ಶುಕ್ರವಾರ, ಜೂನ್ 25, 2021
22 °C
2ನೇ ದಿನದ ಕರ್ಫ್ಯೂ ಯಶಸ್ವಿ: ತೀವ್ರಗೊಂಡ ಆಮ್ಲಜನಕ ಕೊರತೆ, ಬೆಡ್‌ಗಳಿಗೆ ರೋಗಿಗಳ ಪರದಾಟ

ರಸ್ತೆ, ಆಸ್ಪತ್ರೆಗಳತ್ತ ಜನರ ಸುಳಿವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕೋವಿಡ್‌ ಎರಡನೇ ಅಲೆಗೆ ಬೆಚ್ಚಿಬಿದ್ದಿರುವ ಜನತೆ ವಾರಾಂತ್ಯದ ಕರ್ಫ್ಯೂ ಭಾನುವಾರ ಅತ್ಯಂತ ಕಟ್ಟುನಿಟ್ಟಾಗಿ ಪಾಲನೆ ಮಾಡಿದರು. ನಗರ ಪ್ರದೇಶ ಸೇರಿದಂತೆ ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರದಲ್ಲೂ ಜನಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಔಷಧಿ ಅಂಗಡಿ ಹೊರತು ಪಡಿಸಿ ಉಳಿದ ಯಾವುದೇ ರೀತಿಯ ಅಂಗಡಿಗಳ ಬಾಗಿಲು ತೆರೆದಿರಲಿಲ್ಲ.

ಶನಿವಾರ ಪೊಲೀಸರು ಒಡಾಟ ನಡೆಸಿ ಕರ್ಫ್ಯೂ ಜಾರಿಯ ಬಗ್ಗೆ ತಿಳಿಸಿದ್ದರು. ಆದರೆ ಭಾನುವಾರ ಬೆಳಿಗ್ಗೆ 6ರಿಂದ 10ರವರೆಗೆ ಹಾಲು, ಹಣ್ಣು ತರಕಾರಿ, ದಿನಸಿ ಅಂಗಡಿ ಹಾಗೂ ಮಾಂಸ ಮಾರಾಟದ ಅಂಗಡಿಗಳಲ್ಲಿ ಮಾತ್ರ ವಹಿವಾಟು ನಡೆಯಿತು. 10 ಗಂಟೆ ನಂತರ ಎಲ್ಲವೂ ಬಾಗಿಲು ಬಂದ್‌ ಮಾಡುವ ಮೂಲಕ ರಸ್ತೆಗಳಲ್ಲಿ ಜನರ ಸುಳಿವೇ ಇರಲಿಲ್ಲ. ಮಾಂಸದ ಅಂಗಡಿಗಳ ಮುಂದೆ ಮಾತ್ರ 10 ಗಂಟೆಯ ನಂತರವು ಸಾಲುಗಟ್ಟಿ ನಿಂತಿದ್ದವರನ್ನು ಪೊಲೀಸರು ಮನೆಕಡೆಗೆ ಕಳುಹಿಸುವ ಮೂಲಕ ಅಂಗಡಿಗಳನ್ನು ಬಂದ್‌ ಮಾಡಿಸಿದರು. ಆಸ್ಪತ್ರೆಗಳ ಬಳಿ ಮಾತ್ರ ಜನರು ಇದ್ದದ್ದು ಕಂಡು ಬಂದಿದ್ದು ಹೊರತುಪಡಿಸಿದರೆ ಸಂಜೆಯಾದರೂ ನಗರದ ಉಳಿದ ಎಲ್ಲೂ ಜನರ ಸುಳಿದಾಟವೇ ಕಂಡು ಬರಲಿಲ್ಲ.

ವಾರಾಂತ್ಯದ ಕರ್ಫ್ಯೂ ಜಾರಿಯಿಂದಾಗಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಸ್ವಾಬ್‌ ನೀಡಲು ಜನರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು. ಪ್ರತಿದಿನ ನಗರದಲ್ಲಿನ ಎರಡೂ ಸರ್ಕಾರಿ ಆಸ್ಪತ್ರೆಗಳ ಬಳಿಯು ಸ್ವಾಬ್‌ ಟೆಸ್ಟ್‌ಗಾಗಿ ಜನರು ಸಾಲುಗಟ್ಟಿ ನಿಲ್ಲುತ್ತಿದ್ದರು. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ವಾಬ್‌ ಟೆಸ್ಟ್‌ ಸ್ಥಳದಲ್ಲಿ ಜನರೇ ಇರಲಿಲ್ಲ.

ಸರ್ಕಾರ ಮಾತ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಆಮ್ಲಜನಕದ ಕೊರತೆ ಇಲ್ಲ ಎಂದು ಹೇಳುತ್ತಿದೆ. ಆದರೆ ತಾಲ್ಲೂಕಿನ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಖಾಲಿಯಾಗಿದ್ದು ಉಸಿರಾಟದ ತುರ್ತು ಪರಿಸ್ಥಿತಿ ಇರುವ ರೋಗಿಗಳಿಗೆ ಅರ್ಧ ಗಂಟೆಗಳ ಕಾಲ ಸಹ ಹಾಕಲು ಆಮ್ಲಜನಕ ಇಲ್ಲದ ಸ್ಥಿತಿ ಎದುರಾಗಿದೆ.

ಕೊರೊನಾ ಸೋಂಕಿತ ವ್ಯಕ್ತಿಯ ಸ್ವಾಬ್‌ ಪರೀಕ್ಷಾ ವರದಿ ಬರುವವರೆಗೂ ರೋಗಿಯ ಆರೋಗ್ಯ ಎಷ್ಟೇ ಹದಗೆಟ್ಟಿದ್ದರು ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಠ ಮಟ್ಟದ ಚಿಕಿತ್ಸೆಯು ನೀಡುವುದಿಲ್ಲ. ಹೀಗಾಗಿ ತೀವ್ರ ಉಸಿರಾಟದ ತೊಂದರೆ ಇರುವವರು ಪರೀಕ್ಷಾ ವರದಿ ಬರುವವರೆಗೂ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಭಿಸುವುದು ಅನಿವಾರ್ಯವಾಗಿದೆ. ಸರ್ಕಾರಿ ಆಸ್ಪತ್ರೆಗಿಂತಲು ಖಾಸಗಿ ಆಸ್ಪತ್ರೆಗಳಲ್ಲೇ ಆಮ್ಲಜನಕದ ಬೇಡಿಕೆ ಹೆಚ್ಚಾಗಿದೆ.

ಕಾದುಕುಳಿತರು ಇಲ್ಲ: ‘ಆಸ್ಪತ್ರೆ ಆರಂಭಿಸಿದಾಗಿನಿಂದಲು ಒಂದೇ ಕಂಪನಿಯಿಂದ ಆಮ್ಲಜನಕ ತರಿಸಿಕೊಳ್ಳುತ್ತಿದ್ದೇವೆ. ಈಗ ಮುಂಗಡವಾಗಿ ಹಣ ನೀಡಿ ಸಿಲಿಂಡರ್‌ಗಳೊಂದಿಗೆ ರಾತ್ರಿ ಹಗಲು ಕಾದು ಕುಳಿತುಕೊಂಡರು ಎರಡು ದಿನಗಳಿಗೆ ಒಮ್ಮೆ ಒಂದು ಅಥವಾ ಎರಡು ಸಿಲಿಂಡರ್‌ ದೊರೆಯುವುದು ಕಷ್ಟವಾಗಿದೆ. ಪ್ರತಿ ದಿನ ಕನಿಷ್ಠ ಐದು ಆಮ್ಲಜನಕದ ಸಿಲಿಂಡರ್‌ ಅಗತ್ಯ ಏರ್ಪಟ್ಟಿದೆ ’ಎನ್ನುತ್ತಾರೆ ನಗರದ ಶ್ರೀರಾಮ ಆಸ್ಪತ್ರೆಯ ವೈದ್ಯ ಡಾ.ಎಚ್‌.ಜಿ.ವಿಜಯ್‌ಕುಮಾರ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು