ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ: ಅದಾಯಕ್ಕೆ ದಾರಿ ಇದ್ದರೂ ನಗರಸಭೆ ನಿರ್ಲಕ್ಷ್ಯ

ಜಾಹೀರಾತುಗಳಿಗೆ ಇಂತಿಷ್ಟು ಶುಲ್ಕ ವಿಧಿಸಬೇಕೆಂಬ ಸರ್ಕಾರದ ನಿಯಮ
ವೆಂಕಟೇಶ್ ಡಿ ಎನ್
Published : 5 ಆಗಸ್ಟ್ 2024, 4:11 IST
Last Updated : 5 ಆಗಸ್ಟ್ 2024, 4:11 IST
ಫಾಲೋ ಮಾಡಿ
Comments

ಹೊಸಕೋಟೆ: ನಗರಸಭೆ ವ್ಯಾಪ್ತಿಯಲ್ಲಿ ವೈಯಕ್ತಿಕ, ಸಾಂಸ್ಥಿಕ, ಸರ್ಕಾರಿ ಮತ್ತು ಖಾಸಗಿ ಎಲ್ಲ ರೀತಿ ಜಾಹೀರಾತುಗಳಿಗೆ ಇಂತಿಷ್ಟು ಶುಲ್ಕ ವಿಧಿಸಬೇಕೆಂಬ ಸರ್ಕಾರದ ನಿಯಮ ಇದ್ದರೂ ಸ್ಥಳೀಯ ನಗರಸಭೆ ಜಾಹೀರಾತುಗಳಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಫ್ಲೆಕ್ಸ್‌, ಬ್ಯಾನರ್ ಮತ್ತಿತರ ಪ್ರಚಾರ ಸಾಮಗ್ರಿ ಅಳವಡಿಕೆಯಿಂದ ಬರಬಹುದಾಗಿದ್ದ ಆದಾಯ ಕುಂಠಿತಗೊಂಡಿದೆ.

ಖಾಸಗಿ ಜಾಹೀರಾತು ದರ್ಬಾರ್: ನಗರಸಭೆ ವ್ಯಾಪ್ತಿಯಲ್ಲಿ ಅಳವಡಿಸುವ ಯಾವುದೇ ರೀತಿ ಜಾಹೀರಾತುಗಳಿಗೆ ಇಂತಿಷ್ಟು ಶುಲ್ಕ ಮತ್ತು ಅವಧಿ ವಿಧಿಸಿ ನಗರಸಭೆ ಅನುಮತಿ ನೀಡಬೇಕು. ಜಾಹೀರಾತಿಗಾಗಿ ಅಳವಡಿಸುವ ಫ್ಲೆಕ್ಸ್, ಬ್ಯಾನರ್‌ ಎರಡು ಅಥವಾ ಮೂರು ದಿನಗಳ ನಂತರ ಅವು ನಗರಸಭೆಯೇ ತೆರವುಗೊಳಿಸುತ್ತದೆ.

ನಗರದಲ್ಲಿ ಮುಖ್ಯವಾಗಿ ಪ್ರಮುಖ ವ್ಯಕ್ತಿಗಳ ಹುಟ್ಟಿದ ಹಬ್ಬ, ಪ್ರಶಸ್ತಿ ಸ್ವೀಕಾರ, ರಾಷ್ಟ್ರೀಯ ಮತ್ತು ನಾಡಹಬ್ಬ, ಧಾರ್ಮಿಕ ಹಬ್ಬ ಸಂದರ್ಭದಲ್ಲಿ ಹೆಚ್ಚು ಫ್ಲೆಕ್ಸ್ ಅಳವಡಿಸಲಾಗುತ್ತದೆ. ಅದರೊಂದಿಗೆ ವ್ಯಾವಹಾರಿಕ ಲಾಭಕ್ಕಾಗಿ ನಗರದಾದ್ಯಂತ ವಿವಿಧ ಖಾಸಗಿ ಸಂಸ್ಥೆಗಳು ಕೂಡ ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರಚಾರ ಪಡೆಯುತ್ತಿವೆ.

ನಿಷೇಧಿತ ಪ್ಲಾಸ್ಟಿಕ್‌ ಅಬ್ಬರ: ನಗರದಲ್ಲಿ ಅಳವಡಿಸುವ ಫ್ಲೆಕ್ಸ್‌ ನಿಷೇಧಿತ ಪ್ಲಾಸ್ಟಿಕ್‌ನಿಂದ ಮಾಡಲಾಗಿದೆ. ಅದನ್ನು ಬಳಸಿದರೆ ಕಾನೂನು ಪ್ರಕಾರ ಅಪರಾಧ ಎಂಬುದಾಗಿ ಪ್ರಚಾರ ಮಾಡಲಾಗುತ್ತದೆ. ಆದರೆ, ನಗರದಾದ್ಯಂತ ವಿವಿಧ ಕಾರ್ಯಕ್ರಮ ನೆಪದಲ್ಲಿ ಅಳವಡಿಸುವ ಫ್ಲೆಕ್ಸ್‌ಗಳಿಗೆ ಉಚಿತ ಅವಕಾಶ ಮಾಡಿಕೊಡುವುದರ ಜತೆಗೆ ಅವುಗಳನ್ನು ನಗರಸಭೆ ಸಿಬ್ಬಂದಿಯೇ ತೆರವುಗೊಳಿಸುತ್ತಿರುವುದು ವಿಪರ್ಯಾಸ.

ನೀತಿ ಸಂಹಿತೆಗೂ ಜಗ್ಗದೆ ಫ್ಲೆಕ್ಸ್ ಅಳವಡಿಕೆ: ಕೆಲ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಇದ್ದರೂ ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಬ್ಬರ ಜೋರಾಗಿಯೇ ಇದೆ. ಈಚೆಗೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಇದ್ದರೂ ನಗರದಾದ್ಯಂತ ರಾಜಕೀಯ ನಾಯಕರ ಫ್ಲೆಕ್ಸ್‌, ಬಂಟಿಂಗ್ಸ್‌ ಹೆಗ್ಗಿಲ್ಲದೆ ಅಳವಡಿಸಿದ್ದರೂ ಈ ಕುರಿತು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿದ ನಂತರ ನಗರಸಭೆ ತೆರವುಗೊಳಿಸಿತ್ತು.

ಇನ್ನು ನಗರದಾದ್ಯಂತ ನಾಯಕರು ಮತ್ತು ಕಾರ್ಯಕರ್ತರು ಅಳವಡಿಸುವ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ. ನಿಯಮದಂತೆ ಬ್ಯಾನರ್‌ ಅಳವಡಿಸಲು ಸ್ಥಳೀಯ ನಗರಸಭೆಯಿಂದ ಅಲ್ಪ ಮೊತ್ತದ ಶುಲ್ಕ ಪಾವತಿಸಿ ಅನುಮತಿ ಪಡೆಯುವುದು ಕಷ್ಟವೇನಲ್ಲ. ಆದರೆ, ಸ್ಥಳೀಯ ನಗರಸಭೆ ಅದಕ್ಕೆ ಮುಂದಾಗುತ್ತಿಲ್ಲ ಎಂಬುದು ಅಸಮಾಧಾನದ ಸಂಗತಿ.

ನಗರಸಭೆ ಪೌರಾಯುಕ್ತನಾಗಿ ಅಧಿಕಾರ ವಹಿಸಿಕೊಂಡು ಕೆಲವೇ ತಿಂಗಳು ಕಳೆದಿದೆ. ಸ್ಥಳೀಯ ಶಾಸಕ ಮತ್ತು ಸದಸ್ಯರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು

ಜಹೀರ್ ಅಬ್ಬಾಸ್ ಪೌರಾಯುಕ್ತ ನಗರಸಭೆ

ಹೈಕೋರ್ಟ್‌ ಮೊರೆ

ಸಾರ್ವಜನಿಕರ ಸ್ಥಳದಲ್ಲಿ ಪ್ಲಾಸ್ಟಿಕ್‌ ಬ್ಯಾನರ್‌ ಕಟ್ಟಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ. ಆದರೂ ಸ್ಥಳೀಯವಾಗಿ ಅಳವಡಿಸುವ ಫ್ಲೆಕ್ಸ್‌ ಬ್ಯಾನರ್‌ಗಳಿಗೆ ನಗರಸಭೆಯಿಂದ ಅನುಮತಿ ಪಡೆಯಬೇಕು. ಆದರೆ ಫೆಕ್ಸ್ ಮತ್ತು ಬ್ಯಾನರ್‌ಗಳಲ್ಲಿ ರಾಜಕಾರಣಿಗಳ ಪೋಟೊ ಇರುತ್ತದೆ ಎಂಬ ಭಯದಿಂದ ಸ್ಥಳೀಯ ಅಧಿಕಾರಿಗಳು ಭಯಪಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಈ ಕುರಿತು ಜಿಲ್ಲಾಧಿಕಾರಿಗೆ ಜಿ.ಪಂ ಸಿಇಒ ಎನ್‌ಎಚ್‌ಎಐ ಅಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಲಾಗಿದೆ. ಅಲ್ಲೂ ನ್ಯಾಯ ಸಿಗದಿದ್ದರೆ ಹೈಕೋರ್ಟ್‌ ಮೊರೆ ಹೋಗಲಾಗುವುದು. ವರದಾಪುರ ನಾಗರಾಜ್ ಮಾನವ ಹಕ್ಕುಗಳ ಹೋರಾಟಗಾರ

ಅದಾಯ ಮೂಲಕ್ಕೆ ಧಕ್ಕೆ

ನಗರದಲ್ಲಿ ಕಸ ಸೇರಿದಂತೆ ಹಲವು ಮೂಲ ಸಮಸ್ಯೆ ತಾಂಡವವಾಡುತ್ತಿದೆ. ಮುಖ್ಯವಾಗಿ ನಗರಸಭೆಗೆ ಒಂದು ಆದಾಯದ ಮೂಲವಾಗಬೇಕಿದ್ದ ಫ್ಲೆಕ್ಸ್‌ ಮತ್ತಿತರ ಜಾಹೀರಾತು ಶುಲ್ಕ ಸ್ಥಳೀಯ ನಗರಸಭೆ ನಿರ್ಲಕ್ಷ್ಯದಿಂದ ಆದಾಯದ ಮೂಲಕ್ಕೆ ಧಕ್ಕೆಯಾಗಿದೆ. ಇನ್ನಾದರೂ ಜಾಹೀರಾತು ಶುಲ್ಕ ಪಡೆದುಕೊಳ್ಳಲು ಸ್ಥಳೀಯ ನಗರಸಭೆ ಮುಂದಾಗಲಿ. ಹೆಸರು ಹೇಳಲು ಇಚ್ಚಿಸದ ನಾಗರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT