ಭಾನುವಾರ, ಫೆಬ್ರವರಿ 28, 2021
21 °C
ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ರಾಗಿ‌ ಖರೀದಿ ನೋಂದಣಿಗೆ ಮುಗಿಬಿದ್ದ ರೈತರು

ಮರುಕಳಿಸಿದ ಅವ್ಯವಸ್ಥೆ: ಆಕ್ರೋಶ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: 2020-21ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೋಂದಣಿ ಮಾಡಿಸಲು ರೈತರು ‌ಮುಗಿಬಿದ್ದ ಹಿನ್ನೆಲೆಯಲ್ಲಿ ನಗರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾಗಿ ಖರೀದಿ ಕೇಂದ್ರದ ಅವ್ಯವಸ್ಥೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ರೈತರು ಫ್ರೂಟ್‌ ಐಡಿ ಸಂಖ್ಯೆಯೊಂದಿಗೆ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿ ಖರೀದಿ ಕೇಂದ್ರಕ್ಕೆ ಯಾವ ದಿನಾಂಕದಂದು ರಾಗಿ ತರಬೇಕು ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಪಡೆಯಬೇಕು. ರಾಗಿ ಸರಬರಾಜು ಮಾಡುವ ನೋಂದಣಿಗೆ ಜ.31ರವರೆಗೆ ಅವಕಾಶ ನೀಡಲಾಗಿದೆ‌. ನಗರದ ಎಪಿಎಂಸಿ ಆವರಣದಲ್ಲಿ ತೂಬಗೆರೆ, ಕಸಬಾ ಹೋಬಳಿ ರೈತರು ಹಾಗೂ ಇತರೆ ಮೂರು ಹೋಬಳಿಗಳ ರೈತರು ಮತ್ತೊಂದು ಕಡೆಯಂತೆ ನೋಂದಣಿಗೆ ಎರಡು ಕಡೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಹೋಬಳಿ ಮಟ್ಟಕ್ಕೆ ಬರಲಿ: ತಾಲ್ಲೂಕಿನ ಸಾಸಲು ಹೋಬಳಿಯಿಂದ 28ಕಿ.ಮೀ ದೂರದ ನಗರಕ್ಕೆ ಬಂದು ರೈತರು ರಾಗಿ ಖರೀದಿಗೆ ನೋಂದಣಿ ಮಾಡಿಸಿ ಹೋಗಲು ಇಡೀ ದಿನ ಬೇಕು. ದನ, ಕರು,ಕುರಿ,ಮೇಕೆ, ತೋಟದ ಕೆಲಸ ಬಿಟ್ಟು ಬಂದು ನೋಂದಣಿಗಾಗಿ ಕಾದು ನಿಂತು ಮನೆಗೆ ಹೋಗುವಂತಾಗಿದೆ ಎಂದು ಸಾಸಲು ಹೋಬಳಿ ರಾಗಿ ಬೆಳೆಗಾರರ ಅಳಲು.

ತಾಲ್ಲೂಕಿನ ಐದು ಹೋಬಳಿಗಳಲ್ಲೂ ರೈತ ಸಂಪರ್ಕ, ನಾಡ ಕಚೇರಿಗಳು ಇವೆ. ಇಲ್ಲಿ ಸುಸಜ್ಜಿತವಾದ ಕಂಪ್ಯೂಟರ್‌ ಸೌಲಭ್ಯ, ಅಂರ್ತಜಾಲ ಸಂಪರ್ಕವೂ ಇದೆ. ಇಲ್ಲಿಯೇ ರಾಗಿ ಖರೀದಿಗೆ ನೋಂದಣಿ ಮಾಡಿಕೊಂಡು ದಿನಾಂಕ ನೀಡಬಹುದಾಗಿದೆ. ಇದರಿಂದ ಇಡೀ ತಾಲ್ಲೂಕಿನ ರೈತರು ಹೆಸರು ನೋಂದಣಿಗಾಗಿಯೇ ನಗರಕ್ಕೆ ಬಂದು ಸಾಲುಗಟ್ಟಿ ನಿಲ್ಲುವುದು ತಪ್ಪುತ್ತದೆ. ನೂಕು ನುಗ್ಗಲು ಸಹ ಉಂಟಾಗುವುದಿಲ್ಲ. ಅಲ್ಲದೆ, ಖರೀದಿ ಕೇಂದ್ರ ಎರಡು ಪಾಳಿಯಲ್ಲಿ ಕೆಲಸ ನಿರ್ವಹಿಸುವಂತೆ ವ್ಯವಸ್ಥೆ ಮಾಡಬೇಕು ಎನ್ನುವುದು ರೈತರ ಸಲಹೆ.

ಮಾಹಿತಿ ಕೇಂದ್ರ ತೆರೆಯಲಿ: ರಾಗಿ ಖರೀದಿಗೆ ಹೆಸರು ನೋಂದಣಿ ಸೇರಿದಂತೆ ಹಲವು ಗೊಂದಲುಗಳು ಇವೆ. ರೈತರ ಈ ಎಲ್ಲ ಗೊಂದಲ ಪರಿಹರಿಸಲು ಹಾಗೂ ಹೊಸದಾಗಿ ಫ್ರೂಟ್‌ ಐಡಿ ನೋಂದಣಿ ಮಾಡಿಸಲು ನಗರದ ಎಪಿಎಂಸಿಯಲ್ಲಿನ ರಾಗಿ ಖರೀದಿ ಕೇಂದ್ರದ ಸಮೀಪವೇ ಕೃಷಿ ಇಲಾಖೆಯಿಂದ ಮಾಹಿತಿ ಕೇಂದ್ರ ತೆರೆಯಬೇಕು. ಕೃಷಿ ಇಲಾಖೆ ಬರೀ ರೈತರಿಗೆ ರಾಗಿ ಬೆಳೆಯಿರಿ ಎಂದು ಸಲಹೆ ನೀಡುವ ಕೆಲಸಕ್ಕೆ ಮಾತ್ರ ಸೀಮಿತವಾಗದೆ ರಾಗಿ ಖರೀದಿಗೆ ನೆರವಾಗಬೇಕು ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹನುಮೇಗೌಡ ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು