ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿಗಳಿಗೆ 2ಎ ಮೀಸಲಾತಿ: ಸಚಿವನಾಗಿ ಬೀದಿಯಲ್ಲಿ ಹೋರಾಡಲಾಗಲ್ಲ– ನಿರಾಣಿ

Last Updated 29 ಸೆಪ್ಟೆಂಬರ್ 2021, 15:51 IST
ಅಕ್ಷರ ಗಾತ್ರ

ಬೆಳಗಾವಿ: ‘ನಾನು ಸಚಿವ ಸ್ಥಾನದಲ್ಲಿದ್ದುಕೊಂಡು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಬೀದಿಯಲ್ಲಿ ನಿಂತು ಹೋರಾಡಲು ಸಾಧ್ಯವಾಗುವುದಿಲ್ಲ’ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಬಸವ ಜಯಮೃತ್ಯುಂಜಯ ಸ್ವಾಮೀಜಿ ನಮ್ಮ ಗುರುಗಳು. ಅವರನ್ನು ಸಮಾಜದ ಪೀಠಕ್ಕೆ ನಾವೇ ಆಯ್ಕೆ ಮಾಡಿದ್ದು. ನಮ್ಮ ಹೋರಾಟಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ಯಾರನ್ನು ದೃಷ್ಟಿಯಲ್ಲಿಟ್ಟುಕೊಂಡು ಆರೋಪ ಮಾಡಿದ್ದಾರೋ ನನಗೆ ಗೊತ್ತಿಲ್ಲ’ ಎಂದರು.

‘ಸಮಾಜವನ್ನು ಪ್ರವರ್ಗ 3ಬಿ ಪಟ್ಟಿಗೆ ತಂದವನು ನಾನೇ. ಪ್ರವರ್ಗ 2ಎ ಮೀಸಲಾತಿ ಸಿಗಬೇಕು ಎಂದು ಹೋರಾಟ ಮಾಡಿದವರಲ್ಲಿ ಮೊದಲಿಗ ನಾನು. ಇತರರಂತೆ ಪಾದಯಾತ್ರೆ ಮಾಡಲು ಅಥವಾ ಹೋರಾಟಕ್ಕೆ ಹೋಗಲು ಆಗುವುದಿಲ್ಲ. ಸಮಾಜದವರು ನಡೆಸುವ ಕಾರ್ಯಕ್ರಮಕ್ಕೆ ಕಲ್ಲು ತೂರಾಟ ನಡೆಸುವುದು, ಮೊಟ್ಟೆ ಎಸೆಯುವಂತೆ ಮಾಡುವುದು ನಮ್ಮ ಜಾಯಮಾನವಲ್ಲ. ಕುಂಬಳ ಕಾಯಿ ಕಳ್ಳ ಎಂದರೆ ನಾನೇಕೆ ಹೆಗಲು ಮುಟ್ಟಿ ನೋಡಿಕೊಳ್ಳಲಿ?’ ಎಂದರು.

‘ಲಿಂಗಾಯತ ಪಂಚಮಸಾಲಿ ಸಮಾಜದ ಜೊತೆಗೆ ಸಮಸ್ತ ವೀರಶೈವ ಲಿಂಗಾಯತರಿಗೆ ಪ್ರವರ್ಗ 2ಎ ಮೀಸಲಾತಿ ಕೊಡಬೇಕು ಎನ್ನುವುದು ನನ್ನ ಆಗ್ರಹ. ನಮಗೆ ಹೋರಾಟಕ್ಕೆ ಶಕ್ತಿ ಇದೆ. ಒಬ್ಬರೂ ಶಾಸಕರಿಲ್ಲದ ಒಳಪಂಗಡದವರಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಕೂಡ ಸಿದ್ಧವಿದ್ದಾರೆ. ಆದರೆ, ಆಯೋಗದ ವರದಿ ಬರುವುದನ್ನು ಕಾಯುತ್ತಿದ್ದಾರೆ’ ಎಂದು ತಿಳಿಸಿದರು.

‘ಸಮಾಜದ ಹೋರಾಟ ಬಳಸಿಕೊಂಡು ಮಂತ್ರಿಯಾಗುವ ಅಗತ್ಯ ಅಥವಾ ಸಣ್ಣತನ ನನಗಿಲ್ಲ. ಕೂಡಲಸಂಗಮ ಪೀಠ ಸ್ಥಾಪನೆಗಿಂತ ಮುಂಚೆಯೇ ನಾನು ಮಂತ್ರಿಯಾಗಿದ್ದೆ. ಮಂತ್ರಿಯಾಗಿ, ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸುತ್ತೇನೆ. ಸಮಾಜದವರ ಹೋರಾಟಕ್ಕೆ ಬೆಂಬಲವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT