ಗುರುವಾರ , ಡಿಸೆಂಬರ್ 8, 2022
18 °C
ಹಿಪ್ಪುನೇರಳೆ ಬೆಳವಣಿಗೆಗೆ ಶೀತ ವಾತಾವರಣ ಅಡ್ಡಿ: ಸೊಪ್ಪಿನ ಬೆಲೆಯೂ ಏರಿಕೆ

ರೇಷ್ಮೆ ಹುಳು ಸಾಕಣೆಗೆ ರೈತರ ಹಿಂಜರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ (ಬೆಂ.ಗ್ರಾಮಾಂತರ):  ಮೋಡ ಮುಸುಕಿದ ಹಾಗೂ ಚಳಿಯ ವಾತಾವರಣದಿಂದ ಹಿಪ್ಪುನೇರಳೆ ಸೊಪ್ಪಿನ ಬೆಳವಣಿಗೆ ಕುಂಠಿತವಾಗುತ್ತಿದೆ.

ಈ ಕಾರಣದಿಂದ ಸೊಪ್ಪಿಗೆ ಬೇಡಿಕೆ ಹೆಚ್ಚಾಗಿದ್ದು, ರೈತರು ಹುಳು ಸಾಕಾಣಿಕೆ ಬದಲಿಗೆ ಸೊಪ್ಪು ಮಾರಾಟ ಮಾಡಿಕೊಳ್ಳಲು ನಿರ್ಧರಿಸಿದರೆ, ಖರೀದಿ ಮಾಡಿಕೊಂಡು ಹುಳು ಸಾಕಾಣಿಕೆ ಮಾಡುವ ರೈತರು ವಾತಾವರಣ ತಿಳಿಯಾಗುವ ತನಕ ಸಾಕಾಣಿಕೆ ನಿಲ್ಲಿಸಲು ಚಿಂತನೆ ಮಾಡುತ್ತಿದ್ದಾರೆ.

ಹಿಪ್ಪುನೇರಳೆಯ ಒಂದು ಮೂಟೆ ಸೊಪ್ಪಿನ ಬೆಲೆ ₹ 700ಕ್ಕೆ ಏರಿಕೆಯಾಗಿದೆ. ಸೊಪ್ಪು ಖರೀದಿ ಮಾಡಿಕೊಂಡು ರೇಷ್ಮೆ ಹುಳು ಸಾಕಾಣಿಕೆ ಮಾಡುವ ರೈತರಿಗೆ ಇದು ಹೊರೆಯಾಗುತ್ತಿದೆ. ರೈತರು ಸಾಕಾಣಿಕೆ ನಿಲ್ಲಿಸಿದರೆ ರೇಷ್ಮೆ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ನೂಲು ಬಿಚ್ಚಾಣಿಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಉತ್ತಮವಾಗಿ ಮಳೆಯಾಗಿರುವ ಕಾರಣ ಕೆರೆ, ಕುಂಟೆಗಳಲ್ಲಿ ನೀರು ಸಂಗ್ರಹಗೊಂಡಿದೆ. ಕೊಳವೆ ಬಾವಿಗಳಲ್ಲಿಯೂ ಅಂತರ್ಜಲ ಮಟ್ಟ ಏರಿಕೆಯಾಗುತ್ತಿದೆ. ಇದರಿಂದ ಸಂತಸಗೊಂಡ ರೈತರು, ತೋಟಗಳಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಹಿಪ್ಪುನೇರಳೆ ಬೆಳೆಯುತ್ತಿದ್ದಾರೆ.

‘ಚಳಿಯ ಕಾರಣದಿಂದ 40 ದಿನಗಳಿಗೆ ಕಟಾವಿಗೆ ಬರಬೇಕಾಗಿರುವ ಹಿಪ್ಪುನೇರಳೆ ಸೊಪ್ಪು 60 ದಿನಗಳಾದರೂ ಬರುತ್ತಿಲ್ಲ. ವಾತಾವರಣದಲ್ಲಿ ತೇವಾಂಶ ಜಾಸ್ತಿಯಾಗಿರುವ ಕಾರಣ ಎಲೆಗಳು ಬೆಳವಣಿಗೆಯಾಗುತ್ತಿಲ್ಲ. ತೇವದಿಂದ ಕೂಡಿರುತ್ತವೆ. ಇಂತಹ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಹಾಕಿದರೂ ಸುಣ್ಣಕಟ್ಟು ರೋಗ ಬರುವ ಸಾಧ್ಯತೆ ಜಾಸ್ತಿಯಿದೆ. ಆದ್ದರಿಂದ ಸಾಕಾಣಿಕೆದಾರರು ಹಿಂಜರಿಕೆ ಮಾಡುತ್ತಿದ್ದಾರೆ’ ಎಂದು ರೈತ ವೆಂಕಟೇಶ್ ತಿಳಿಸಿದರು.

ಸ್ವಂತವಾಗಿ ಹಿಪ್ಪುನೇರಳೆ ತೋಟ ಹೊಂದಿರುವ ಕೆಲ ರೈತರು, ರೇಷ್ಮೆಹುಳು ಸಾಕಾಣಿಕೆಯನ್ನೇ ನಂಬಿಕೊಂಡು ಕುಟುಂಬದವರೆಲ್ಲರೂ ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಮಾತ್ರ ಹುಳು ಸಾಕಾಣಿಕೆ ಮಾಡಿ ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಿದ್ದಾರೆ.

ಹುಳುಗಳಿಗೆ ಹಾಕಿದ ಹಿಪ್ಪುನೇರಳೆ ಸೊಪ್ಪಿನ ಕಡ್ಡಿಗಳು ಹಾಗೂ ಹುಳುಗಳು ಹೊರಹಾಕಿರುವ ಹಿಕ್ಕೆಯನ್ನು ಪುನಃ ಹಿಪ್ಪುನೇರಳೆ ತೋಟಗಳಿಗೆ ಹಾಕುವುದರಿಂದ ಭೂಮಿಯಲ್ಲಿ ಕೊಳೆತು ಉತ್ತಮ ಗುಣಮಟ್ಟದ ಗೊಬ್ಬರವಾಗಿ ಮಾರ್ಪಡುತ್ತದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಕೊಟ್ಟಿಗೆ ಗೊಬ್ಬರ ಕೊಡುವ ಅವಶ್ಯಕತೆ ಇರುವುದಿಲ್ಲ. ಇಂತಹ ತೋಟಗಳಲ್ಲಿ ಸೊಪ್ಪು ಕೂಡ ವೇಗವಾಗಿ ಬೆಳೆಯುತ್ತದೆ.

‘ಸೊಪ್ಪು ಖರೀದಿ ಮಾಡಿಕೊಂಡು ಬಂದು ಸಾಕಾಣಿಕೆ ಮಾಡುವವರ ಪರಿಸ್ಥಿತಿ ತುಂಬಾ ಕಷ್ಟವಾಗುತ್ತಿದೆ. ತೋಟದಲ್ಲಿ ಸೊಪ್ಪು ಖರೀದಿ ಮಾಡಿ ಕಟಾವು ಮಾಡಿದ ಕೂಡಲೇ ತೋಟದ ಮಾಲೀಕರಿಗೆ ಹಣ ಕೊಡಬೇಕು. ಬೆಳೆ ಚೆನ್ನಾಗಿ ಆಗಿ, ಮಾರುಕಟ್ಟೆಯಲ್ಲಿ ಗೂಡಿಗೆ ಉತ್ತಮ ಬೆಲೆ ಸಿಕ್ಕಿದರೆ ಪರವಾಗಿಲ್ಲ. ಇಲ್ಲವಾದರೆ ಸಾಲಗಾರರಾಗಬೇಕಾಗುತ್ತದೆ. ಭೂಮಿ ಇರುವವರಿಗೆ ಸರ್ಕಾರ ಸೌಲಭ್ಯ ನೀಡುತ್ತದೆ. ಇಲ್ಲದವರಿಗೆ ಕೊಡುವವರು ಯಾರು’ ಎಂದು ರೈತ ರಾಮಚಂದ್ರಪ್ಪ
ಪ್ರಶ್ನಿಸಿದರು.

ಚಳಿ ಮತ್ತು ಮೋಡದ ವಾತಾವರಣವಿದ್ದಾಗ ರೇಷ್ಮೆ ಹುಳುಗಳ ಆರೈಕೆ ಕೂಡ ತುಂಬಾ ಕಷ್ಟದ ಕೆಲಸ. ಸಾಕಾಣಿಕೆ ಮನೆಗಳಲ್ಲಿ ಉಷ್ಣಾಂಶ ಕಾಪಾಡುವುದು ದೊಡ್ಡ ಸವಾಲಾಗಿದೆ. ಒಂದು ವೇಳೆ ಬೆಳೆ ಕೈಕೊಟ್ಟರೆ ಹೊರೆಯನ್ನು ರೈತರೇ ಹೊರಬೇಕು. 

‘ಸಾಕಾಣಿಕೆ ಸಮಯದಲ್ಲಿ ಬೆಳೆ ನಷ್ಟವಾದರೆ ಸರ್ಕಾರ ನಮಗೆ ಪರಿಹಾರ ಕೊಡುವುದಿಲ್ಲ. ಸರ್ಕಾರ ನಮ್ಮ ನೆರವಿಗೂ ಬರಬೇಕು. ಸೊಪ್ಪು ಖರೀದಿ ಮಾಡಿ ಹುಳು ಸಾಕಾಣಿಕೆ ಮಾಡುವವರಿಗೆ ನಷ್ಟ ಪರಿಹಾರ ನೀಡಬೇಕು’ ಎಂದು ರೈತ ಆನಂದಪ್ಪ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು