ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತೂರು ಕೆರೆ ಅಂಗಳದ ಮ್ಯಾನ್‌ಹೋಲ್ ತೆರವು: ಜಿಲ್ಲಾ ಯೋಜನಾ ನಿರ್ದೇಶಕಿ ಶಾಲಿನಿ

ದೊಡ್ಡಬಳ್ಳಾಪುರ ಜಿಲ್ಲಾ ಯೋಜನಾ ನಿರ್ದೇಶಕಿ
Published 12 ನವೆಂಬರ್ 2023, 6:32 IST
Last Updated 12 ನವೆಂಬರ್ 2023, 6:32 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮುತ್ತೂರು ಕೆರೆ ಅಂಗಳದಲ್ಲಿರುವ ಒಳಚರಂಡಿ ಮ್ಯಾನ್‌ಹೋಲ್‌ಗಳನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾ ಯೋಜನಾ ನಿರ್ದೇಶಕಿ ಶಾಲಿನಿ ತಿಳಿಸಿದರು.

ಮುತ್ತೂರು ಕೆರೆ ಸಮಸ್ಯೆಗಳ ಕುರಿತು ಆಗಸ್ಟ್ 7ರಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಸಂಬಂಧಪಟ್ಟ ಇಲಾಖೆಗಳಿಗೆ ವರದಿ ನೀಡುವಂತೆ ಲೋಕಾಯುಕ್ತ ಸೂಚಿಸಿದ ಹಿನ್ನೆಲೆ ಕೆರೆ ಆವರಣಕ್ಕೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.

ಮುತ್ತೂರು ಕೆರೆ ಒಳಗಿರುವ ಒಳಚರಂಡಿ ಮ್ಯಾನ್ ಹೋಲ್ ತೆರವುಗೊಳಿಸಿ, ಮತ್ತೆ ಕೆರೆ ಏರಿಯ ಮೇಲೆ ನಿರ್ಮಿಸುವ ಕಾರ್ಯಯೋಜನೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಕೆರೆಯ ಬಫರ್ ವಲಯದಿಂದ ಹೊರಗಡೆಗೆ ಕಾರ್ಯಯೋಜನೆ ಸಿದ್ಧಪಡಿಸಲೂ ಅವರು ಆದೇಶಿಸಿದರು.

ಕೆರೆಗಳಿಗೆ ತ್ಯಾಜ್ಯವನ್ನು ಹಾಕುವವರ ಮೇಲೆ ನಗರಸಭೆ ಕ್ರಮ ಕೈಗೊಳ್ಳುವಂತೆ ಹಾಗೂ ಕೆರೆಗಳ ಒತ್ತುವರಿ ಬಗ್ಗೆ ಕಂದಾಯ ಇಲಾಖೆ ಹಾಗೂ ನಗರಸಭೆ ಕ್ರಮ ಕೈಗೊಳ್ಳಬೇಕಿದೆ ಎಂದು ಸೂಚಿಸಿದರು.

ಮೀತಿ ಮೀರಿ ಕಲುಷಿತ:

ಈ ಬಳಿಕ ಮಾತನಾಡಿದ ನಾಗರಕೆರೆ ಜೀವವೈವಿಧ್ಯತೆ ಸಂರಕ್ಷಣಾ ಸಮಿತಿ ಚಿದಾನಂದ, ಮುತ್ತೂರು ಕೆರೆಯ ನೀರಿನ ಗುಣಮಟ್ಟ ಮೀತಿ ಮೀರಿ ಕಲುಷಿತವಾಗಿದೆ. ನಾಗರಕರೆ ಸೇರಿದಂತೆ ಕೆರೆಗಳ ಸಂರಕ್ಷಣೆಗೆ ಸ್ಥಳೀಯ ಆಡಳಿತ ಗಮನ ನೀಡಬೇಕು. ಉನ್ನತ ಅಧಿಕಾರಿಗಳು ನಿರ್ದೇಶನ ನೀಡುವುದರೊಂದಿಗೆ ತುರ್ತಾಗಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ನಿಗಾ ವಹಿಸಬೇಕಿದೆ ಎಂದು ಮನವಿ ಮಾಡಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಫೆಬ್ರವರಿಯಲ್ಲಿ ನಡೆಸಿದ ವರದಿಯ ಪ್ರಕಾರ ಮುತ್ತೂರು ಕೆರೆಯಲ್ಲಿನ ನೀರಿನ ಗುಣಮಟ್ಟ ಮಾನದಂಡಗಳ ಪ್ರಕಾರ ಎ=50, ಬಿ=500, ಸಿ=5000 ಇರಬೇಕು. ಆದರೆ ಅದು 92 ಸಾವಿರದಷ್ಟು ಮಟ್ಟಕ್ಕೆ ಕೈ ಮೀರಿ ಹೋಗಿದೆ. ಇದಕ್ಕೆ ಕೊಳಚೆ ನೀರು ಕೆರೆಗೆ ಸೇರುತ್ತಿರುವುದೇ ಕಾರಣವಾಗಿದೆ. ಮುತ್ತೂರು ಕೆರೆ, ನಾಗರಕೆರೆ ಹಾಗೂ ನಗರ ವ್ಯಾಪ್ತಿಯಲ್ಲಿ ಕಸ ಸುರಿಯುತ್ತಿರುವುದು ಹೆಚ್ಚಾಗಿದ್ದು, ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಘನ ತ್ಯಾಜ್ಯದ ನಿರ್ವಹಣೆ ಸಮಸ್ಯೆಗಳು ಹೆಚ್ಚಾಗಿವೆ ಎಂದು ತಿಳಿಸಿದರು.

2016 ರ ರಾಜ್ಯ ಸರ್ಕಾರದ ಪ್ಲಾಸ್ಟಿಕ್ ನಿಷೇಧದ ಆದೇಶವಿದ್ದರೂ ನಗರಸಭೆ ವ್ಯಾಪ್ತಿಯಲ್ಲಿ ನಿಯಂತ್ರಿಸುತ್ತಿಲ್ಲ. ಕೆರೆಗಳ ಒತ್ತುವರಿ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಲಾಗಿದೆ ಎಂದರು.

ನಗರಸಭೆ ಸದಸ್ಯ ಮಲ್ಲೇಶ್ ಮಾತನಾಡಿ, ಮ್ಯಾನ್ ಹೋಲ್‍ಗಳಿಂದ ಕೆರೆಗೆ ಕಲುಷಿತ ನೀರು ಸೇರುತ್ತಿರುವ ಅಪಾಯವಿದ್ದು, ಈ ಬಗ್ಗೆ ನಗರಸಭೆಯ ಗಮನ ಸೆಳೆಯಲಾಗಿದೆ ಎಂದರು.

ನಗರಸಭೆ ಪೌರಾಯುಕ್ತ ಕೆ.ಪರಮೇಶ್, ತಾಂತ್ರಿಕ ವಿಭಾಗದ ಎಂಜಿನಿಯರ್‌ ರಾಮೇಗೌಡ, ಪರಿಸರ ವಿಭಾಗದ ಎಂಜಿನಿಯರ್‌ ಈರಣ್ಣ, ನಾಗರಕೆರೆ ಜೀವವೈವಿಧ್ಯತೆ ಸಂರಕ್ಷಣಾ ಸಮಿತಿಯ ಏಕಾಶಿಪುರ ವೆಂಕಟರಾಜು, ಗಿರೀಶ್, ನಾಗರಾಜ್, ನವೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT