ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪೆ ಗುಂಡಿಯಾಗಿರುವ ಮಾರಗೊಂಡಹಳ್ಳಿ ಕೆರೆ

ಸುಂದರ ಬಡಾವಣೆಗಳ ನಡುವೆ ಕಲುಷಿತ ಜಲಮೂಲ
Last Updated 19 ಏಪ್ರಿಲ್ 2021, 4:34 IST
ಅಕ್ಷರ ಗಾತ್ರ

ಆನೇಕಲ್: ಕೆರೆಗಳು ಪ್ರತಿ ಗ್ರಾಮಗಳ ಜೀವನಾಡಿಗಳಾಗಿದ್ದವು. ಗ್ರಾಮಸ್ಥರ ಮತ್ತು ದನ ಕರುಗಳ ನೀರಿನ ಮೂಲವಾಗಿದ್ದವು. ಆದರೆ ನಗರೀಕರಣದ ಪ್ರಭಾವದಿಂದಾಗಿ ಕೆರೆಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಗಬ್ಬುನಾರುವ ತಿಪ್ಪೆಗುಂಡಿಗಳಾಗಿವೆ. ಆನೇಕಲ್‌ ತಾಲ್ಲೂಕಿನ ಹುಲಿಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಗೊಂಡನಹಳ್ಳಿ ಕೆರೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಆನೇಕಲ್‌ ತಾಲ್ಲೂಕಿನ ಹುಲಿಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಗೊಂಡನಹಳ್ಳಿಯ ಸರ್ವೆ 119ರಲ್ಲಿ ಸುಮಾರು 19ಎಕರೆ ವಿಸ್ತೀರ್ಣದ ಕೆರೆಯಿದೆ. ಸಮೀಪದಲ್ಲಿಯೇ ಮುನೇಶ್ವರ ದೇವಾಲಯವಿದೆ. ದಶಕಗಳ ಹಿಂದೆ ಈ ಕೆರೆಯ ನೀರು ಶಿಕಾರಿಪಾಳ್ಯ, ಮಾರಗೊಂಡನಹಳ್ಳಿ ಸುತ್ತಮುತ್ತಲ ಗ್ರಾಮಗಳ ನೀರಿನ ಬೇಡಿಕೆಯನ್ನು ಈಡೇರಿಸುವ ತಾಣವಾಗಿತ್ತು. ಇಲ್ಲಿಯ ಮುನೇಶ್ವರ ದೇವಾಲಯಕ್ಕೆ ಅಭಿಷೇಕಕ್ಕೆ ಕೆರೆಯ ನೀರು ತರಲಾಗುತ್ತಿತ್ತು ಎನ್ನಲಾಗಿದೆ. ಇಂತಹ ಸ್ವಚ್ಛ ಸುಂದರ ಕೆರೆ ಇಂದು ಗಬ್ಬುನಾರುವ ಮತ್ತು ಸುತ್ತಮುತ್ತಲ ಪ್ರದೇಶದ ಕಸ, ತ್ಯಾಜ್ಯ ವಿಲೇ ಮಾಡುವ ತಿಪ್ಪೆಗುಂಡಿಯನ್ನಾಗಿ ಮಾಡಿಕೊಳ್ಳಲಾಗಿದೆ. ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಸುಮಾರು 20ಕ್ಕೂ ಹೆಚ್ಚು ಮನೆಗಳನ್ನು ಕಟ್ಟಲಾಗಿದೆ. ಕೆರೆಯ ಜಾಗದಲ್ಲಿಯೇ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಹುಲಿಮಂಗಲ ಸುತ್ತಮುತ್ತಲಿನ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಸಂಗ್ರಹಿಸುವ ಕಸವನ್ನು ಇಲ್ಲಿಯೇ ಹಾಕಲಾಗುತ್ತಿದೆ. ಕೆರೆಗೆ ಬರುತ್ತಿದ್ದ ಮಳೆಯ ನೀರಿನ ಮೂಲಗಳನ್ನು ಅಪಾರ್ಟ್‌ಮೆಂಟ್‌ಗಳು, ಬಡಾವಣೆಗಳು ತಡೆಯೊಡ್ಡಿದ್ದು ರಾಜಕಾಲುವೆಗಳನ್ನು ಮುಚ್ಚಲಾಗಿದೆ. ಕೆಲವೆಡೆ ಒತ್ತುವರಿ ಮಾಡಿಕೊಳ್ಳಲಾಗಿದೆ.

ಮಾರಗೊಂಡನಹಳ್ಳಿ ಕೆರೆಯ ಸುತ್ತಲೂ ಹಲವಾರು ಅಪಾರ್ಟ್‌ಮೆಂಟ್‌ಗಳು, ಬಡಾವಣೆಗಳು ನಿರ್ಮಾಣಗೊಂಡಿದೆ. ಕೆಲವು ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರನ್ನು ಸಂಸ್ಕರಿಸದೇ ನೇರವಾಗಿ ಕೆರೆಗೆ ಬಿಡಲಾಗುತ್ತಿದೆ.

‘ಕೆರೆಯ ಸುತ್ತಮುತ್ತಲೂ ಅಪಾರ್ಟ್‌ಮೆಂಟ್‌ಗಳು, ಬಡಾವಣೆಗಳು ಸೇರಿದಂತೆ ಸಾವಿರಾರು ಕುಟುಂಬಗಳು ವಾಸವಾಗಿದ್ದು ಕೆರೆಯ ವಾತಾವರಣದಿಂದಾಗಿ ಇಲ್ಲಿ ಜೀವಿಸುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕಲುಷಿತ ಕೆರೆಗೆ ತ್ವರಿತವಾಗಿ ಕಾಯಕಲ್ಪ ನೀಡಿ ವಾತಾವರಣವನ್ನು ಸ್ವಚ್ಛ ಸುಂದರಗೊಳಿಸಬೇಕು” ಎಂದು ಸ್ಥಳೀಯ ನಿವಾಸಿ ರಂಜನ್‌ ಅವರು ಒತ್ತಾಯಿಸಿದ್ದಾರೆ.

ಸುತ್ತಲೂ ಸುಂದರ ಮನೆಗಳು ನಿರ್ಮಾಣವಾಗಿದ್ದು ನಡುವೆ ಗಬ್ಬುನಾರುವ ಕೆರೆಯಿಂದಾಗಿ ಜನರ ಬದುಕು ಹೈರಾಣಾಗಿದೆ. ಕೆರೆಯನ್ನು ಪುನಶ್ಚೇತನಗೊಳಿಸಲು ಎರಡು ವರ್ಷಗಳಿಂದಲೂ ವಿಪ್ರೋ ಕಂಪನಿಯು ಸಿದ್ದವಿದೆ. ಆದರೆ ಕೆರೆಯ ಹದ್ದಬಸ್ತು ನಿಗದಿ ಮಾಡಿ ಒತ್ತುವರಿ ತೆರವುಗೊಳಿಸುವ ಕಾರ್ಯ ಮಾಡಿದರೆ ಕೆರೆಗೆ ಕಾಯಕಲ್ಪ ಮಾಡಲು ಸಿದ್ದವಾಗಿದ್ದಾರೆ. ಹಾಗಾಗಿ ಕಂದಾಯ ಇಲಾಖೆ ತ್ವರಿತವಾಗಿ ತೆರವುಗೊಳಿಸುವ ಮೂಲಕ ಕೆರೆಗೆ ಕಾಯಕಲ್ಪ ಮಾಡಬೇಕೆಂಬುದು ಸ್ಥಳೀಯ ಒತ್ತಾಸೆಯಾಗಿದೆ.

ಕೆರೆಗಳ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕ್ಯಾ.ಸಂತೋಷ್‌ ಕುಮಾರ್‌ ಮಾತನಾಡಿ ಮಾರಗೊಂಡನಹಳ್ಳಿ ಕೆರೆ ಅಭಿವೃದ್ಧಿಯ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ರೊಂದಿಗೆ ಚರ್ಚೆ ಮಾಡಲಾಗಿದೆ. ಕೆರೆಗೆ ಕಾಯಕಲ್ಪ ನೀಡುವ ಅವಶ್ಯಕತೆಯಿದೆ. ಇದರಿಂದ ಈ ಭಾಗದ ಅಂತರ್ಜಲ ಅಭಿವೃದ್ಧಿಯಾಗುತ್ತದೆ. ವಾತಾವರಣ ಶುದ್ಧವಾಗುತ್ತದೆ ಎಂದರು.

ಶಾಸಕ ಎಂ.ಕೃಷ್ಣಪ್ಪ, ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ ಅವರ ಗಮನಕ್ಕೆ ತರಲಾಗಿದ್ದು ಒತ್ತುವರಿ ತೆರವುಗೊಳಿಸಿದರೆ ಕೆರೆ ಅಭಿವೃದ್ಧಿಗೆ ವಿಪ್ರೋ ಕಂಪನಿಯು ಸಿಎಸ್‌ಆರ್‌ ಯೋಜನೆಯಡಿ ಕೆರೆ ಪುನಶ್ಚೇತನಗೊಳಿಸಲು ಬದ್ಧವಾಗಿದೆ ಮತ್ತು ಕೆರೆಯ ಸುತ್ತಲೂ ಬೇಲಿ ನಿರ್ಮಿಸಲು ಪಂಚಾಯತ್‌ರಾಜ್‌ ಇಲಾಖೆಯು ಸಿದ್ಧವಿದೆ. ಹಾಗಾಗಿ ಕಂದಾಯ ಇಲಾಖೆಯು ಪ್ರಥಮ ಆದ್ಯತೆ ಮೇರೆಗೆ ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ನಿಗದಿ ಮಾಡಬೇಕು
-ರಂಜನ್‌, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT