ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಬೆಳೆ ಉಳಿಸಿಕೊಳ್ಳಲು ಹೊಸ ಮಾರ್ಗ: ಅಷ್ಟಕ್ಕೂ ಏನದು ಹೊಸ ವಿಧಾನ?

ನೆಲಕ್ಕುರುಳಿದ ಫಸಲನ್ನು ಜೋಡಿಸಿ ಕಟ್ಟುವ ವಿಧಾನ, ಬೆಳೆ ರಕ್ಷಣೆಗೆ ಉತ್ತಮ ಮಾರ್ಗ
Last Updated 17 ನವೆಂಬರ್ 2019, 13:30 IST
ಅಕ್ಷರ ಗಾತ್ರ

ದೇವನಹಳ್ಳಿ: ಬಯಲು ಸೀಮೆಯ ಪ್ರಧಾನ ಆಹಾರ ಬೆಳೆಯಾಗಿರುವ ರಾಗಿ ಫಸಲನ್ನು ಕೂಡಿಸಿ ಕಟ್ಟಿದರೆ ಬೆಳೆ ನಷ್ಟ ತಪ್ಪಿಸಲು ಸಾಧ್ಯ ಎಂದು ಅರಿತ ರೈತರು ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬರಗಾಲಕ್ಕೆ ತುತ್ತಾಗಿದ್ದ ರೈತರಿಗೆ ಈ ವರ್ಷದ ಮುಂಗಾರು ಕೃಷಿ ಚಟುವಟಿಕೆ ಮಂದಗತಿಯಲ್ಲಿ ಸಾಗಿದರೂ ನಂತರ ಸಕಾಲದಲ್ಲಿ ಸುರಿದ ಮಳೆ ರೈತರ ಫಸಲಿಗೆ ವರದಾನವಾಗಿ ಪರಿಣಮಿಸಿತ್ತು. ಮತ್ತೆ ಹಿಂಗಾರು ಮಳೆಯ ಅತಂಕದಲ್ಲಿದ್ದ ರೈತರಿಗೆ ಪ್ರಸ್ತುತ ಒಣಹವೆಯಿಂದಾಗಿ ಅಶಾದಾಯಕ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಸುರಿದ ಜಡಿಮಳೆಯಿಂದಾಗಿ ಗಟ್ಟಿ ಕಾಳು ಹೊತ್ತ ರಾಗಿ ತೆನೆ ಸಾಲುಗಟ್ಟಿ ನೆಲಕಚ್ಚಿತ್ತು.

ವಾತಾವರಣದಲ್ಲಿನ ತೇವಾಂಶ ಹೆಚ್ಚಳದಿಂದ ರಾಗಿ ಕಾಳು ಮೊಳಕೆ ಬರುವ ಸಾಧ್ಯತೆ ಇರುವುದರಿಂದ ಕೆಲವು ರೈತರು ಚಿಂತನೆ ನಡೆಸಿ ತೆನೆ ಕೂಡು ಕಟ್ಟುಗಳಿಗೆ ಮೊರೆಹೋಗಿದ್ದಾರೆ. ಪರಿಣಾಮ ರಾಗಿ ತೆನೆಗೆ ಯಾವುದೇ ರೀತಿಯ ತೊಂದರೆಯಾಗದೆ ವಾತಾವರಣ ನೋಡಿ ಕಟಾವು ಮಾಡಬಹುದು ಎಂಬುದು ರೈತರ ಅಭಿಪ್ರಾಯ.

ನೆಲಕ್ಕೆ ಬಿದ್ದ ರಾಗಿತೆನೆಯ ಜೊತೆಗೆ ಪಶುಗಳಿಗೆ ಪೌಷ್ಠಿಕ ಮೇವು ಕೂಡ ಆಗಿರುವ ರಾಗಿಹುಲ್ಲು ನೆಲದಲ್ಲಿ ಬಿದ್ದು ಕೊಳೆಯಲು ಆರಂಭಿಸುತ್ತದೆ. ಗುಣಮಟ್ಟದ ಮೇವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ರಾಗಿ ತೆನೆಯಲ್ಲಿನ ಕಾಳು ಮತ್ತು ಮೇವು ಎರಡನ್ನು ಉಳಿಸಿಕೊಳ್ಳಲು ತೆನೆಕೂಡು ಕಟ್ಟು ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲ ಎನ್ನುತ್ತಾರೆ ರೈತ ಮುನಿಯಪ್ಪ.

ನೆಲದಲ್ಲಿ ಹರಡಿಕೊಂಡಿರುವ ರಾಗಿಯ ಹತ್ತಾರು ತೆನೆಯನ್ನು ರಾಗಿ ಪೈರಿನ ಗರಿಯಿಂದಲೇ ಕೂಡಿಸಿ ಕಟ್ಟಬೇಕು. ಪ್ಲಾಸ್ಟೀಕ್ ದಾರರಿಂದ ಕಟ್ಟಿದರೆ ಪಶುಗಳಿಗೆ ಮೇವು ನೀಡುವ ಸಂದರ್ಭದಲ್ಲಿ ಪಶುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎನ್ನುತ್ತಾರೆ ರೈತರು.

ಕೂಡು ಕಟ್ಟು ರಾಗಿ ಕೊಯ್ಲಿಗೂ ಸುಲಭ. ಹತ್ತಾರು ತೆನೆಗಳು ಒಂದೇ ಬಾರಿಗೆ ಕುಡುಗೋಲಿಗೆ ಸಿಗುವುದರಿಂದ ಸುಲಭ. ಜೊತೆಗೆ ಹೆಚ್ಚಿನ ಕೃಷ್ಟಿ ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ. ಅನೇಕ ಕಡೆ ರಾಗಿ ಫಸಲು ನೆಲಕ್ಕುರುಳಿದೆ ರೈತರು ಈ ಪದ್ಧತಿ ಅನುಸರಿದರೆ ಉತ್ತಮ ಎಂದು ಸಲಹೆ ನೀಡುತ್ತಾರೆ ರೈತ ರಾಜಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT