ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಗಿಲೆಗಳ ವಿನಾಶಕ್ಕೆ ಕಾರಣವಾಗುತ್ತಿದೆ ರಾಸಾಯನಿಕ ಔಷಧ ಬಳಕೆ

ವಸಂತ ಸಮೀಪಿಸಿದರೂ ಕೇಳದ ನಿನಾದ
Last Updated 4 ಫೆಬ್ರುವರಿ 2020, 2:36 IST
ಅಕ್ಷರ ಗಾತ್ರ

ದಾಬಸ್ ಪೇಟೆ: ವಸಂತ ಮಾಸ ಸಮೀಪಿಸಿದಂತೆಯೇ ಮಾವಿನಮರದಲ್ಲಿ ಎಲೆಗಳ ಮರೆಯಲ್ಲಿ ಕುಳಿತ ಕೋಗಿಲೆಗಳ ಕುಹೂ... ಕುಹೂ.. ನಿನಾದ ಪರಿಸರದಲ್ಲಿ ಮಾರ್ದನಿಸುತ್ತದೆ. ಆದರೆ, ಮಾವಿಗೆ ರೋಗ ಬಾರದಿರಲೆಂದು ಸಿಂಪಡಿಸುವ ರಾಸಾಯನಿಕ ಔಷಧ ಈ ನಿನಾದ ಕೇಳಿಸದಂತೆ ಮಾಡುತ್ತಿದೆ. ಈ ಹಾಡು ಹಕ್ಕಿಗಳ ವಿನಾಶಕ್ಕೂ ಕಾರಣವಾಗುತ್ತಿದೆ.

ನೆಲಮಂಗಲ ತಾಲ್ಲೂಕಿನಲ್ಲಿ ಮಾವು ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ 1,259 ಎಕರೆ ಪ್ರದೇಶದಲ್ಲಿ ಮಾವಿನ ತೋಪುಗಳಿವೆ. ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ಮಾವಿನ ಮರಗಳು ಹೂಬಿಟ್ಟು, ಕಾಯಿ ಕಚ್ಚಲಿವೆ. ಕಾಯಿ ಉದುರಬಾರದು ಹಾಗೂ ಸಮೃದ್ಧ ಫಸಲು ಬರಬೇಕು ಎಂದು ಬೆಳೆಗಾರರು ರಾಸಾಯನಿಕ ಔಷಧಗಳನ್ನು ಸಿಂಪಡಿಸುತ್ತಾರೆ.

‘ಮಾವಿನ ಹೂಗಳು, ಚಿಗುರು ಹಾಗೂ ಕಾಯಿಗಳನ್ನು ತಿನ್ನುವ ಕೋಗಿಲೆ ಮತ್ತಿತರ ಹಕ್ಕಿಗಳಿಗೆ ಈ ರಾಸಾಯನಿಕಗಳು ಕಂಟಕವಾಗಿವೆ. ಮಾವಿನ ತೋಪುಗಳ ನಡುವೆ ಇತ್ತೀಚೆಗೆ ಗಂಧದ ಮರಗಳನ್ನೂ ಬೆಳೆಸಲಾಗುತ್ತದೆ. ಗಂಧದ ಹಣ್ಣನ್ನೂ ಕೋಗಿಲೆ ತಿನ್ನುತ್ತದೆ. ರೈತರು ಸಿಂಪಡಿಸುವ ರಾಸಾಯನಿಕದ ಪರಿಣಾಮ ಗಂಧದ ಮರಗಳ ಮೇಲೂ ಆಗುತ್ತದೆ. ಇದು ಒಟ್ಟಾರೆ ಕೋಗಿಲೆಗಳ ಸಂತತಿ ನಾಶಕ್ಕೆ ಕಾರಣವಾಗುತ್ತದೆ’ ಎನ್ನುತ್ತಾರೆ ಜಿಲ್ಲೆಯ ಗೌರವ ವನ್ಯಜೀವಿ ವಾರ್ಡನ್‌ ಪ್ರಸನ್ನ ಕುಮಾರ್‌.

‘ನಗರದ ಹೊರವಲಯದಲ್ಲಿ ನಾನಾ ಜಾತಿಯ ಪಕ್ಷಿಗಳಿಗೆ ಅನುಕೂಲವಾಗಿದ್ದ ಮರಗಿಡಗಳಿದ್ದವು. ಈಗ ಅರಣ್ಯ ಇಲಾಖೆ ಬೆಳೆಸುತ್ತಿರುವ ಬಹುತೇಕ ಮರಗಿಡಗಳು ಹಕ್ಕಿಗಳು ತಿನ್ನುವಂತಹ ಹಣ್ಣಿನ ಗಿಡಗಳಾಗಿಲ್ಲ. ಇದು ಕೂಡಾ ಪಕ್ಷಿಗಳ ಉಳಿವಿಗೆ ಮಾರಕವಾಗಿದೆ’ ಎಂಬುದು ಪಕ್ಷಿಪ್ರಿಯರ ಅಂಬೋಣ.

‘ಮನಬಂದಂತೆ ಔಷಧಿ ಸಿಂಪಡಿಸುವ ಪ್ರವೃತ್ತಿಗೆ ಕಡಿವಾಣ ಹಾಕುವ ಮೂಲಕ ಹಕ್ಕಿಗಳ ಸಂತತಿ ಉಳಿಸಲು ಸರ್ಕಾರ, ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸಂತತಿ ವೃದ್ಧಿಗೂ ತೊಂದರೆ’
ಮಾವಿನ ಮರಕ್ಕೂ ಕೋಗಿಲೆಗೂ ಎಲ್ಲಿಲ್ಲದ ನಂಟು. ವಸಂತ ಕಾಲದಲ್ಲಿ ಗಂಡು ಕೋಗಿಲೆ, ಸುಶ್ರಾವ್ಯವಾಗಿ ಧ್ವನಿ ಹೊಮ್ಮಿಸುವ ಮೂಲಕ ಸಂಗಾತಿಯನ್ನು ಸೆಳೆಯುತ್ತದೆ, ಸಂಗಾತಿಯೊಂದಿಗೆ ಬೆರೆಯುತ್ತದೆ. ಹೆಣ್ಣು ಕೋಗಿಲೆ ಜೂನ್, ಜುಲೈನಲ್ಲಿ ಗರ್ಭ ಧರಿಸುತ್ತದೆ. ಬಳಿಕ ಕಾಗೆಯ ಗೂಡು ಹುಡುಕಿ ಮೊಟ್ಟೆ ಇಟ್ಟು ಸಂತಾನ ವೃದ್ಧಿ ಮಾಡುತ್ತದೆ.

‘ಹಿಂದೆಲ್ಲಾ ಮಾವಿನ ಮರಗಳು ಎತ್ತರಕ್ಕೆ, ವಿಶಾಲವಾಗಿ ಬೆಳೆಯುತ್ತಿದ್ದವು. ಈಗ ತಳಿ ತಂತ್ರಜ್ಞಾನದಿಂದಾಗಿ ಮರಗಳ ಗಾತ್ರ ಕುಗ್ಗುತ್ತಿದೆ. ಇದರಿಂದ ಕೋಗಿಲೆಗಳ ಸಂತಾನಾಭಿವೃದ್ಧಿಗೂ ತೊಂದರೆಯಾಗುತ್ತಿದೆ. ಅವು ಮಾವಿನ ಮರದ ಬದಲು ಬೇರೆ ಜಾತಿಯ ಮರಗಳನ್ನು ಆಶ್ರಯಿಸಬೇಕಿದೆ‘ ಎನ್ನುತ್ತಾರೆ ಪಕ್ಷಿಪ್ರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT