ಶನಿವಾರ, ಜನವರಿ 25, 2020
22 °C
ದೇವನಹಳ್ಳಿಯಲ್ಲಿ ಬೃಹತ್ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ

ಹತ್ತಾರು ವರ್ಷಗಳ ಅಲೆದಾಟ ಅದಾಲತ್‌ನಿಂದ ಮುಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಹಲವಾರು ಪ್ರಕರಣಗಳಲ್ಲಿ ಹತ್ತಾರು ವರ್ಷಗಳಿಂದ ನ್ಯಾಯಾಲಯ ಅಲೆದಾಟಕ್ಕೆ ‘ಲೋಕ್ ಅದಾಲತ್’ ಮುಕ್ತಿ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಹರೀಶ್ ಹೇಳಿದರು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ನೆರವು ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ನಡೆದ ಬೃಹತ್ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಣ್ಣ ಪುಟ್ಟ ಘಟನೆಗಳು ನ್ಯಾಯಾಲಯದಲ್ಲಿ ದಾಖಲಾಗುತ್ತಿರುವುದು ಬೇಸರ ತರಿಸುತ್ತದೆ. ಒಂದು ಬಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದರೆ ಸಾಕ್ಷಿಗಳ ಕೊರತೆ, ಕಕ್ಷಿದಾರರ ಗೈರು, ದಿನದ ವ್ಯರ್ಥ ಕಾಲಹರಣ, ಹಣ, ಶ್ರಮ, ಸಂಬಂಧಗಳಲ್ಲಿ ಬಿರುಕು, ಹತ್ತಾರು ವರ್ಷಗಳಾದರು ಪ್ರಕರಣ ಇತ್ಯಾರ್ಥವಾಗುವುದಿಲ್ಲ. ಇದನ್ನು ಕಕ್ಷಿದಾರರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಸಿವಿಲ್ ನ್ಯಾಯಾಧೀಶ ದಿನೇಶ್ ಮಾತನಾಡಿ, ಕುಟುಂಬದ ಪ್ರತಿಷ್ಠೆ, ಮರ್ಯಾದೆ, ಗೌರವ, ಹಿಯಾಳಿಕೆ, ಕೀಳುಮಟ್ಟ ಎಂಬ ಹುಚ್ಚು ಭ್ರಮೆಯಿಂದ ಹೊರಬರಬೇಕು. ಒಂದು ಹಣ್ಣಿನ ಮರ ಬೆಳೆಸಿದರೆ ಬೆಳೆದವನು ತಿನ್ನಬೇಕು. ಎರಡು ಮೂರು ತಲೆಮಾರಿಗೆ ಎಂದರೆ ಬೇರೆಯವರ ಪಾಲು ಎಂದು ಅರ್ಥಮಾಡಿಕೊಂಡು ಕಕ್ಷಿದಾರರು ಪರಸ್ಪರ ಒಪ್ಪಿಗೆಯಿಂದ ವ್ಯಾಜ್ಯಗಳನ್ನು ಬಗೆಹರಿಸಿಕೊಂಡರೆ ಒಳ್ಳೆಯದು ಎಂದು ಹೇಳಿದರು.

ಎಲ್ಲ ಮಾದರಿಯ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ ಎಂದರೆ ತಾಲ್ಲೂಕಿನಲ್ಲಿ ಏನಾಗುತ್ತಿದೆ, ಯಾಕೆ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ‌. ಯಾವುದೇ ಪ್ರಕರಣ ರಾಜಿ ಸಂಧಾನ ಮೂಲಕ ಅಂತ್ಯಗೊಳಿಸಬೇಕಾದರೆ ಪ್ರಕರಣದಲ್ಲಿರುವ ಎಲ್ಲರೂ ಖುದ್ದು ಹಾಜರಿರಬೇಕು. ಅದಾಲತ್ ಒಂದೇ ದಿನಕ್ಕೆ ಮುಗಿಯುವಂತಹದ್ದಲ್ಲ, ನಿರಂತರವಾಗಿರಲಿದೆ ಎಂದು ತಿಳಿಸಿದರು.

ವಕೀಲರು ಕಕ್ಷಿದಾರರ ಮನವೊಲಿಸುವ ಪ್ರಯತ್ನ ಮಾಡಬೇಕು. ಯಾರ ಸೋಲು ಗೆಲುವಿನ ಪ್ರಶ್ನೆ ಇದಲ್ಲ ಎಂದು ಹೇಳಿದರು.

ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಆರ್‌.ಮಾರೇಗೌಡ ಮಾತನಾಡಿ, ನ್ಯಾಯಾಲಯದಲ್ಲಿ ಶೇ 60 ರಷ್ಟು ಪ್ರಕರಣಗಳು ಪ್ರತಿಷ್ಠೆ, ದ್ವೇಷ, ಅಸೂಯೆಯಿಂದ ಕೂಡಿವೆ. ನ್ಯಾಯ, ಅನ್ಯಾಯ ಗೊತ್ತಿದ್ದರೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಾರೆ ಎಂದು ವಿವರಿಸಿದರು.

ಆರಡಿ ಜಾಗಕ್ಕೆ ನಾಲ್ಕು ಲಕ್ಷ ಖರ್ಚು: ಕೇವಲ 6 ಅಡಿ ಜಾಗಕ್ಕಾಗಿ ತಾಲ್ಲೂಕು, ಜಿಲ್ಲಾ ಹಾಗೂ ಹೈಕೋರ್ಟ್‌ಗೆ ಅಲೆದದ್ದು ಬರೋಬ್ಬರಿ 31 ವರ್ಷ ಎಂದು ತಿಳಿಸಿದರು.

ಹೈಕೋರ್ಟ್‌ನಲ್ಲಿ ಸಾಕ್ಷಿಗಳ ಕೊರತೆಯಿಂದ ಅದೇ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡಿ ಎಂದು ತಾಲ್ಲೂಕು ನ್ಯಾಯಾಲಯಕ್ಕೆ ಬರುವ ವೇಳೆಗೆ ತಲಾ ಎರಡು ಲಕ್ಷ ಖರ್ಚು ಮಾಡಿದ್ದು ನಂತರ ರಾಜಿಯಾಗಿ ಇಬ್ಬರು ಕಕ್ಷಿದಾರರು ತಲಾ ಮೂರು ಅಡಿ ಜಾಗ ಪಡೆದರು. ಈ ಘಟನೆ 20 ವರ್ಷಗಳ ಹಿಂದಿನದ್ದು ಇಂತಹ ಪ್ರಕರಣಗಳು ಸಾಕಷ್ಟು ಇವೆ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ನ್ಯಾಯಾಧೀಶೆ ಯೋಗೇಶ್ವರಿ, ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಆನಂದ್, ಖಜಾಂಚಿ ವೆಂಕಟೇಶ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು