ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಪ್ರತಿಭಟನೆ ಬಿಸಿ; ಪ್ರಚಾರ ಸಭೆ ಮೊಟಕು– ಸಚಿವ ಮುನಿಯಪ್ಪಗೆ ಘೇರಾವ್

ಸಚಿವ ಮುನಿಯಪ್ಪಗೆ ಘೇರಾವ್‌ l ಪೇಚಿಗೆ ಸಿಲುಕಿದ ಕಾಂಗ್ರೆಸ್‌ ಮುಖಂಡರು
Published 14 ಏಪ್ರಿಲ್ 2024, 20:35 IST
Last Updated 14 ಏಪ್ರಿಲ್ 2024, 20:35 IST
ಅಕ್ಷರ ಗಾತ್ರ

ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯರ ಪರ ಭಾನುವಾರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ಸ್ವಕ್ಷೇತ್ರದಲ್ಲೇ ರೈತರು ಘೇರಾವ್‌ ಹಾಕಿ, ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಚನ್ನರಾಯಪಟ್ಟಣದಲ್ಲಿ ಮತ ಪ್ರಚಾರದ ವೇಳೆ ಮುನಿಯಪ್ಪ ಭಾಷಣ ಪ್ರಾರಂಭಿಸುತ್ತಿದ್ದಂತೆ ಭೂ ಸ್ವಾಧೀನ ವಿರೋಧಿ ಹೋರಾಟನಿರತ ರೈತರು ಹಸಿರು ಬಾವುಟ ಪ್ರದರ್ಶಿಸಿ, ಘೋಷಣೆ ಕೂಗಿದರು.

ಇದರಿಂದ ಪೇಚಿಗೆ ಸಿಲುಕಿದ ಕಾಂಗ್ರೆಸ್‌ ಮುಖಂಡರು ಪ್ರತಿಭಟನನಿರತ ರೈತರನ್ನು ಸಮಾಧಾನ ಮಾಡಲು ಜಿ.ಪಂ. ಮಾಜಿ ಅಧ್ಯಕ್ಷ ಚನ್ನಹಳ್ಳಿ ಬಿ.ರಾಜಣ್ಣ ಅವರನ್ನು ಕಳುಹಿಸಿದರು. ಸಂಧಾನ ವಿಫಲವಾಗಿ ಹೋರಾಟ ಇನ್ನಷ್ಟು ತೀವ್ರಗೊಂಡಿತು. ಇದರಿಂದಾಗಿ ಪ್ರಚಾರ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಜತೆ ಭೂ ಸ್ವಾಧೀನ ವಿರೋಧಿ ರೈತರ ಧರಣಿ ಸ್ಥಳಕ್ಕೆ ತೆರಳಿದ ಸಚಿವ ಕೆ.ಎಚ್‌.ಮುನಿಯಪ್ಪ ರೈತರೊಂದಿಗೆ ಮಾತುಕತೆ ನಡೆಸಿದರು.

‘ನನ್ನಿಂದ ತಪ್ಪಾಗಿದೆ. ನಿಮ್ಮ ವಿಚಾರದಲ್ಲಿ ವಿವಿಧ ಕಾರಣಗಳಿಂದ ತಡವಾಗಿದ್ದು, ಲೋಕಸಭಾ ಚುನಾವಣೆಯ ನಂತರ ಪ್ರಾಮಾಣಿಕವಾಗಿ ಮುಖ್ಯಮಂತ್ರಿ, ಕೈಗಾರಿಕಾ ಸಚಿವರ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು. ಚುನಾವಣೆ ಬಹಿಷ್ಕಾರ ಮಾಡದಂತೆ ಸಚಿವರು ಮನವಿ ಮಾಡಿದರು. 

‘ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದರೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವುದಾಗಿ ಆಶ್ವಾಸನೆ ನೀಡಿದ್ದಿರಿ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಪರ ನಿಲುವು ತಾಳುವುದಾಗಿ ತಿಳಿಸಿದ್ದಿರಿ. ಈಗಾಗಲೇ ನಿಮ್ಮನ್ನು 20ಕ್ಕೂ ಹೆಚ್ಚು ಬಾರಿ ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ. ನೀವು ಬಂದು ಮನವೊಲಿಸಿದ ತಕ್ಷಣ ಕಾಂಗ್ರೆಸ್ ಪಕ್ಷವನ್ನು ನಂಬಲು ಸಿದ್ಧರಿಲ್ಲ’ ಎಂದು ರೈತರು ಮತ್ತು  ಹೋರಾಟಗಾರ ಚೀಮಾಚನಹಳ್ಳಿ ರಮೇಶ್‌ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಸರ್ಕಾರದಲ್ಲಿ 72 ರೈತರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಿ, ಪೊಲೀಸರಿಂದ ದಬ್ಬಾಳಿಕೆ ಮಾಡಲಾಯಿತು ಎಂದು ರೈತರು ಈ ವೇಳೆ ಕಣ್ಣೀರು ಹಾಕಿದರು. ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುನಿಯಪ್ಪ ಸ್ಥಳದಿಂದ ತೆರಳಿದರು.

ಚನ್ನರಾಯಪಟ್ಟಣ ರೈತರ ಧರಣಿ ಸ್ಥಳಕ್ಕೆ ಸಚಿವ ಕೆ.ಎಚ್‌.ಮುನಿಯಪ್ಪ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಭೇಟಿ ನೀಡಿ ರೈತರ ಮನವೊಲಿಸಲು ಪ್ರಯತ್ನಿಸಿದರು
ಚನ್ನರಾಯಪಟ್ಟಣ ರೈತರ ಧರಣಿ ಸ್ಥಳಕ್ಕೆ ಸಚಿವ ಕೆ.ಎಚ್‌.ಮುನಿಯಪ್ಪ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಭೇಟಿ ನೀಡಿ ರೈತರ ಮನವೊಲಿಸಲು ಪ್ರಯತ್ನಿಸಿದರು

‘ರೈತರ ಹೋರಾಟ ಗೊತ್ತಿಲ್ಲ’

ಚನ್ನರಾಯಪಟ್ಟಣದ 13 ಹಳ್ಳಿಗಳ ರೈತ ಹೋರಾಟಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ 742 ದಿನಗಳಿಂದ ಕೃಷಿ ಭೂಮಿಯ ಉಳಿವಿಗಾಗಿ ಹೋರಾಟ ಮಾಡುತ್ತಿರುವುದು ಗೊತ್ತೇ ಇಲ್ಲ ಎಂದರು. ‘ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ. ರೈತರ ಪರ ನಾವಿದ್ದೇವೆ. ಯಾವುದೇ ಕಾರಣಕ್ಕೂ ಕೃಷಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಸಮಾಧಾನ ಪಡಿಸಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT