ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬಿತ್ತಿ : ಮಂಜುಳಾ ನಾಗರಾಜು

ಅತ್ತಿಬೆಲೆ ಕ್ಲಸ್ಟರ್‌ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ
Last Updated 10 ಡಿಸೆಂಬರ್ 2019, 13:55 IST
ಅಕ್ಷರ ಗಾತ್ರ

ಆನೇಕಲ್ : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಮಕ್ಕಳ ವಿಜ್ಞಾನ ಹಬ್ಬ ಉತ್ತಮ ವೇದಿಕೆ ಎಂದು ಅತ್ತಿಬೆಲೆ ಪುರಸಭಾ ಉಪಾಧ್ಯಕ್ಷೆ ಮಂಜುಳಾ ನಾಗರಾಜು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಅತ್ತಿಬೆಲೆ ಕ್ಲಸ್ಟರ್‌ ಮಕ್ಕಳ ವಿಜ್ಞಾನ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಾವೇ ತಯಾರಿಸಿದ ವಿಜ್ಞಾನ ವಸ್ತುಗಳ ಪ್ರದರ್ಶನ, ಪ್ರಯೋಗಗಳು ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನೋಡಿ ಕಲಿ ಮಾಡಿ ಕಲಿ ಎಂಬಂತೆ ಅವರ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ. ಕ್ಲಸ್ಟರ್‌ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಕ್ಕಳಿಗೆ ಸೃಜನಶೀಲ ಚಟುವಟಿಕೆ ರೂಪಿಸುವ ಮೂಲಕ ವಿಜ್ಞಾನ ಹಬ್ಬ ಯಶಸ್ವಿಗೊಳಿಸಬೇಕು ಎಂದರು.

ಮುಖಂಡ ಬಳ್ಳೂರು ವಸಂತ್‌ರೆಡ್ಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳಿವೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳು ಕಾರ್ಯಕ್ರಮ ರೂಪಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರದ ಜತೆಗೆ ಸಂಘ –ಸಂಸ್ಥೆಗಳು ಕೈಜೋಡಿಸಬೇಕಾಗಿದೆ. ಸರ್ಕಾರಿ ಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಖಾಸಗಿ ಶಾಲೆಗಳಿಗೆ ಮಿಗಿಲಾಗಿ ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ, ವೈಜ್ಞಾನಿಕ ಮನೋಭಾವ ಬಿತ್ತಬೇಕು. ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸಬೇಕು. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ರೂಪಿಸಿರುವುದು ಅರ್ಥಪೂರ್ಣ ಎಂದರು.

ಅತ್ತಿಬೆಲೆ ಕ್ಲಸ್ಟರ್‌ನ ವಿವಿಧ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿಜ್ಞಾನ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಔಷಧ ಸಸ್ಯಗಳು, ಗ್ರಾಮೀಣ ಭಾಗದ ಕೃಷಿ ಚಟುವಟಿಕೆ, ಪಾರಂಪರಿಕವಾಗಿ ಬಳಸುತ್ತಿದ್ದ ದಿನಬಳಕೆ ವಸ್ತುಗಳ ಪ್ರದರ್ಶನ, ಪೇಪರ್‌ ಮೂಲಕ ವಿವಿಧ ಚಟುವಟಿಕೆ ಸೇರಿದಂತೆ ವಿವಿಧ ವಿಜ್ಞಾನ ಮಾದರಿ ಪ್ರದರ್ಶನ ನಡೆಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರ್‌ರೆಡ್ಡಿ, ಪುರಸಭಾ ಸದಸ್ಯರಾದ ಕಾಂತಲಕ್ಷ್ಮೀ, ಸುರೇಶ್, ಅಲ್ಲಾಬಕಾಷ್‌, ಮುನಿರಾಜು, ಗಣೇಶ್, ಕುಮಾರ್‌, ಗ್ರಾಮ ಪಂಚಾಯಿತಿ ಸದಸ್ಯ ವಿಜಯಕೃಷ್ಣ, ಎಸ್‌ಡಿಎಂಸಿ ಅಧ್ಯಕ್ಷ ರವಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎಂ.ವಿಜಯಲಕ್ಷ್ಮೀ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ಮಕ್ಕಳ ಹಬ್ಬದ ಮಾರ್ಗದರ್ಶಿ ಚಂದ್ರಬಾಬು, ಸಮೂಹ ಸಂಪನ್ಮೂಲ ವ್ಯಕ್ತಿ ದತ್ತಾತ್ತ್ರೇಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಬಿ.ಎಂ.ರತ್ನಮ್ಮ, ಮುಖ್ಯಶಿಕ್ಷಕಿ ಅನುರಾಧಮ್ಮ, ಹೈಮಾವತಿ, ಪ್ರಭಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT