ಶುಕ್ರವಾರ, ಸೆಪ್ಟೆಂಬರ್ 24, 2021
21 °C
ವಿಜಯಪುರದಲ್ಲಿ 45 ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಸ್ನೇಹ, ಸೇವಾ ಕಾರ್ಯಕ್ಕೆ ರೋಟರಿ ಸೂಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸ್ನೇಹ ಹಾಗೂ ಸೇವಾ ಕಾರ್ಯಕ್ಕೆ ರೋಟರಿ ಸೂಕ್ತ ವೇದಿಕೆ ಒದಗಿಸುತ್ತಿದ್ದು, ವಿಶ್ವದಲ್ಲಿ ಲಕ್ಷಾಂತರ ಜನರು ಕ್ಲಬ್‌ನ ಸದಸ್ಯರಾಗಿ ಸಮಾಜಕ್ಕೆ ಸೇವೆ ನೀಡುತ್ತಿದ್ದಾರೆ ಎಂದು ರೋಟರಿ ಕ್ಲಬ್‌ನ ಜಿಲ್ಲಾ ನಿಕಟಪೂರ್ವ ಗವರ್ನರ್ ಶ್ರೀಕಾಂತ್ ಛತ್ರಪತಿ ಹೇಳಿದರು.

ರೋಟರಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ 45 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

200 ದೇಶಗಳಲ್ಲಿ ಶಾಖೆ ಇರುವ ರೋಟರಿ ಪೋಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕ್ಲಬ್‌ನಲ್ಲಿ ಜಾತಿ, ಮತ, ಪಕ್ಷ, ಧರ್ಮ ರಹಿತವಾಗಿ ಸಮಾಜ ಸೇವೆಯನ್ನು ಮಾತ್ರ ಗುರಿಯಾಗಿಸಿಕೊಂಡು ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ ಎಂದರು.

ಸ್ವಚ್ಛ ಭಾರತ ನಿರ್ಮಾಣದಲ್ಲಿ ರೋಟರಿಯ ಕೊಡುಗೆ ಅಪಾರವಾಗಿದೆ. ಬದಲಾಗುತ್ತಿರುವ ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕು. ಸ್ಥಳೀಯವಾಗಿ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನ ರೋಟರಿ ಮಾಡುತ್ತಿದೆ. ಬದುಕಿದ ಜೀವನದಲ್ಲಿ ಎಷ್ಟು ಹಣ ಸಂಪತ್ತು ಗಳಿಸಿರುವುದು ಮುಖ್ಯವಲ್ಲ. ಮನುಕುಲದ ಸೇವೆ ಮಾಡುವ ಮೂಲಕ ನೆನಪಿನಲ್ಲಿ ಉಳಿಯಬೇಕಿದ್ದು, ಪರಸ್ಪರ ಸಹಕಾರದಿಂದ ಮಾತ್ರ ಸಮಾಜ ಸೇವೆ ಮಾಡಲು ಸಾಧ್ಯ ಎಂದರು.

ಜಿಲ್ಲಾ ರೋಟರಿ ಸಹಾಯಕ ಗವರ್ನರ್ ಪ್ರವೀಣ್ ನಾವಳಿ ಮಾತನಾಡಿ, ‘ನಮ್ಮ ಸಂಸ್ಕಾರ, ಆಚಾರ ವಿಚಾರಗಳನ್ನು ನಾವು ಎಂದಿಗೂ ಬಿಡಬಾರದು. ಸಮಾಜಕ್ಕೆ ನಮ್ಮ ಕೈಲಾದ ಸೇವೆ ಮಾಡಬೇಕು’ ಎಂದರು.

ಅನೇಕರಿಗೆ ಊಟ, ಕುಡಿಯುವ ನೀರಿನಂತಹ ಮೂಲಸೌಕರ್ಯಗಳು ಸಿಗುತ್ತಿಲ್ಲ. ಆಹಾರ, ಆರೋಗ್ಯ, ಶಿಕ್ಷಣ ಸವಲತ್ತುಗಳನ್ನು ಕಲ್ಪಿಸಲು ಸೇವಾಸಂಸ್ಥೆಗಳು ಮುಂದೆ ಬರಬೇಕು. ಕೈಲಾಗದವರು, ಬಡವರ ನೋವನ್ನು ನಲಿವನ್ನಾಗಿ ಬದಲಾಯಿಸುವ ಸೇವಾ ಕಾರ್ಯದಿಂದಲೇ ಮಾನಸಿಕ ತೃಪ್ತಿ ಲಭ್ಯವಾಗಲು ಸಾಧ್ಯವಾಗುತ್ತದೆ ಎಂದರು.

ರೋಟರಿ ಅಧ್ಯಕ್ಷ ಎಸ್. ಕುಮಾರಸ್ವಾಮಿ ಮಾತನಾಡಿ, ಸಂಘ ಸಂಸ್ಥೆಗಳು ದೀರ್ಘಕಾಲವೂ  ಕಾರ್ಯ ಚಟುವಟಿಕೆ ಅಭಿವೃದ್ಧಿಪಡಿಸಿಕೊಂಡು ಸಾಗುವುದು ಕಷ್ಟಸಾಧ್ಯ. ಆದರೂ 45 ವರ್ಷಗಳ ನಿರಂತರವಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರೋಟರಿಯ ಹಿಂದೆ ಸದಸ್ಯರ ಶ್ರಮ ಅಡಗಿದೆ ಎಂದರು.

45 ವರ್ಷಗಳಲ್ಲಿ ವಿಜಯಪುರ ರೋಟರಿಯು ಪಟ್ಟಣ ಮತ್ತು ಸುತ್ತಮುತ್ತಲಿನ ಜನರ ಅಭ್ಯುದಯಕ್ಕಾಗಿ ಮಾಡಿರುವ ಸೇವೆ ಅಪಾರವಾದದ್ದು,
ಭವಿಷ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸೇವಾ ಸಂಸ್ಥೆಗಳು ಸಮಾಜದ ಏಳಿಗೆಗೆ ಪೂರಕವಾಗಿ ನೆರವಾಗಬಲ್ಲವು. ಒಬ್ಬರಿಂದ ಮಾಡಲಾಗದ ಸೇವೆಯನ್ನು ಸಂಘ ಸಂಸ್ಥೆಗಳ ಮೂಲಕ ಮಾಡಲು ಸಾಧ್ಯವಿದೆ ಎಂದರು.

45 ವರ್ಷಗಳಿಂದ ರೋಟರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.

ರೋಟರಿ ಕಾರ್ಯದರ್ಶಿ ವಿ.ಎಸ್.ರವಿ, ಸಿ.ಬಸಪ್ಪ, ನಿರ್ದೇಶಕ ಎಂ.ಶಿವಪ್ರಸಾದ್, ಬಿ. ವಿನಯ್‌ಕುಮಾರ್ ಮಾತನಾಡಿದರು. ಎ.ಎನ್. ರಾಮಬಸಪ್ಪ, ಕೆ.ಸದ್ಯೋಜಾತಪ್ಪ, ಜಿ.ವೀರಭದ್ರಪ್ಪ, ಬಿ.ಪುಟ್ಟರಾಜಣ್ಣ, ಎನ್.ವಿಜಯರಾಜು, ಪಿ. ಚಂದ್ರಪ್ಪ, ಎಸ್. ಶೈಲೇಂದ್ರಕುಮಾರ್, ನಿರ್ದೇಶಕ ಎಚ್.ಎಸ್. ರುದ್ರೇಶಮೂರ್ತಿ, ಎ.ಎಂ. ಮಂಜುಳಾ, ಇನ್ನರ್‌ ವೀಲ್‌ ಕ್ಲಬ್‌ನ ಪದಾಧಿಕಾರಿಗಳು ಇದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು