ್ತವೆ ಎನ್ನುತ್ತಾರತೆ ಪ್ರಕಾಶ್‌ಕೋಟಿ.

ಮಲೆನಾಡು ಪ್ರದೇಶದ ಮನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT