ಶುಕ್ರವಾರ, ಜುಲೈ 1, 2022
23 °C
ತಲ್ಲಣ ಮೂಡಿಸುತ್ತಿರುವ ಕೋವಿಡ್ ಮರಣ

PV Web Exclusive: 11 ದಿನಗಳಲ್ಲಿ 139 ಸಾವು!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣವು ಹೆಚ್ಚುತ್ತಿರುವುದು ಜನರಲ್ಲಿ ತಲ್ಲಣ ಮೂಡಿಸುತ್ತಿದೆ.

ಕೋವಿಡ್–19 ದೃಢಪಡುವವರ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮೇ 28ರಿಂದ ಜೂನ್‌ 7ರವರೆಗೆ ಅಂದರೆ 11 ದಿನಗಳಲ್ಲಿ ಬರೋಬ್ಬರಿ 139 ಮಂದಿ ಸಾವಿಗೀಡಾಗಿದ್ದಾರೆ. ಆರೋಗ್ಯ ಇಲಾಖೆಯಿಂದ ನಿತ್ಯವೂ ನೀಡಲಾಗುತ್ತಿರುವ ಅಧಿಕೃತ ಅಂಕಿ–ಅಂಶಗಳ ಪ್ರಕಾರವೇ, ಜಿಲ್ಲೆಯಲ್ಲಿ ಮರಣ ಮೃದಂಗ ಮುಂದುವರಿದಿರುವುದನ್ನು ಗಮನಿಸಬಹುದು. ಇಲ್ಲಿನ ಸದಾಶಿವ ನಗರ ಸ್ಮಶಾನದಲ್ಲಿ ಚಿತೆ ಆರುತ್ತಲೇ ಇಲ್ಲ.

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆಯನ್ನೇ ಮಾಡಿಕೊಳ್ಳದೆ ಹಲವರು ಸಾವಿಗೀಡಾಗುತ್ತಿದ್ದಾರೆ. ಇದ್ದದ್ದು ಕೋವಿಡ್ ಸಮಸ್ಯೆಯೋ ಅಥವಾ ಕೋವಿಡೇತರವೋ ಎನ್ನುವುದೇ ತಿಳಿಯದೆ ಹಲವು ಮಂದಿ ಸಾವಿಗೀಡಾಗುತ್ತಿದ್ದಾರೆ. ಹಳ್ಳಿಗಳಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ನಿಖರ ಕಾರಣ ತಿಳಿದುಬರುತ್ತಿಲ್ಲ.

ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯು 71ಸಾವಿರ ದಾಟಿದೆ. ಬಿಡುಗಡೆಯಾದವರ ಸಂಖ್ಯೆಯೂ 60ಸಾವಿರ ದಾಟಿದೆ.

ಹಲವು ಸಮಸ್ಯೆಯಿಂದ: ಜೂನ್ 1ರಂದು ಅತಿ ಹೆಚ್ಚು ಅಂದರೆ 19 ಮರಣ ವರದಿಯಾಗಿದೆ. ಈ 11 ದಿನಗಳಲ್ಲಿ ಎರಡು ದಿನಗಳು ಬಿಟ್ಟರೆ ಉಳಿದೆಲ್ಲ ದಿನಗಳಲ್ಲಿ ಎರಡಂಕಿಯ ಸಾವು  ವರದಿಯಾಗಿದೆ. ಭಾನುವಾರ ಹಾಗೂ ಸೋಮವಾರ ತಲಾ 15 ಮಂದಿ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮರಣ ಪ್ರಮಾಣವು ಕೆಲವೇ ದಿನಗಳಲ್ಲಿ 700ರ ಸನಿಹಕ್ಕೆ ಬಂದಿದೆ. ಮೃತರಲ್ಲಿ ಸರಾಸರಿ 45 ವರ್ಷ ಮೇಲಿನವರು ಇದ್ದಾರೆ. ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅತಿ ಹೆಚ್ಚಿನ ಮಂದಿಗೆ ಚಿಕಿತ್ಸೆ ನೀಡಲಾಗುತ್ತಿರುವ ಬಿಮ್ಸ್‌ (ಜಿಲ್ಲಾಸ್ಪತ್ರೆ)ನಲ್ಲಿ ಹೆಚ್ಚಿನ ಮರಣ ಪ್ರಮಾಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್‌ ತಿಳಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘ಎಲ್ಲ ಸಾವುಗಳೂ ಕೋವಿಡ್‌ನಿಂದಲೇ ಆಗಿದೆ ಎಂದು ಹೇಳಲಾಗುವುದಿಲ್ಲ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ, ಶ್ವಾಸಕೋಶ ತೊಂದರೆ ಸೇರಿದಂತೆ ಇತರ ಸಮಸ್ಯೆಗಳಿಂದ ಬಳಲುತ್ತಿರುವವರ (ಕೊಮಾರ್ಬಿಡಿಸಿ) ಮೇಲೆ ಹೆಚ್ಚಿನ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ’ ಎಂದು ತಿಳಿಸಿದರು.

‘ಹಳ್ಳಿಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ ಜನರ ಆರೋಗ್ಯ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಸೋಂಕಿತರ ಐಸೊಲೇಷನ್‌ಗೆ ಕ್ರಮ ವಹಿಸಲಾಗಿದೆ. ಕೋವಿಡ್ ಪಾಸಿಟಿವ್ ಬಂದವರು ಕೇಂದ್ರಗಳಲ್ಲಿ ದಾಖಲಾಗಿ ಆರೈಕೆ ಪಡೆಯಬೇಕು. ಆಗ, ಮರಣ ಪ್ರಮಾಣ ತಗ್ಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

‘ತಡವಾಗಿ ಬರುತ್ತಿದ್ದಾರೆ’

‘ನಾವು ನಡೆಸಿರುವ ವಿಶ್ಲೇಷಣೆಯ ಪ್ರಕಾರ, ರೋಗಿಗಳು ಆಸ್ಪತ್ರೆಗೆ ತಡವಾಗಿ ಬರುತ್ತಿರುವುದೇ ಸಾವಿನ ಪ್ರಮಾಣ ಹೆಚ್ಚಾಗುವುದಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಬಿಮ್ಸ್‌ ಪ್ರಭಾರ ವೈದ್ಯಕೀಯ ನಿರ್ದೇಶಕ ಡಾ.ಉಮೇಶ ಕುಲಕರ್ಣಿ.

‘ಕೋವಿಡ್ 2ನೇ ಅಲೆಯಲ್ಲಿನ ಸಾವಿನ ಪ್ರಕರಣಗಳನ್ನು ಗಮನಿಸಿದರೆ, ಶೇ 50ರಷ್ಟು ಮರಣಗಳು ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ಗೆ ದಾಖಲಾದ 48 ಗಂಟೆಯೊಳಗೇ ಸಂಭವಿಸಿವೆ. ಚಿಕಿತ್ಸೆ ಶುರು ಮಾಡಲು ಮತ್ತು ಅದು ಪರಿಣಾಮ ಬೀರಲು 24 ಗಂಟೆಯಾದರೂ ಬೇಕು. ಅದಕ್ಕೆ ಹಲವರು ಸ್ಪಂದಿಸಲಾಗದೆ ಸಾವಿಗೀಡಾದ ವರದಿಗಳಿವೆ. ಶೇ 30ರಷ್ಟು ಮಂದಿ 7 ದಿನಗಳಲ್ಲಿ ಸಾವಿಗೀಡಾಗಿದ್ದಾರೆ. ಶೇ 20ರಷ್ಟು ಮಂದಿ ನಂತರದ ದಿನಗಳಲ್ಲಿ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕೋವಿಡ್ ಕೇರ್ ಕೇಂದ್ರಗಳು ಅಥವಾ ಆಸ್ಪತ್ರೆಗಳಿಗೆ ಬೇಗನೆ ದಾಖಲಾಗುವುದರಿಂದ ಸಾವಿನ ಪ್ರಮಾಣವನ್ನು ತಗ್ಗಿಸಬಹುದಾಗಿದೆ’ ಎನ್ನುತ್ತಾರೆ ಅವರು.

ಸಾವಿನ ಪ್ರಮಾಣ

ದಿನಾಂಕ;ಸಂಖ್ಯೆ

ಮೇ 28;10

ಮೇ 29;09

ಮೇ 30;05

ಮೇ 31;15

ಜೂನ್‌ 1;19

ಜೂನ್ 2;17

ಜೂನ್‌ 3;10

ಜೂನ್‌ 4;06

ಜೂನ್‌ 5;18

ಜೂನ್‌ 6;15

ಜೂನ್‌ 7;15

***

ಕೋವಿಡ್ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಪಾಸಿಟಿವ್ ಬಂದ ಕೂಡಲೇ ಕೋವಿಡ್ ಕೇರ್ ಕೇಂದ್ರಗಳಿಗೆ ಸೇರಬೇಕು. ಅಲ್ಲಿ ಸಮರ್ಪಕ ಆರೈಕೆ ಪಡೆಯಬೇಕು. ತಡ ಮಾಡುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ

- ಡಾ.ಉಮೇಶ ಕುಲಕರ್ಣಿ, ಪ್ರಭಾರ ವೈದ್ಯಕೀಯ ನಿರ್ದೇಶಕ, ಬಿಮ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು