ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿಗಾಗಿ ಶಾಸಕರಿಗೆ ಮುತ್ತಿಗೆ

ಅರ್ಹರಿಗೆ ನಿವೇಶನ ಹಂಚಿಕೆ: ನಿಸರ್ಗ ನಾರಾಯಣಸ್ವಾಮಿ ಭರವಸೆ
Last Updated 25 ನವೆಂಬರ್ 2022, 4:12 IST
ಅಕ್ಷರ ಗಾತ್ರ

ವಿಜಯಪುರ (ಬೆಂ.ಗ್ರಾಮಾಂತರ): ‘ವಾಸಿಸಲು ಯೋಗ್ಯ ಮನೆಗಳಿಲ್ಲ. ಹೊಸದಾಗಿ ಮನೆ ಕಟ್ಟಿಕೊಳ್ಳೋಣವೆಂದರೆ ಜಾಗವಿಲ್ಲ. ಗ್ರಾಮದಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಸುಸಜ್ಜಿತ ಚರಂಡಿ ವ್ಯವಸ್ಥೆಯೂ ಇಲ್ಲ. ಕುಡಿಯಲು ನೀರು ಬರಲ್ಲ. ಚುನಾವಣೆಗಳು ಬಂದಾಗ ಬರುತ್ತೀರಿ. ಮುಗಿದ ಕೂಡಲೇ ನಾವು ಹೇಗಿದ್ದೇವೆ ಎಂದು ಕೇಳುವುದಿಲ್ಲ...’

–ಇದು ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಪುರ ಗ್ರಾಮದ ಮಹಿಳೆಯರು ತರಾಟೆಗೆ ತೆಗೆದುಕೊಂಡ ಪರಿ.

ಧರ್ಮಪುರದಲ್ಲಿ ಗುರುವಾರ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಶಾಸಕರು ಬಂದಿದ್ದ ಸಮಯದಲ್ಲಿ ಮುತ್ತಿಗೆ ಹಾಕಿದ್ದ ಮಹಿಳೆಯರು ಹಾಗೂ ಗ್ರಾಮಸ್ಥರು, ‘ನಮ್ಮೂರಿನ ಕಾಲೊನಿಯಲ್ಲಿ ಸ್ವಚ್ಛತೆ ಕಾಪಾಡುವವರು ಇಲ್ಲ. 40 ವರ್ಷದ ಹಿಂದೆ ನಿರ್ಮಿಸಿರುವ ಚರಂಡಿಗಳು ಹದಗೆಟ್ಟಿವೆ. ಹೊಸದಾಗಿ ಚರಂಡಿಗಳನ್ನು ನಿರ್ಮಿಸಿಲ್ಲ’ ಎಂದು ದೂರಿದರು.

ಇಂದಿಗೂ ಸಿಸ್ಟನ್ ಮೂಲಕ ನೀರು ಹಿಡಿಯುತ್ತಿದ್ದೇವೆ. ಕೊಳಾಯಿಗಳನ್ನು ಹಾಕಿಸಿಕೊಟ್ಟಿಲ್ಲ. ನಾವು ಹೊಸದಾಗಿ ಮನೆ ಕಟ್ಟಿಕೊಳ್ಳಲು ಜಾಗವಿಲ್ಲ. ಗ್ರಾಮ ಪಂಚಾಯಿತಿಯಿಂದ ಜಾಗ ಕೊಡಿ ಎಂದರೆ ಗ್ರಾಮದಲ್ಲಿ ಸರ್ಕಾರಿ ಜಮೀನಿಲ್ಲ ಎನ್ನುತ್ತಾರೆ. ನಾವು ಎಲ್ಲಿಗೆ ಹೋಗಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳ ಜಮೀನು ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಲಜೀವನ ಮಿಷನ್ ಯೋಜನೆಯಡಿ ಪಂಚಾಯಿತಿಯಿಂದ ಪ್ರತಿಯೊಂದು ಮನೆಗೂ ಕೊಳಾಯಿ ಅಳವಡಿಸಲಾಗುತ್ತದೆ. ನಿಮಗೆ ಅಗತ್ಯವಿರುವಷ್ಟು ನೀರು ಪಡೆಯಬಹುದು’ ಎಂದರು.

ಸರ್ಕಾರಿ ಗೋಮಾಳದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ 94ಸಿ ಅಡಿ ಹಕ್ಕುಪತ್ರ ನೀಡಲಾಗಿದೆ. ಒಂದು ವೇಳೆ ಇದುವರೆಗೂ ಹಕ್ಕುಪತ್ರ ಪಡೆಯದವರು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ, ಮುಖಂಡರಾದ ಕೋರಮಂಗಲ ವೀರಪ್ಪ, ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಾಬು, ಚಂದ್ರಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT