ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆಗೆ

ಸುಂದರ ಹಳ್ಳಿ- ಸುಂದರ ಬದುಕು ರೂಪಿಸಲು ಕಾರ್ಯಕ್ರಮ ಆಯೋಜನೆ
Last Updated 13 ಫೆಬ್ರುವರಿ 2021, 2:51 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರ ಕುಂದುಕೊರತೆ ಆಲಿಸಿ ಬಗೆಹರಿಸುವ ‘ಸುಂದರ ಹಳ್ಳಿ-ಸುಂದರ ಬದುಕು, ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆಗೆ’ ಕಾರ್ಯಕ್ರಮ ಫೆ.20ರಂದು ತಾಲ್ಲೂಕಿನ ಸಾಸಲು ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಸುಂದರ ಹಳ್ಳಿ- ಸುಂದರ ಬದುಕು, ಜಿಲ್ಲಾಧಿಕಾರಿ ನಡೆ-ಹಳ್ಳಿಕಡೆ’ ಕಾರ್ಯಕ್ರಮದ ಪೂರ್ವಭಾವಿ ಮಾತನಾಡಿದರು.

ಹೊಸಹಳ್ಳಿ ಗ್ರಾಮದಲ್ಲಿ ಫೆ.20ರಂದು ನಡೆಯಲಿರುವ ಕಾರ್ಯಕ್ರಮವನ್ನು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಉದ್ಘಾಟಿಸಲಿದ್ದು, ಈ ಸಂಬಂಧ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮದಲ್ಲಿರುವ ಪ್ರಮುಖ ಬೀದಿಗಳಿಗೆ ತೆರಳಿ ಅಲ್ಲಿನ ಕುಟುಂಬಗಳ ಕುಂದುಕೊರತೆ ‌ಆಲಿಸಿ, ಮನವಿ ಸ್ವೀಕರಿಸಲಿದ್ದಾರೆ. ನಂತರ ಅಲ್ಲಿನ ಶಾಲೆಯ ಮೈದಾನದಲ್ಲಿ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಕೋವಿಡ್-19 ನಿಯಮ ಪಾಲನೆ, ಸ್ವಚ್ಛತಾ ಕ್ರಮಗಳು ಸೇರಿದಂತೆ ಅಗತ್ಯ ಮುಂಜಾಗ್ರತೆ ವಹಿಸಿ ಸಂಬಂಧಪಟ್ಟ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚಿಸದರು.

ಸರ್ಕಾರದ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಆಧಾರ್ ತಿದ್ದುಪಡಿ, ಪಡಿತರ ಚೀಟಿ ಮತ್ತು ಮತದಾನ ಗುರುತಿನ ಚೀಟಿ ಸಮಸ್ಯೆ ಬಗೆಹರಿಸುವ ಮತ್ತು ಅರ್ಜಿ ಸ್ವೀಕರಿಸುವ ಕಾರ್ಯ ನಡೆಯಲಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಕೌಂಟರ್‌ ತೆರೆದು ಅರ್ಜಿಗಳನ್ನು ಸ್ವೀಕಾರ ಮಾಡಲಿದ್ದಾರೆ. ಸರ್ಕಾರದಿಂದ ಇಲಾಖವಾರು ಸಾರ್ವಜನಿಕರಿಗೆ ಲಭ್ಯವಿರುವ ಯೋಜನೆಗಳ ಸೌಲಭ್ಯ ಕುರಿತ ಮಾಹಿತಿ ಫಲಕಗಳ ಮೇಲೆ ಬಿತ್ತರಿಸಲಾಗುವುದು ಎಂದರು.

ಇದೇ ವೇಳೆ ಅಂಗವಿಕಲರಿಗೆ ವಿವಿಧ ಸಾಧನ-ಸಲಕರಣೆ ವಿತರಿಸಲಾಗುವುದು. ರಾತ್ರಿ‌ ಊಟದ ನಂತರ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಲಾಗುವುದು. ಶಾಲೆಯಲ್ಲಿರುವ ನೀಲಗಿರಿ ತೆರವು ಕಾರ್ಯಕ್ರಮ, ಶಾಲಾ‌‌ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ, ಆರೋಗ್ಯದ ಬಗ್ಗೆ ಅರಿವು ಕಾರ್ಯಕ್ರಮ ನಡೆಯಲಿವೆ ಎಂದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ.ನಾಯಕ, ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಆಂತೋಣಿ ಮರಿಯಪ್ಪನ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ, ಡಿವೈಎಸ್‌ಪಿ ಟಿ.ರಂಗಪ್ಪ, ತಹಶೀಲ್ದಾರ್ ಟಿ.ಶಿವರಾಜು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT