ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳರ ಮೀಸಲಾತಿಗೆ ರಾಜಕೀಯ ಅಡ್ಡಿ

ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಮುಖಂಡರ ಕಳವಳ
Last Updated 1 ಫೆಬ್ರುವರಿ 2020, 14:05 IST
ಅಕ್ಷರ ಗಾತ್ರ

ದೇವನಹಳ್ಳಿ: ಶೋಷಿತರು ಸಂಘಟಿತರಾದರೆ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಕೆ.ರಮೇಶ್ ಹೇಳಿದರು.

ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ‌ಮಾತನಾಡಿದರು.

ಮಡಿವಾಳ ಸಮುದಾಯ ಪರಂಪರೆಯಿಂದ ತುಳಿತಕ್ಕೆ ಒಳಗಾದ ಸಮಾಜ. ಅಧುನಿಕತೆ ಬೆಳೆದಂತೆ ಸಮುದಾಯದ ಮೂಲ ವೃತ್ತಿಗೆ ಧಕ್ಕೆಯಾಗುತ್ತಿದೆ. ಅಲ್ಲದೆ, ಸಮುದಾಯ ಚದುರಿ ಹೋಗಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವುದರಿಂದ ಸೌಲಭ್ಯ ಮರೀಚಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಅವರ ಸಮಕಾಲೀನರಾದ ಮಾಚಿದೇವ ಸಮಾನತೆ, ಸಹಬಾಳ್ವೆ, ಸಾಮರಸ್ಯ ಬದುಕಿಗೆ ಒತ್ತು ನೀಡಿದ ಮಹಾನ್‌ ಶರಣ ಎಂದು ಅಭಿಪ್ರಾಯಪಟ್ಟರು.

ಗ್ರೇಡ್–2 ತಹಶೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಬಸವಣ್ಣ ಅವರ ಅನುಭವ ಮಂಟಪದಲ್ಲಿ ಹತ್ತು ಸಾವಿರ ಶರಣರಲ್ಲಿ ಮಡಿವಾಳ ಮಾಚಿದೇವ ಪ್ರಮುಖರು. ಸಾಮಾಜಿಕ ಕ್ರಾಂತಿ ನಡೆಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದವರಲ್ಲಿ ಪ್ರಮುಖರು ಎಂದು ಅಭಿಪ್ರಾಯಪಟ್ಟರು.

ಮಡಿವಾಳ ಮಾಚಿದೇವರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ ಮಾತನಾಡಿ, ಸತತ ಹೋರಾಟದ ಫಲವಾಗಿ ರಾಜ್ಯದಲ್ಲಿ ಮಾಚಿದೇವರ ಜಯಂತಿ ಆಚರಣೆಗೆ ಅವಕಾಶ ಸಿಕ್ಕಿದೆ. ಹಲವು ಬೇಡಿಕೆಗಳು ಇದುವರೆಗೂ ಈಡೇರಿಲ್ಲ. ಜಯಂತಿ ಆಚರಣೆಗೆ ₹69 ಲಕ್ಷ ಬಿಡುಗಡೆ ಆಗಿದೆ ಎಂದು ಮಾಹಿತಿ ನೀಡಿದರು.

ಅನ್ನಪೂರ್ಣಮ್ಮ ವರದಿ ಅನ್ವಯ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಹತ್ತು ವರ್ಷದಿಂದ ಹೋರಾಟ ನಡೆಯುತ್ತಿದೆ. ಕೆಲ ಸ್ವಾರ್ಥ ರಾಜಕಾರಣಿಗಳು ಅಡ್ಡಗಾಲು ಹಾಕಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ನೀಡಿರುವ ಭರವಸೆಯಂತೆ ಮಡಿವಾಳರ ನಿಗಮ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಸಂಘಕ್ಕೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಮಡಿವಾಳ ಸಮುದಾಯದ ಕಾಯಕ ಯಾರು ಮಾಡಲು ಸಾಧ್ಯವಿಲ್ಲ. ಅಸ್ಪೃಶ್ಯತೆ ಭಾವನೆ ದೂರಮಾಡಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರಿಗೆ ಈ ಸಮುದಾಯವನ್ನು ರಾಜಕೀಯವಾಗಿ ಮೇಲುತ್ತುವ ಬಗ್ಗೆ ಒಲವು ಇತ್ತು. ಸರ್ಕಾರ ನೀಡಲಿ, ನೀಡದೆ ಇರಲಿ 5 ವರ್ಷದೊಳಗೆ ನಿವೇಶನ ನೀಡುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ ಮುನಿರಾಜು, ಮಾಚಿದೇವರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ರಾಜಣ್ಣ, ತಾಲ್ಲೂಕು ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಚಿಕ್ಕಣ್ಣ, ಟಿ.ಎ.ಪಿ.ಎಂ.ಸಿ.ಎಸ್ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಪುರಸಭೆ ಸದಸ್ಯ ರವೀಂದ್ರ, ಬಾಲರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಮುಖಂಡ ಮುನಿನಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT