ಸೋಮವಾರ, ಆಗಸ್ಟ್ 8, 2022
22 °C
ಕೆಪಿಸಿಸಿ ಸದಸ್ಯ ಎ.ಸಿ.ಶ್ರೀನಿವಾಸ್ ಬೇಸರ

ದೇಶದ ಆರ್ಥಿಕತೆ ಪಾತಾಳಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಕಾಂಗ್ರೆಸ್‌ನ 60 ವರ್ಷದ ಸಾಧನೆಯನ್ನು ತನ್ನದೇ ಎಂದು ಬಿಂಬಿಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ನೀತಿಗಳು ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳುತ್ತಿವೆ ಎಂದು ಕೆಪಿಸಿಸಿ ಸದಸ್ಯ ಎ.ಸಿ.ಶ್ರೀನಿವಾಸ್ ಆರೋಪಿಸಿದರು. 

ಇಲ್ಲಿನ ನಂದಿನಿ ಶಾಲೆಯಲ್ಲಿ ಜೂಮ್‌ ಆ್ಯಪ್‌ ಮೂಲಕ ಪಕ್ಷದ ಮುಖಂಡರೊಟ್ಟಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ಬ್ರಿಟಿಷರಿಂದ ದೋಚಲ್ಪಟ್ಟಿದ್ದ ದೇಶವನ್ನು ಜಾತ್ಯತೀತ ತತ್ವದ ಅಡಿಪಾಯದಲ್ಲಿ ಕಟ್ಟಲಾಯಿತು. ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ಈ ಸತ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.  

ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ ಕಾಂಗ್ರೆಸ್‌ ಅವಧಿಯಲ್ಲಿ ಸ್ಥಾಪಿಸಲಾದ ಸಾಂವಿಧಾನಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ಯಮಗಳನ್ನು ಬಿಜೆಪಿ ಖಾಸಗೀಕರಣಗೊಳಿಸಿ ನಾಶಮಾಡುತ್ತಿದೆ. ಇದರ ವಿರುದ್ಧ ಹೋರಾಡಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಗಮನಾರ್ಹ ಕೊಡುಗೆ ನೀಡಿದ ಕಾಂಗ್ರೆಸ್ ಇಂದು ಸಂಕಷ್ಟದಲ್ಲಿದೆ. ಪಕ್ಷದ ಏಳಿಗೆಗಾಗಿ ಕಾರ್ಯಕರ್ತರು ದುಡಿಯಬೇಕು ಎಂದು ಹೇಳಿದರು. 

ಕೆಪಿಸಿಸಿ ಸದಸ್ಯ ಚಿನ್ನಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷವು ದೇಶದ ಹಿತಕ್ಕಾಗಿ ಜಾರಿಗೆ ತಂದಿದ್ದ ಎಲ್ಲಾ ಯೋಜನೆಗಳ ಬಗ್ಗೆ ಪ್ರಚಾರ ಪಡೆಯಲಿಲ್ಲ. ಬಿಜೆಪಿ ಇಂದು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಪ್ರಚಾರದಿಂದಲೇ ಅಧಿಕಾರ ಹಿಡಿಯುತ್ತಿದೆ. ಚುನಾವಣಾ ಸಮಯದಲ್ಲಿ ದೇಶದ ಭದ್ರತೆ ಮತ್ತು ಆಂತರಿಕ ವಿಚಾರ ಮುಂದಿಟ್ಟುಕೊಂಡು ಜನರ ಭಾವನೆಗಳನ್ನು ಕೆರಳಿಸಿ ಚುನಾವಣೆ ಗೆಲ್ಲುತ್ತಿದೆ ಎಂದು ಆರೋಪಿಸಿದರು. 

ಪ್ರಚಾರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಚೇತನ್ ಗೌಡ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಪುನಃ ಪಕ್ಷವನ್ನು ಗಟ್ಟಿಗೊಳಿಸಬೇಕಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಅನಂತಕುಮಾರಿ ಚಿನ್ನಪ್ಪ, ಸುಹೇಲ್, ಎಸ್.ಸಿ ಜಿಲ್ಲಾ ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ದಿನ್ನೂರು ವೆಂಕಟೇಶ್, ಮಂಜುನಾಥ್, ಯಲುವಹಳ್ಳಿ ನಟರಾಜ್, ಸೈಫುಲ್ಲಾ, ವೀರೇಗೌಡ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾಜು, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್, ವೆಂಕಗಿರಿಕೋಟೆ ಚಿನ್ನಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು