ಶನಿವಾರ, ಜುಲೈ 24, 2021
26 °C
ವಿಜಯಪುರ: ಶಾಲಾ ಆರಂಭದ ಕುರಿತು ಶಿಕ್ಷಕ – ಪೋಷಕರ ಸಭೆ

ಮಕ್ಕಳ ಕಳುಹಿಸಲು ಒಲ್ಲದ ಪೋಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಶಾಲೆಗಳನ್ನು ತೆರೆಯುವ ಬಗ್ಗೆ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ಹೋಬಳಿಯ ನಾರಾಯಣಪುರ ಸರ್ಕಾರಿ ಶಾಲೆಯಲ್ಲಿ ಪೋಷಕರೊಂದಿಗೆ ಶಿಕ್ಷಕರು ಚರ್ಚೆ ನಡೆಸಿದರು.

‘ಕೊರೊನಾ ಸೋಂಕು ಇಷ್ಟೊಂದು ಪ್ರಬಲವಾಗಿ ಹರಡುತ್ತಿರುವುದರಿಂದ ಯಾವ ಸಮಯದಲ್ಲಾದರೂ ಮಕ್ಕಳಿಗೆ ಹರಡುವಂತಹ ಸಾಧ್ಯತೆಗಳು ಇರುವ ಕಾರಣ ನಾವು ಮಕ್ಕಳನ್ನು ಕಳುಹಿಸಲು ಭಯವಾಗುತ್ತದೆ. ಯಾವ ಮಕ್ಕಳ ಪೋಷಕರು ಎಲ್ಲೆಲ್ಲಿ ಸುತ್ತಾಡಿ ಬಂದಿರುತ್ತಾರೋ, ಗೊತ್ತಾಗುವುದಿಲ್ಲ. ಶಾಲೆಗಳಲ್ಲಿ ಮಕ್ಕಳೊಂದಿಗೆ ಅಂತರ ಕಾಪಾಡಿಕೊಳ್ಳುವುದು’ ಕಷ್ಟ.

‘ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಅವರಿಗೆ ಸ್ಯಾನಿಟೈಸರ್, ಮುಖಕ್ಕೆ ಮಾಸ್ಕ್, ಇವೆಲ್ಲಾ ಒದಗಿಸುವುದು ಕೂಡಾ ಕಷ್ಟಕರವಾಗುತ್ತದೆ. ಎಲ್ಲಾ ಕಡೆಗಳಲ್ಲಿ ಅಂತರ ಕಾಪಾಡಿಕೊಳ್ಳುವಂತೆ ಹೇಳುತ್ತಾರೆ. ಹೆಚ್ಚು ಜನ ಸೇರಬಾರದು ಎನ್ನುತ್ತಿದ್ದಾರೆ. ಕೊರೊನಾ ಸೋಂಕು ಮಕ್ಕಳಿಗೆ, ವೃದ್ಧರಿಗೆ ಬೇಗ ಬರುತ್ತಂತೆ. ಆದ್ದರಿಂದ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ರೋಗ ಪೂರ್ಣ ಪ್ರಮಾಣದಲ್ಲಿ ನಿರ್ಮೂಲನೆಯಾದ ನಂತರವೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುವುದು ಬೇಡ. ಕಲಿಕೆಯನ್ನು ಒಂದು ವರ್ಷದ ನಂತರವೂ ಕಲಿಯಬಹುದು’ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ್ ಮಾತನಾಡಿ, ‘ನಾವು ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಯಲ್ಲಿದ್ದೇವೆ. ಸುತ್ತಮುತ್ತಲಿನ ಹಳ್ಳಿಗಳಿಂದ ಮಕ್ಕಳು ಬರುತ್ತಾರೆ. ಈ ಭಾಗದಲ್ಲಿನ ಬಹಳಷ್ಟು ಮಂದಿ ರೈತರು, ತಾವು ಬೆಳೆದ ಹಣ್ಣು, ಹೂ, ತರಕಾರಿಗಳು, ಎಲ್ಲವನ್ನೂ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಬರುತ್ತಿರುತ್ತಾರೆ. ಚಿಕ್ಕಬಳ್ಳಾಪುರ ಕಂಟೈನ್‌ಮೆಂಟ್‌ ಜೋನ್‌ನಲ್ಲಿದೆ. ಯಾವಾಗ ಏನಾಗುತ್ತದೋ ಎನ್ನುವ ಭಯ ಪ್ರತಿದಿನ ಕಾಡುತ್ತಿದೆ. ಇಂತಹ ಭಯದ ವಾತಾವರಣದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲಿಕ್ಕೆ ನಮಗೆ ಇಷ್ಟವಿಲ್ಲ’ ಎಂದರು.

ಪೋಷಕರೊಬ್ಬರು ಮಾತನಾಡಿ, ‘ಯಾವುದೇ ಕಾರಣಕ್ಕೂ ನಮ್ಮ ಮಕ್ಕಳಿಗೆ ಆನ್‌ಲೈನ್‌ ಪಾಠ ಬೇಡ, ‘ಶಾಲೆಗೆ ಅವರನ್ನು ಕಳುಹಿಸಿದರೂ ಸುರಕ್ಷತಾ ಕ್ರಮಗಳನ್ನು ಹೇಗೆ ನಿಭಾಯಿಸುತ್ತೀರಿ? ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಶೌಚಾಲಯಗಳು, ಸುರಕ್ಷಿತ ಕೊಠಡಿಗಳು, ವೈದ್ಯಕೀಯ ವ್ಯವಸ್ಥೆ ನಿರ್ವಹಣೆ ನಿಮ್ಮಿಂದ ಸಾಧ್ಯವಾಗುತ್ತಾ? ಸರ್ಕಾರ ಇದನ್ನೆಲ್ಲಾ ಮಾಡಿಕೊಡುತ್ತಾ ಎಂದು ಪ್ರಶ್ನಿಸಿದರು. ನಮಗೂ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದೇನೂ ಇಲ್ಲ. ನಾವೂ ಕೂಲಿ ಮಾಡಿ ಕಷ್ಟಪಡೋದು ಅವರಿಗಾಗಿ ಅವರಿಗೆ ಏನಾದ್ರೂ ಆದರೆ ನಮ್ಮ ಗತಿಯೇನು? ಎಂದು ಆತಂಕ ವ್ಯಕ್ತಪಡಿಸಿದರು.

ನಾರಾಯಣಪುರ, ಗೊಲ್ಲಹಳ್ಳಿ, ಜಿ.ಹೊಸಹಳ್ಳಿ, ದೊಡ್ಡಮುದ್ದೇನಹಳ್ಳಿ ಗ್ರಾಮಗಳಿಂದ ಪೋಷಕರು
ಸಭೆಗೆ ಬಂದಿದ್ದರು. ಮುಖ್ಯಶಿಕ್ಷಕ ಚಂದ್ರಶೇಖರ ಹಡಪದ್, ಅಂಗನವಾಡಿ ಕಾರ್ಯಕರ್ತೆ ಕವಿತ, ಆಶಾಕಾರ್ಯಕರ್ತೆ ಲಕ್ಷ್ಮೀದೇವಿ, ಸಹಶಿಕ್ಷಕರಾದ ಪರಮೇಶಯ್ಯ, ಪಿ.ನಾಗೇಶ,
ಡಿ.ಎಂ.ಹನುಮಂತರಾಜು, ರವಿಚಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು