ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಭಾಗದ ನಾಡುನುಡಿಯ ರಕ್ಷಣೆಗೆ ಶ್ರಮಿಸಿ

Last Updated 15 ಡಿಸೆಂಬರ್ 2019, 14:45 IST
ಅಕ್ಷರ ಗಾತ್ರ

ಆನೇಕಲ್: ‘ಗಡಿಭಾಗದಲ್ಲಿ ಕನ್ನಡ ಉಳಿಯಲು ಮತ್ತು ಬೆಳೆಯಲು ಕನ್ನಡ ಸಂಘಗಳ ಪಾತ್ರ ಪ್ರಮುಖವಾದದ್ದು. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಮತ್ತು ಗಡಿಭಾಗದಲ್ಲಿ ಕನ್ನಡ ಪರ ಸಂಘಗಳು ಸಕ್ರಿಯವಾಗಿ ತೊಡಗಿಕೊಂಡಿವೆ’ ಎಂದು ಡಾ.ರಾಜಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದರು.

ತಾಲ್ಲೂಕಿನ ಅತ್ತಿಬೆಲೆಯಲ್ಲಿ ಕನ್ನಡ ಜಾಗೃತಿ ವೇದಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ಕಲಿಗಳ ಝೇಂಕಾರ ಮತ್ತು ಕಾಲ್ನಡಿಗೆ ಜಾಥಾ ಉದ್ಘಾಟಿಸಿಅವರು ಮಾತನಾಡಿದರು.

‘ನಾಡಿನ ನೆಲ, ಜಲ, ಭಾಷೆ ವಿಚಾರದಲ್ಲಿ ನೆರೆ ರಾಜ್ಯಗಳಿಂದ ಧಕ್ಕೆ ಉಂಟಾದ ಸಂದರ್ಭದಲ್ಲಿ ಪ್ರಥಮವಾಗಿ ದನಿ ಎತ್ತುವ ಕಾರ್ಯವನ್ನು ಕನ್ನಡ ಜಾಗೃತಿ ವೇದಿಕೆ ಮಾಡುತ್ತಿದೆ. ಗಡಿಭಾಗದಲ್ಲಿ ಕನ್ನಡಿಗರನ್ನು ಸಂಘಟಿಸಿ ಹೋರಾಟ ಮಾಡುವ ಮೂಲಕ ನಾಡಿನ ಪರವಾಗಿ ಸದಾ ಕೆಲಸ ಮಾಡುತ್ತಿದೆ. ಗಡಿಭಾಗದಲ್ಲಿ ತಮಿಳು, ತೆಲುಗು ಭಾಷೆಯ ಪ್ರಭಾವದ ನಡುವೆಯೂ ಕನ್ನಡದ ಅಸ್ಮಿತೆಯನ್ನು ಕಾಪಾಡುವಲ್ಲಿ ಕನ್ನಡ ಸಂಘಗಳ ಕೊಡುಗೆ ಸ್ಮರಣೀಯ’ ಎಂದರು.

ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ‘ಕನ್ನಡ ಭಾಷೆ ಅತ್ಯಂತ ಪ್ರಾಚೀನವಾದ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ ಜಾಗೃತಿ ವೇದಿಕೆಯು ಕಾವೇರಿ ನೀರು ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ದನಿ ಎತ್ತಿದೆ. ಗಡಿ ಭಾಗದಲ್ಲಿ ಕನ್ನಡಿಗರನ್ನು ಸಂಘಟಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್‌ಗೆ ಮಾತ್ರ ಸೀಮಿತವಾಗದೇ ಕನ್ನಡ ಸಾಹಿತ್ಯ, ಭಾಷೆ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಸುವ ಮೂಲಕ ಕನ್ನಡ ಜಾಗೃತಿ ಮೂಡಿಸಬೇಕು’ ಎಂದರು.

ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಶಿವಣ್ಣ ಮಾತನಾಡಿ ‘ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಸಬೇಕು. ಈ ದಿಸೆಯಲ್ಲಿ ಗ್ರಂಥಾಲಯ, ಗಡಿಭಾಗದಲ್ಲಿ ಕನ್ನಡ ಭವನ ಘಟಕ ನಿರ್ಮಿಸುವ ಮೂಲಕ ಗಡಿಯಲ್ಲಿ ಕನ್ನಡ ಚಟುವಟಿಕೆಗಳು ನಿರಂತರವಾಗಿ ನಡೆಯಲು ಕಾರ್ಯಕ್ರಮಗಳನ್ನು ರೂಪಿಸುವ ಅವಶ್ಯಕತೆಯಿದೆ’ ಎಂದರು.

ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಮಂಜುನಾಥ ದೇವ ಮಾತನಾಡಿ, ‘25 ವರ್ಷಗಳಿಂದಲೂ ಗಡಿಯಲ್ಲಿ ಕನ್ನಡ ಸಂಘಗಳನ್ನು ಸಂಘಟಿಸಿ ಕೆಲಸ ಮಾಡಲಾಗುತ್ತಿದೆ. ತಮಿಳುನಾಡಿನ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೀಡಲು ಶ್ರಮಿಸಲಾಗಿದೆ. ಜಾಗೃತಿ ವೇದಿಕೆಯ ಮೂಲಕ ಶಿಕ್ಷಕರ ವೇತನ ನೀಡಲಾಗಿದೆ. ಶಾಲೆಗಳಿಗೆ ಕನ್ನಡ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ನೀಡಲಾಗಿದೆ. ಆನೇಕಲ್‌ಗೆ ಕಾವೇರಿ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು’ ಎಂದರು.

ಕನ್ನಡ ಸೇನೆ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್‌.ಕುಮಾರ್, ಮುಖಂಡರಾದ ಆರ್‌.ಕೆ.ರಮೇಶ್‌, ಎಂ.ಬಾಬು, ಪಟಾಫಟ್‌ ನಾಗರಾಜು, ಪಟಾಪಟ್‌ ರವಿ, ಗೌರೀಶ್‌, ಕೋದಂಡ ಮೂರ್ತಿ, ಕೆ.ನಾಗರಾಜ್‌, ಗೋಪಾಲ್‌, ಎಸ್‌.ರವಿ, ಮುನಿರಾಜು, ಮಹಾನ್‌, ಮಧು, ಮಂಜು ಹಾಜರಿದ್ದರು.

ಗಡಿಗೋಪುರದಿಂದ ಅತ್ತಿಬೆಲೆಯ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ವಿದ್ಯಾರ್ಥಿಗಳು, ಮುಖಂಡರು ಕಾಲ್ನಡಿಗೆ ಜಾಥಾ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT