ಗುರುವಾರ , ಸೆಪ್ಟೆಂಬರ್ 23, 2021
27 °C
ಜೈವಿಕ ಉದ್ಯಾನದಲ್ಲಿ ಆಚರಣೆ, ಮಾವುತರು, ಅಧಿಕಾರಿಗಳು ಭಾಗಿ

ಬನ್ನೇರುಘಟ್ಟದಲ್ಲಿ ಆನೆ ದಿನ ಸಂಭ್ರಮ; ಮರಿಗಳ ಚಿನ್ನಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿಶ್ವ ಆನೆ ದಿನಾಚರಣೆಯನ್ನು ಪಾರ್ಕ್‌ನ ಸಿಬ್ಬಂದಿ ಮತ್ತು ಮಾವುತರು ಆನೆಗಳೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮದಿಂದ ಆಚರಿಸಿದರು.

ಜೈವಿಕ ಉದ್ಯಾನದಲ್ಲಿ ಆನೆ ಮರಿಗಳ ನೈಸರ್ಗಿಕ ನಡವಳಿಕೆಯನ್ನು ಉತ್ತೇಜಿಸುವ ಸಲುವಾಗಿ ವಿವಿಧ ಪೌಷ್ಟಿಕ ಆಹಾರವನ್ನು ಮರಿಗಳಿಗೆ ನೀಡಿ ಅವುಗಳು ಸ್ವತಂತ್ರವಾಗಿ ವಿಹರಿಸಲು ಅವಕಾಶ ಕಲ್ಪಿಸಲಾಗಿತ್ತು. ಮೃದು ಪೈಪ್‌ನ ಒಳಗಡೆ ಹುಲ್ಲು, ಕ್ಯಾರೆಟ್‌, ಗೆಣಸು, ಬಾಳೆಹಣ್ಣು, ಕಲ್ಲಂಗಡಿ, ಕಬ್ಬು ಮತ್ತು ಬೆಲ್ಲವನ್ನು ತುಂಬಿಸಿ ಎತ್ತರದಲ್ಲಿ ಮರಕ್ಕೆ ಕಟ್ಟಲಾಗಿತ್ತು. ಆನೆ ಮರಿಗಳು ತನ್ನ ಸೊಂಡಿಲಿನಿಂದ ಈ ಆಹಾರ ತೆಗೆದುಕೊಳ್ಳಲು ಪ್ರೋತ್ಸಾಹಿಸಲಾಯಿತು.

ಐರಾವತ ಎಂಬ ಆನೆ ಮರಿಯು ತನ್ನ ಸೊಂಡಿಲಿನಿಂದ ಪೈಪ್‌ನ್ನು ಎಳೆದುಕೊಂಡು ಓಡಾಡಿ ಅದರೊಳಗಿನ ಆಹಾರವನ್ನು ಸವಿಯಿತು. ಸುರೇಶ ಎಂಬ ಆನೆ ಪೈಪ್‌ ಒಳಗಿನ ಆಹಾರವನ್ನು ಸವಿಯುತ್ತಾ ಸಂಭ್ರಮಿಸಿತು. ರೀಟಾ ಮತ್ತು ಗೈರಿ ಎಂಬ ಆನೆ ಮರಿಗಳು ನೇತು ಹಾಕಲಾಗಿದ್ದ ಆಹಾರವನ್ನು ಸೆಳೆದುಕೊಳ್ಳುವ ಮೂಲಕ ತಮ್ಮ ಗುರಿ ಸಾಧಿಸಿದವು.

ವಿಶ್ವ ಆನೆ ದಿನಾಚರಣೆ ಅಂಗವಾಗಿ ಆನೆಗಳು ಸಂಭ್ರಮಿಸಲು ವಿವಿಧ ಚಟುವಟಿಕೆಗಳನ್ನು ಉದ್ಯಾನದಲ್ಲಿ ಆಯೋಜಿಸಲಾಗಿತ್ತು ಎಂದು ಜೈವಿಕ ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದರು.

ವನ್ಯಜೀವಿಗಳ ಸಂರಕ್ಷಣೆಯಲ್ಲಿ ಪ್ರಮುಖವಾಗಿ ಆನೆಗಳ ಬಗ್ಗೆ ಮಕ್ಕಳನ್ನು ಸಂವೇದನಾಶೀಲವಾಗಿ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಆನ್‌ಲೈನ್‌ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. educationbbp@gmail.com ಗೆ ಕಳುಹಿಸಬಹುದಾಗಿದೆ.

ಆನೆಗಳಿಗೆ ನೀಡುವ ರಾಗಿಮುದ್ದೆ ತಯಾರಿಸುವ ವಿಡಿಯೊವನ್ನು ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಕಾರ್ಯದರ್ಶಿ ಬಿ.ಪಿ.ರವಿ ಬಿಡುಗಡೆ ಮಾಡಿದರು. ಉದ್ಯಾನದ ವೈದ್ಯ ಡಾ.ಉಮಾಶಂಕರ್‌, ಶಿಕ್ಷಣಾಧಿಕಾರಿ ಅಮಲಾ, ಐಶ್ವರ್ಯ ಹಾಜರಿದ್ದರು.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 24 ಆನೆಗಳಿದ್ದು 86 ವರ್ಷದ ಗಾಯತ್ರಿ, 76 ವರ್ಷದ ಲಿಲ್ಲಿ, 48 ವರ್ಷದ ವನರಾಜ, 20 ವರ್ಷದ ಸುಂದರ್‌, ಗಜೇಂದ್ರ ಸೇರಿದಂತೆ ಆನೆ ಕುಟುಂಬವಿದೆ. ಆನೆಗಳ ದಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸಂಭ್ರಮದ ದಿನವಾಗಿತ್ತು ಎಂದು ಆನೆಗಳ ವಿಭಾಗದ ಮೇಲ್ವಿಚಾರಕ ಸುರೇಶ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು