ಶನಿವಾರ, ಏಪ್ರಿಲ್ 1, 2023
32 °C
ಸರ್ಕಾರಕ್ಕೆ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಒತ್ತಾಯ

‘ಹೊಸ ಸಂಸತ್‌ ಕಟ್ಟಡಕ್ಕೆ ಅಂಬೇಡ್ಕರ್‌ ಹೆಸರಿಡಿ’: ಕೃಷ್ಣಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಪಟ್ಟಣದಲ್ಲಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆಯಿಂದ ಸಂವಿಧಾನ ಜಾರಿ ದಿನವನ್ನು ಗುರುವಾರ ಆಚರಿಸಲಾಯಿತು. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್‌ ಕೃಷ್ಣಪ್ಪ ಮಾತನಾಡಿ, ಸಂವಿಧಾನದಲ್ಲಿ ದೊರೆತಿರುವ ಅವಕಾಶಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರಕಬೇಕು. ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನವಾಗಿರುವ ಭಾರತದ ಸಂವಿಧಾನ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಮೂಲಕ ಶೋಷಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಂವಿಧಾನವು ಸಹೋದತೆ, ಸಮಗ್ರತೆ, ಏಕತೆಯ ಮಹತ್ವ ವಿವರಿಸಿದೆ
ಎಂದರು.

ಕೇಂದ್ರ ಸರ್ಕಾರ ಭಾರತದ ನೂತನ ಸಂಸತ್‌ ಕಟ್ಟಡಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಬೇಕು. ಈ ನಿಟ್ಟಿನಲ್ಲಿ ಸಂಘಟನೆಯಿಂದ ಮನವಿ ಸಲ್ಲಿಸಲಾಗುವುದು. ಅಕ್ಷರ ತಾಯಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಬೇಕು. ಇದರಿಂದ ಅವರ ಆದರ್ಶಗಳು ಇಂದಿನ ಯುವತಿಯರಿಗೆ ಸ್ಫೂರ್ತಿಯಾಗುತ್ತವೆ ಎಂದರು.

ಮತದಾನ ಅತ್ಯಂತ ಶ್ರೇಷ್ಠವಾದುದು. ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಭಾರತ ಸಂವಿಧಾನ ನೀಡಿದೆ. ಹಾಗಾಗಿ, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ನಾಯಕನನ್ನು ಪಾರದರ್ಶಕವಾಗಿ ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ಭ್ರಷ್ಟಾಚಾರ ರಹಿತವಾದ ಪಕ್ಷ ಮತ್ತು ಸರ್ಕಾರಗಳು ಇಂದಿನ ಅವಶ್ಯಕತೆಯಾಗಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಹಣ ಕೊಡುವುದಿಲ್ಲ ಮತ್ತು ಮತದಾರರು ಹಣ ಪಡೆಯುವುದಿಲ್ಲ ಎಂದು ಪ್ರಮಾಣ ಮಾಡಬೇಕು. ಆಗ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಸಮರ್ಥ ಆಡಳಿತಗಾರರು ನಮಗೆ ದೊರೆಯುತ್ತಾರೆ ಎಂದರು.

ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹಳೇಹಳ್ಳಿ ರವಿ ಮಾತನಾಡಿ, ಸಂವಿಧಾನ ಭಾರತೀಯರ ಹೆಮ್ಮೆಯಾಗಿದೆ. ಸ್ವಾತಂತ್ರ್ಯ ಮತ್ತು ಭಾವೈಕ್ಯದ ಸಂಕೇತವಾಗಿದೆ. ಸಂವಿಧಾನ ನೀಡಿರುವ ಹಕ್ಕುಗಳನ್ನು ಕೇಳುವುದರ ಜೊತೆಗೆ ಕರ್ತವ್ಯಗಳನ್ನೂ ಪಾಲಿಸುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.

ಸಂಘಟನೆಯ ತಾಲ್ಲೂಕು ಉಪಾಧ್ಯಕ್ಷ ಮುನಿರಾಜು, ಹೋಬಳಿ ಘಟಕದ ಅಧ್ಯಕ್ಷ ಸಂಪಿಗೆಹಳ್ಳಿ ಮಂಜು, ಮುಖಂಡರಾದ ಪರಶುರಾಮ್, ಶ್ರೀನಿವಾಸ್, ರಾಮಸಾಗರ ಯಲ್ಲಪ್ಪ, ರಜಿಯಾ ಬೇಗಂ, ಶಶಿಕಲಾ, ನೀಲಮ್ಮ, ಯಲ್ಲಮ್ಮ, ಐಯಮ್ಮ, ಬಸಮ್ಮ, ಮಧು, ಲಕ್ಷ್ಮೀ, ಬೂದಿಯಮ್ಮ, ಶಾರದಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು