ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಪ್‌ಲೈನ್ ವಾಲ್ವ್‌‌ ‌ಸಡಿಲ; ಅಪಾರ ನೀರು ವ್ಯರ್ಥ

ದೇವನಹಳ್ಳಿ 36 ತಾಸಿನಿಂದ ಹರಿಯುತ್ತಿರುವ ನೀರು
Last Updated 15 ಸೆಪ್ಟೆಂಬರ್ 2020, 7:06 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಇಲ್ಲಿನ ಹಳೆ ಸಹಾಯಕ ಸಾರಿಗೆ ಕಚೇರಿ ಬಳಿ ತ್ಯಾಜ್ಯ ನೀರು ಸಂಸ್ಕರಿಸಿ ಪೂರೈಕೆಗೆ ಅಳವಡಿಸಿದ್ದ ಪೈಪ್ ಲೈನ್ ವಾಲ್ವ್ ಸಡಿಲಗೊಂಡ ಪರಿಣಾಮ ಅಪಾರ ನೀರು ವ್ಯರ್ಥವಾಗುತ್ತಿದೆ’ ಎಂದು ಸ್ಥಳೀಯರು ದೂರಿದ್ದಾರೆ.

‘ಬೆಂಗಳೂರಿನ ನಾಗವಾರ ಮತ್ತು ಹೆಬ್ಬಾಳ ಕೆರೆಯ ತ್ಯಾಜ್ಯ ಸಂಸ್ಕರಿಸಿದ ನೀರು ಇದೇ ಪೈಪ್ ಲೈನ್ ಮಾರ್ಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ದೇವನಹಳ್ಳಿ ತಾಲ್ಲೂಕಿನ 9 ಕೆರೆಗಳಿಗೆ ನೀರು ಪೂರೈಕೆಗೆ ಅಳವಡಿಸಿರುವ ಪೈಪ್ ಲೈನ್ ಇದಾಗಿದ್ದು ಕಳೆದ 36 ತಾಸಿನಿಂದ ನೀರು ಹರಿಯುತ್ತಿದೆ. ಇಷ್ಟೊಂದು ಪ್ರಮಾಣದ ನೀರು ಚಿಕ್ಕದಾದ ಕೆರೆಯನ್ನೆ ತುಂಬಿಸಬಹುದಾಗಿತ್ತು’ ಎಂಬುದು ಸ್ಥಳೀಯರ ಅಭಿಮತ.

‘ತ್ಯಾಜ್ಯ ನೀರು ಸಂಸ್ಕರಣ ಘಟಕದಲ್ಲಿ ಇರುತ್ತಾರೋ, ಸಂಬಂಧಪಟ್ಟ ಯೋಜನೆ ಪ್ರಾಧಿಕಾರದ ಇಲಾಖೆಯಲ್ಲಿ ಅಧಿಕಾರಿಗಳು ಇರುತ್ತಾರೊ ಮಾಹಿತಿ ಇಲ್ಲ. ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ಎಂಜಿನಿಯರ್‌ಗಳಿಗೆ ಇದೆ. ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಟೆಂಡರ್ ಷರತ್ತಿನಂತೆ ಕನಿಷ್ಠ ಮೂರು ವರ್ಷ ನಿರ್ವಹಣೆ ಮಾಡಬೇಕು’ ಎಂದರು.

ನೀರು ಪೂರೈಕೆ ಸಂಸ್ಕರಣೆ ಘಟಕದಿಂದ ನೀರು ಪೂರೈಕೆ ಮಾಡುವ ಕೆರೆಗಳವರೆಗೆ ಅಳವಡಿಸಿರುವ ಪೈಪ್‌ ವಾಲ್ವ್‌ಗಳು ನೂರಾರು ಇವೆ. ಅದರ ನಿರ್ವಹಣೆ ಸಕಾಲದಲ್ಲಿ ಆಗಬೇಕು. ಆಗಾಗ ಪೈಪ್ ಲೈನ್ ಮಾರ್ಗ ಪರಿಶೀಲಿಸುತ್ತಿರಬೇಕು. ಅಧಿಕಾರಿಗಳು ಗುತ್ತಿಗೆದಾರರ ಜವಾಬ್ದಾರಿ ಎಂದು ಕುಳಿತರೆ ಈ ರೀತಿ ವ್ಯರ್ಥವಾಗಿ ನೀರು ಹರಿಯುತ್ತದೆ. ತ್ವರಿತವಾಗಿ ದುರಸ್ತಿ ಮಾಡುವ ಕೆಲಸ ಆಗಬೇಕು ಎಂದು ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿಬಣ) ತಾಲ್ಲೂಕು ಘಟಕ ಉಪಾಧ್ಯಕ್ಷ ಗೋಕರೆ ಸತೀಶ್ ಒತ್ತಾಯಿಸಿದರು.

‘ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಇಲಾಖೆ, ನರೇಗಾ ಯೋಜನೆಯಡಿ ಜಲ ಸಂವರ್ಧನೆ, ಜಲ ಮರುಪೂರಣಕ್ಕಾಗಿ ಚೆಕ್ ಡ್ಯಾಂ, ಬದುನಿರ್ಮಾಣ, ಇಂಗು ಗುಂಡಿ, ಕೃಷಿ ಹೊಂಡದ ಮೂಲಕ ಹನಿ ನೀರು ಸಂಗ್ರಹಣೆಕ್ಕೆ ಒತ್ತು ನೀಡುತ್ತಿವೆ. ಪ್ರತಿ ಮನೆಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಮಳೆ ಕೊಯ್ಲು ಕುರಿತು ಜಾಗೃತಿ ಮೂಡಿಸುತ್ತಿದೆ. ಅಂತರ್ಜಲ ಹೆಚ್ಚಳಕ್ಕೆ ಹರಸಾಹಸ ಪಡುತ್ತಿರುವಾಗ ನೀರು ವ್ಯರ್ಥವಾಗುತ್ತಿರುವುದು ನೋವುಂಟು ಮಾಡಿದೆ’ ಎನ್ನುತ್ತಾರೆ ಮಾಳಿಗೆನಹಳ್ಳಿ ಪ್ರಕಾಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT