ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಕಂದಮ್ಮಗಳು ಸಾವು: ಹೊಣೆ ಯಾರು?

ಅರಳುವ ಮುನ್ನವೇ ಬಾಡಿದ ಕುಸುಮಗಳು; ಗ್ರಾಮದಲ್ಲಿ ಮಡುಗಟ್ಟಿದ ದುಃಖ
Last Updated 10 ಜನವರಿ 2023, 16:33 IST
ಅಕ್ಷರ ಗಾತ್ರ

ಸವದತ್ತಿ: ನರ್ಸರಿಯಲ್ಲಿ ತೊದಲು ನುಡಿಗಳನ್ನು ಕಲಿತು, ಅಮ್ಮನ ಮಡಿಲಲ್ಲಿ ಆಟವಾಡಬೇಕಿದ್ದ ಕಂದಮ್ಮಗಳು ಉಸಿರುಗಟ್ಟಿ ಸತ್ತಿವೆ. ಯಾರದೋ ನಿರ್ಲಕ್ಷ್ಯಕ್ಕೆ ಎರಡು ಮುಗ್ದ ಜೀವಗಳು ಬಲಿಯಾಗಿವೆ. ಇನ್ನೂ ಪ್ರಪಂಚದ ಅರಿವೇ ಇಲ್ಲದ ಆ ಪುಟಾಣಿಗಳ ಸಾವಿನಿಂದ ಇಡೀ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ದೇವರ ಸ್ವರೂಪವಾದ ಪುಟ್ಟ ಮಕ್ಕಳ ಮೇಲೆ ವಿಧಿ ಏಕೆ ಇಷ್ಟು ಕ್ರೌರ್ಯ ಮೆರೆಯಿತೋ ಎಂದು ಗ್ರಾಮದ ಪ್ರತಿಯೊಬ್ಬರೂ ಮಮ್ಮಲ ಮರಗುವಂತಾಗಿದೆ.

ಹೌದು. ತಾಲ್ಲೂಕಿನ ಗುರ್ಲಹೊಸೂರು ಗ್ರಾಮಕ್ಕೆ ಮಂಗಳವಾರ ಬರಸಿಡಿಲು ಬಡಿದಂತಾಗಿದೆ. ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ತೆರೆದ ಸಂಪಿನಲ್ಲಿ ಬಿದ್ದು ಇಬ್ಬರು ಕಂದಮ್ಮಗಳು ಉಸಿರುಗಟ್ಟಿ ಸಾವನ್ನಪ್ಪಿವೆ. ಶ್ಲೋಕ ಶಂಭುಲಿಂಗ ಗುಡಿ ಹಾಗೂ ಚಿದಾನಂದ ಪ್ರಕಾಶ ಸಾಳಂಕಿ ಅರಳುವ ಮುನ್ನವೇ ಬಾಡಿದ ಹೂಗಳು.

ನಿತ್ಯದಂತೆ ಮಂಗಳವಾರ ಬೆಳಿಗ್ಗೆ 9ಕ್ಕೆ ಮಕ್ಕಳು ಆಟವಾಡಲು ಅಂಗಳಕ್ಕೆ ಹೋಗಿದ್ದರು. ನೀರಿನ ಹೊಂಡದ ಬಳಿ ಹೋದ ಮಕ್ಕಳು ಆಯತಪ್ಪಿ ಹೊಂಡಕ್ಕೆ ಬಿದ್ದರು. ಈ ಹೊಂಡ ಸಣ್ಣ ಸಂದಿಯಲ್ಲಿರುವ ಕಾರಣ ಯಾರ ಗಮನಕ್ಕೂ ಬಂದಿಲ್ಲ. ಮಧ್ಯಾಹ್ನ 12ರ ಸುಮಾರಿಗೆ ಮಕ್ಕಳನ್ನು ಹುಡುಕಾಡಿದಾಗ, ಹೊಂಡಕ್ಕೆ ಬಿದ್ದಿದ್ದು ಗೊತ್ತಾಗಿದೆ.

ಎರಡು ಕಟ್ಟಡಗಳ ಮಧ್ಯೆ ಇರುವ ಈ ಸಂಪಿನಲ್ಲಿ ನೀರು ಭರ್ತಿ ಮಾಡಿ, ಅದಕ್ಕೆ ಮುಚ್ಚಳ ಹಾಕದೇ ಬಿಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಹೆತ್ತವರು ದೂರಿದ್ದಾರೆ. ಅನುದಾನದ ಕೊರತೆಯಿಂದ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅನುದಾನ ಬರುವವರೆಗೆ ಕಟ್ಟಡಕ್ಕೆ ಹಾಗೂ ಅದರಿಂದ ಜನರಿಗೆ ಏನೂ ತೊಂದರೆ ಆಗದಂತೆ ಜಾಗ್ರತೆ ವಹಿಸಬೇಕಾಗಿರುವುದು ಕಾಮಗಾರಿ ಹೊತ್ತುಕೊಂಡ ಇಲಾಖೆ ಹಾಗೂ ಗುತ್ತಿಗೆದಾರರ ಜವಾಬ್ದಾರಿ. ಆದರೆ, ಇವರಿಬ್ಬರ ನಿರ್ಲಕ್ಷ್ಯ ಕಾರಣ ಎರಡು ಪುಟಾಣಿ ಜೀವಗಳು ಬಲಿಯಾಗಿವೆ.

ಸಾವಿಗೆ ಯಾರು ಜವಾಬ್ದಾರಿ?: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ₹1.5 ಕೋಟಿ ಅನುದಾನದಲ್ಲಿ ಲ್ಯಾಂಡ್‌ ಆರ್ಮಿಗೆ (ಭೂ ಸೇನಾ ನಿಗಮ) ಈ ಭವನ ನಿರ್ಮಿಸಲು ನೀಡಲಾಗಿದೆ. 2017ರ ಜ. 13ರಂದು ₹50 ಲಕ್ಷ ಅನುದಾನದೊಂದಿಗೆ ಆರಂಭಗೊಂಡಿತ್ತು. ಆಗಸ್ಟ್‌ನಲ್ಲಿ ₹25 ಲಕ್ಷ ಅನುದಾನ ಬಂದಿತ್ತು. ಐದು ವರ್ಷ ಕಳೆದರೂ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಕಾಮಗಾರಿ ಸ್ಥಗಿತಗೊಂಡ ಕಾರಣ ಭವನದ ಸುತ್ತ ಸುರಕ್ಷತಾ ಕ್ರಮಗಳನ್ನು ಅನುರಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕಾಮಗಾರಿ ನಂತರ ಕನಿಷ್ಠ ಬೇಲಿ ಅಥವಾ ತಗಡು ಇರಿಸಿ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿಲ್ಲ ಎನ್ನುವುದು ಸ್ಥಳೀಯರ ಮಾಹಿತಿ.

‘ಇದೇ ಸಂಪಿನಲ್ಲಿ ಆರು ತಿಂಗಳ ಹಿಂದೆ ದನ-ಕರುಗಳು ಬಿದ್ದ ಘಟನೆ ನಡೆದಿದೆ. ಸಾರ್ವಜನಿಕರೇ ಅವುಗಳನ್ನು ತೆರುವುಗೊಳಿಸಿದ್ದರು. ಟ್ಯಾಂಕಿನ ಮೇಲೆ ಮುಚ್ಚಳ ಹಾಕುವಂತೆ ಲ್ಯಾಂಡ್ ಆರ್ಮಿ ಅಧಿಕಾರಿಗಳಿಗೆ ಆಗ್ರಹಿಸಿದ್ದರು. ಆದರೂ ಅಧಿಕಾರಿಗಳು ಕಿವಿಗೊಟ್ಟಿಲ್ಲ’ ಎಂದೂ ಮೃತ ಮಕ್ಕಳ ಕುಟುಂಬದವರು ಆಕ್ರೋಶ ಹೊರಹಾಕಿದರು.

*

ಹೆತ್ತವರ ಮಡಿಲು ಸೇರಿದ ಶ್ಲೋಕ

ಸಂಪಿನಲ್ಲಿ ಬಿದ್ದು ಸಾವನ್ನ
ಪ್ಪಿದ ಬಾಲಕ ಶ್ಲೋಕನಿಗೆ ತಂದೆ– ತಾಯಿ ಇಲ್ಲ. ಈ
ಹಿಂದೆಯೇ ಅವಘಡ
ವೊಂದರಲ್ಲಿ ಈ ಮಗುವಿನ ತಂದೆ–ತಾಯಿ ಸಾವನ್ನಪ್ಪಿ
ದ್ದಾರೆ. ಅನಾಥವಾದ ಕೂಸನ್ನು ಅವರ ಸೋದರತ್ತೆ ದೇವಿಕಾ ಮುತ್ತನ್ನವರ ಎನ್ನುವವರು ಕರೆತಂದು ಸಾಕಿದ್ದರು. ಮುದ್ದು ಮುಖದ ಕಂದಮ್ಮ ಈಗ ತನ್ನ ಹೆತ್ತವರ ಮಡಿಲು ಸೇರಿದೆ.

ಬಾಲಕ ಚಿದಾನಂದನ ತಂದೆ ಪ್ರಕಾಶ ತಾಯಿ ಸವಿತಾ ಕೂಡ ಕೂಲಿ ಕಾರ್ಮಿಕರು. ಸೆಂಟ್ರಿಂಗ್‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೀಗ ಬರ
ಸಿಡಿಲು ಬಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT