ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ಚನ್ನಮ್ಮ ವಿ.ವಿಗೆ ₹100 ಕೋಟಿ ಅನುದಾನ

Published 20 ಫೆಬ್ರುವರಿ 2024, 4:26 IST
Last Updated 20 ಫೆಬ್ರುವರಿ 2024, 4:26 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಾ ಅಭಿಯಾನ’ ಯೋಜನೆಯಡಿ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಸಕ್ತ ವರ್ಷ ₹100 ಕೋಟಿ ವಿಶೇಷ ಅನುದಾನ ಮಂಜೂರಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಎಫ್.ನಾಗಣ್ಣವರ ತಿಳಿಸಿದ್ದಾರೆ.

‘ಉನ್ನತ ಶಿಕ್ಷಣವನ್ನು ಅಭಿವೃದ್ಧಿಪಡಿಸುವ ಈ ಯೋಜನೆ ಅಡಿ ರಾಜ್ಯದ ಎರಡು ವಿಶ್ವವಿದ್ಯಾಲಯಗಳಿಗೆ ಮಾತ್ರ ಅನುದಾನ ಸಿಕ್ಕಿದೆ. ಅದರಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವೂ ಒಂದು. ಇದರೊಂದಿಗೆ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಹಾಗೂ ಶೈಕ್ಷಣಿಕ ಸುಧಾರಣಾ ಕ್ರಾಂತಿ ಆಗಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 348 ಮಹಾವಿದ್ಯಾಲಯಗಳು ಸಂಲಗ್ನಗೊಂಡಿವೆ. ರಾಜ್ಯದಲ್ಲಿ ಅತಿ ಹೆಚ್ಚು ಮಹಾವಿದ್ಯಾಲಯಗಳನ್ನು ಹೊಂದಿದ ಕೀರ್ತಿ ನಮಗಿದೆ. ವಿಜಯಪುರದಲ್ಲಿ ಸ್ನಾತಕೋತ್ತರ ಕೇಂದ್ರ, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆ ಘಟಕ ಮಹಾವಿದ್ಯಾಲಯ ಕೂಡ ಸ್ಥಾಪಿಸಲಾಗಿದೆ. ಪ್ರಸ್ತುತ 28 ಸ್ನಾತಕೋತ್ತರ ವಿಭಾಗಗಳು ವಿಭಿನ್ನ ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತಿದ್ದು, ಉನ್ನತವಾದ ಸಂಶೋಧನೆಗಳು ನಡೆಯುತ್ತಿವೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದ ವಿಶ್ವವಿದ್ಯಾಲಯವು ಮಾಡಿದ ಶೈಕ್ಷಣಿಕ ಸಾಧನೆ ಪರಿಗಣಿಸಲಾಗಿದೆ. ಜ್ಞಾನ, ವಿಜ್ಞಾನ, ಆನ್ವಯಿಕ ವಿಜ್ಞಾನ ವಿಷಯಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ‌. 2010ರಲ್ಲಿ ಪ್ರಾರಂಭವಾದ ವಿಶ್ವವಿದ್ಯಾಲಯದ ಈವರೆಗೆ ಶೈಕ್ಷಣಿಕ ಕ್ಷೇತ್ರದ ಹೆಜ್ಜೆಗಳನ್ನು ಸರ್ಕಾರದ ಮುಂದೆ ನೀಡಲಾಗಿತ್ತು. ಅದನ್ನು ಪರಿಗಣಿಸಿ ಅನುದಾನಕ್ಕೆ ಆಯ್ಕೆ ಮಾಡಿದೆ’ ಎಂದು ಅವರು ವಿವರಿಸಿದ್ದಾರೆ.

‘ಭವಿಷ್ಯದಲ್ಲಿ ವಿಶ್ವವಿದ್ಯಾಲಯದಿಂದ ಜ್ಞಾನ, ವಿಜ್ಞಾನ, ಆನ್ವಯಿಕ ವಿಜ್ಞಾನಗಳ ಕ್ಷೇತ್ರದಲ್ಲಿ ಕೈಗೊಳ್ಳಲು ಉದ್ದೇಶಿಸಿದ ಯೋಜನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಂತರ್‌ಶಿಸ್ತೀಯ ಹಾಗೂ ಬಹುಶಿಸ್ತೀಯ ಅಧ್ಯಯನ ಸಂಸ್ಥೆಯನ್ನಾಗಿ ಕಟ್ಟುವ ಅಭಿಲಾಷೆ ಇದೆ. ಜಾಗತಿಕ ಸಂವೇದನೆಗಳಿಗೆ ಸಂವಾದಿಯಾಗಿ ವಿಶ್ವವಿದ್ಯಾಲಯವನ್ನು ಬೆಳೆಸುವ ಉದ್ದೇಶವಿದೆ. ನಮ್ಮ ಮುಂದಿರುವ ಗುರಿ, ನೀಲನಕ್ಷೆ, ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರಿಂದ ಈ ಅನುದಾನ ಮಂಜೂರಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ತುರ್ತಾಗಿ ಅತ್ಯಾಧುನಿಕ ಹಾಗೂ ನವೀನ ಆವಿಷ್ಕಾರ ಇರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಹೊಸ ಶೈಕ್ಷಣಿಕ ಸ್ನಾತಕೋತ್ತರ, ಸ್ನಾತಕ ಕೋರ್ಸ್‍ಗಳನ್ನು ಹಾಗೂ ಪಿ.ಜಿ. ಡಿಪ್ಲೊಮಾ ಕೋರ್ಸ್‍ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಪ್ರಯೋಗಾಲಯಗಳು, ಗ್ರಂಥಾಲಯ, ಮಾಹಿತಿ ಕೇಂದ್ರಗಳು, ಕಿಯೋಸ್ಕ್, ವಸ್ತು ಸಂಗ್ರಹಾಲಯ, ಹಸ್ತಪ್ರತಿ ಸಂಗ್ರಹಾಲಯ, ಮಲ್ಟಿಮೀಡಿಯಾ ಸ್ಟುಡಿಯೊಗಳು, ಥೀಮ್ ಪಾರ್ಕ್, ಥೀಮ್ ಮ್ಯೂಸಿಯಂ, ಕೌಶಲಯುಕ್ತ– ಔದ್ಯೋಗಿಕ ಮಾರುಕಟ್ಟೆ ಆಧರಿತ ಕೋರ್ಸ್‍ಗಳು, ಸಂಶೋಧನಾ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಸಮುದಾಯದತ್ತ ಉನ್ನತ ಶಿಕ್ಷಣ, ಸಮುದಾಯದತ್ತ ಸಂಶೋಧನೆಗಳು, ಸಮುದಾಯದತ್ತ ಪಾರಂಪರಿಕ ಮೂಲಜ್ಞಾನ ಕೊಂಡೊಯ್ಯುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT