ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ | ಹನುಮ ಜಯಂತಿ ಪ್ರಸಾದ ಸೇವಿಸಿ ವೃದ್ಧೆ ಸಾವು: 36 ಜನರ ಸ್ಥಿತಿ ಗಂಭೀರ

ಪ್ರಸಾದ, ವಾಂತಿ ಪರೀಕ್ಷೆ
Published 25 ಡಿಸೆಂಬರ್ 2023, 13:04 IST
Last Updated 25 ಡಿಸೆಂಬರ್ 2023, 13:04 IST
ಅಕ್ಷರ ಗಾತ್ರ

ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ):‌ ಹನುಮ ಜಯಂತಿ ಅಂಗವಾಗಿ ಭಾನುವಾರ ದೇವಾಲಯದಲ್ಲಿ ವಿತರಿಸಿದ ಪ್ರಸಾದ ಸೇವಿಸಿದ ಸಿದ್ದಗಂಗಮ್ಮ (65) ವಾಂತಿ, ಭೇದಿಯಿಂದ ಸೋಮವಾರ ಮೃತಪಟ್ಟಿದ್ದಾರೆ. ನಗರದ ವಿವಿಧ ದೇವಾಲಯಗಳಲ್ಲಿ ವಿತರಿಸಿದ ಪ್ರಸಾದ ಸೇವಿಸಿದ 135 ಮಂದಿ ಅಸ್ವಸ್ಥರಾಗಿದ್ದು, ಆ ಪೈಕಿ 36 ಜನರ ಸ್ಥಿತಿ ಗಂಭೀರವಾಗಿದೆ.  

ಪ್ರಸಾದ ಸೇವಿಸಿ ಮನೆಗೆ ತೆರಳಿದ ಸಿದ್ದಗಂಗಮ್ಮ ಅವರಿಗೆ ವಾಂತಿ, ಭೇದಿ ಶುರುವಾಗಿತ್ತು. ತುಂಬಾ ಸುಸ್ತಾಗಿದ್ದ ಅವರನ್ನು ಭಾನುವಾರ ರಾತ್ರಿಯೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ನಗರದ ವೆಂಕಟರಮಣ, ಊರು ಬಾಗಿಲು ಆಂಜನೇಯ, ಕೋಟೆ ಆಂಜನೇಯ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಹನುಮ ಜಯಂತಿ ಪ್ರಯುಕ್ತ ಪ್ರಸಾದವಾಗಿ ನೂರಾರು ಭಕ್ತರಿಗೆ ಪುಳಿಯೊಗರೆ, ಪಾಯಸ ಮತ್ತು ಲಡ್ಡು ವಿತರಿಸಲಾಗಿತ್ತು.  

ಪ್ರಸಾದ ಸೇವಿಸಿ ಮನೆಗೆ ತೆರಳಿದ್ದ ನಂತರ ಭಾನುವಾರ ರಾತ್ರಿಯೇ ಹಲವರಿಗೆ ವಾಂತಿ, ಭೇದಿ ಆರಂಭವಾಗಿತ್ತು. ಅಸ್ವಸ್ಥರಾದ ಕೆಲ ವರು ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿ ದ್ದಾರೆ. ಚೇತರಿಸಿಕೊಂಡು ಮೂರ‍್ನಾಲ್ಕು ಮಂದಿ ಮನೆಗೆ ಮರಳಿದ್ದಾರೆ.

ಸೋಮವಾರವೂ ಆಸ್ಪತ್ರೆಗೆ ದಾಖ ಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅನಿವಾರ್ಯವಾದರೆ ನಗರದ ಅಂಬೇಡ್ಕರ್‌ ಭವನದಲ್ಲೂ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೇಲ್ನೋಟಕ್ಕೆ ವಿಷಪೂರಿತ ಆಹಾರ ಸೇವನೆಯಿಂದ ವಾಂತಿ, ಭೇದಿ ಶುರುವಾಗಿರುವ ಶಂಕೆ ಇದೆ. ಭಕ್ತರಿಗೆ ವಿತರಿಸಿದ ಪ್ರಸಾದವನ್ನು ಒಂದೇ ಕಡೆ ತಯಾರಿಸಿಲ್ಲ. ದೇವಸ್ಥಾನಗಳು ತಮ್ಮ, ತಮ್ಮ ಪ್ರಸಾದವನ್ನು ಪ್ರತ್ಯೇಕವಾಗಿ ತಯಾರಿಸಿರುವುದು ಖಚಿತವಾಗಿದೆ. ದುರುದ್ದೇಶದಿಂದ ಪ್ರಸಾದಕ್ಕೆ ವಿಷ ಬೆರೆಸಿರುವ ಶಂಕೆ ಬಲವಾಗುತ್ತಿದೆ‘ ಎಂದು ತಹಶೀಲ್ದಾರ್‌ ವಿಜಯಕುಮಾರ್‌ ತಿಳಿಸಿದ್ದಾರೆ. 

‘ಘಟನೆ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸ ಲಾಗಿದೆ. ತನಿಖೆಯ ನಂತರವಷ್ಟೇ ಸತ್ಯಾಂಶ ಬೆಳಕಿಗೆ ಬರಲಿದೆ. ಸದ್ಯ ತೀರ್ಥ, ಪ್ರಸಾದ ವಿತರಿಸದಂತೆ ತಾಲ್ಲೂಕಿನ ಎಲ್ಲ ದೇವಾಲಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.

ಸೋಮವಾರ ಬೆಳಗ್ಗೆಯಿಂದಲೇ ವಾಂತಿ, ಭೇದಿಯಿಂದ ನರಳುತ್ತಿರುವ ನೂರಾರು ಜನರು ನಿರಂತರವಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಅಸ್ವಸ್ಥಗೊಂಡವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಎಲ್ಲರನ್ನೂ ಒಳರೋಗಿಗಳಾಗಿ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟಿಎಚ್‌ಒ ಡಾ.ವೀಣಾ ತಿಳಿಸಿದರು.

ನಗರದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ಭರ್ತಿ ಯಾಗಿದ್ದು, ಕೆಲವರನ್ನು ಬೆಂಗಳೂರು, ಕೋಲಾರ ಆಸ್ಪತ್ರೆಗೆ ಕಳಿಸಲಾಗಿದೆ.

ಪ್ರಸಾದ, ವಾಂತಿ ಪರೀಕ್ಷೆ

ವಿಷಪೂರಿತ ಆಹಾರ ಸೇವನೆಯಿಂದ ಎಲ್ಲರೂ ಅಸ್ವಸ್ಥರಾಗಿರುವುದು ಮೆಲ್ನೋಟಕ್ಕೆ ಕಂಡು ಬಂದಿದೆ. ಅಸ್ವಸ್ಥರ ಮಲ ಮತ್ತು ವಾಂತಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ದೇವಾಲಯಗಳಲ್ಲಿ ನೀಡಿದ ಪ್ರಸಾದ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ವರದಿ ಬಂದ ನಂತರವಷ್ಟೇ ಸತ್ಯಾಂಶ ತಿಳಿಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲಾಗಿದೆ. ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಅಸ್ವಸ್ಥರ ಮೇಲೆ ನಿಗಾ ಇಡಲು ಇಬ್ಬರು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT