ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆ: 51,447 ವಿದ್ಯಾರ್ಥಿಗಳಿಗೆ ₹ 12.41 ಕೋಟಿ

Last Updated 21 ಜನವರಿ 2022, 13:46 IST
ಅಕ್ಷರ ಗಾತ್ರ

ಬೆಳಗಾವಿ: ಹೊಸದಾಗಿ ಜಾರಿಗೊಳಿಸಲಾಗಿರುವ ‘ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆ’ಯಲ್ಲಿ 2021–2022ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 51,447 ವಿದ್ಯಾರ್ಥಿಗಳಿಗೆ ₹ 12.41 ಕೋಟಿ ಶಿಷ್ಯವೇತನ ಜಮೆಯಾಗಿದೆ.

ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಚೆಗೆ ಯೋಜನೆ ಅನುಷ್ಠಾನಗೊಳಿಸಿದ್ದರು. ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಶಿಷ್ಯವೇತನ ಕೋರಿ ಆನ್‌ಲೈನ್‌ನಲ್ಲಿ ನಿಗದಿತ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಪೈಕಿ ಈವರೆಗೆ ಮೊದಲನೇ ಹಂತದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಕಲ್ಪಿಸಲಾಗಿದೆ.

‘ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ. ದ್ವಿತೀಯ ಪಿಯುಸಿಗೆ ದಾಖಲಾಗುತ್ತಿದ್ದಂತೆಯೇ ಅದರು ಕಾಲೇಜುಗಳಲ್ಲಿ ನೀಡುವ ದತ್ತಾಂಶದ ಆಧಾರದ ಮೇಲೆ ಅವರವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲಾಗಿದೆ. ವಿದ್ಯಾರ್ಥಿಗಳಿಗೆ ತಲಾ ₹ 2,500 ಮತ್ತು ವಿದ್ಯಾರ್ಥಿನಿಯರಿಗೆ ತಲಾ ₹ 3ಸಾವಿರ ನೀಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ‘ಪ್ರಜಾವಾಣಿ‘ಗೆ ತಿಳಿಸಿದರು.

ಇತರ ವಿದ್ಯಾರ್ಥಿವೇತನ ಪಡೆದವರಿಗೂ:

‘ಯೋಜನೆಯು ಮುಂದುವರಿದಿದ್ದು, ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆ ವಿದ್ಯಾರ್ಥಿಯ ತಂದೆ–ತಾಯಿಗೆ ಜಮೀನು ಇದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಂಡು ನೆರವು ಕಲ್ಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಿಸುವ ಯೋಜನೆ ಇದಾಗಿದೆ. ಮೆಟ್ರಿಕ್‌ ನಂತರದ ಹೆಚ್ಚಿನ ಶಿಕ್ಷಣಕ್ಕಾಗಿ ರಾಜ್ಯದಲ್ಲಿ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ರೈತರ ಮಕ್ಕಳಿಗೆ ಅವರ ಕೋರ್ಸ್‌ಗಳಿಗೆ ಅನುಗಣವಾಗಿ ₹ 2500ರಿಂದ ₹ 11ಸಾವಿರದವರೆಗೆ ಶಿಷ್ಯವೇತನ ಕೊಡಲಾಗುವುದು. ಇತರ ವಿದ್ಯಾರ್ಥಿವೇತನಗಳನ್ನು ಪಡೆದವರು ಕೂಡ ರೈತ ವಿದ್ಯಾನಿಧಿ ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಯ ತಂದೆ ಅಥವಾ ತಾಯಿ ರೈತರ ಗುರುತಿನ ಸಂಖ್ಯೆ (ಎಫ್‌ಐಡಿ) ಹೊಂದಿರಬೇಕಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ಈ ಶಿಷ್ಯವೇತನ ಯೋಜನೆಯನ್ನು 8ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಬಾಲಕಿಯರಿಗೆ ಕೂಡ ವಿಸ್ತರಿಸಿ ಈಚೆಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಅದರಂತೆ ಪ್ರತಿ ವಿದ್ಯಾರ್ಥಿನಿಗೆ ₹ 2ಸಾವಿರ ಶಿಷ್ಯವೇತನ ದೊರೆಯಲಿದೆ. ಈ ಮೂಲಕ ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡಲಾಗುತ್ತಿದೆ.

ಯಾರಿಗೆ, ಎಷ್ಟು ಶಿಷ್ಯವೇತನ?

* ಪಿಯುಸಿ, ಐಟಿಐ, ಡಿಪ್ಲೊಮಾ: ವಿದ್ಯಾರ್ಥಿಗಳಿಗೆ ₹2,500 ಹಾಗೂ ವಿದ್ಯಾರ್ಥಿನಿಯರಿಗೆ (ತೃತೀಯ ಲಿಂಗಿಗಳೂ ಸೇರಿ) ₹3,000

* ಪದವಿ: ವಿದ್ಯಾರ್ಥಿಗಳಿಗೆ ₹5ಸಾವಿರ. ವಿದ್ಯಾರ್ಥಿನಿಯರಿಗೆ ₹5,500.

* ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, ಬಿ.ಫಾರ್ಮ, ನರ್ಸಿಂಗ್‌ ಮೊದಲಾದ ವೃತ್ತಿಪರ ಕೋರ್ಸ್‌: ವಿದ್ಯಾರ್ಥಿಗಳಿಗೆ ₹7,500. ವಿದ್ಯಾರ್ಥಿನಿಯರಿಗೆ ₹8,000.

* ಎಂಬಿಬಿಎಸ್‌, ಬಿಇ, ಬಿ.ಟೆಕ್‌ ಹಾಗೂ ಸ್ನಾತಕೋತ್ತರ ಕೋರ್ಸ್‌: ವಿದ್ಯಾರ್ಥಿಗಳಿಗೆ ₹10ಸಾವಿರ. ವಿದ್ಯಾರ್ಥಿನಿಯರಿಗೆ: ₹11ಸಾವಿರ.

(ಮಾಹಿತಿ: ಕೃಷಿ ಇಲಾಖೆ)

ನಿಧಿಯ ಪ್ರಗತಿ ಮಾಹಿತಿ

ತಾಲ್ಲೂಕು;ವಿದ್ಯಾರ್ಥಿಗಳ ಸಂಖ್ಯೆ;ಮೊತ್ತ

ಚಿಕ್ಕೋಡಿ;6,990;₹ 1.70 ಕೋಟಿ

ಹುಕ್ಕೇರಿ;5,046;₹ 1.19 ಕೋಟಿ

ಬೆಳಗಾವಿ;4,265;1.04 ಕೋಟಿ

ಮೂಡಲಗಿ;1,243;₹ 33.70 ಲಕ್ಷ

ರಾಮದುರ್ಗ;3,376;₹80.45 ಲಕ್ಷ

ಖಾನಾಪುರ;2,749;₹ 65.72 ಲಕ್ಷ

ರಾಯಬಾಗ;4,326;₹ 1.03 ಕೋಟಿ

ಬೈಲಹೊಂಗಲ;4,667;₹1.15 ಕೋಟಿ

ಗೋಕಾಕ;7,937;₹ 1.90 ಕೋಟಿ

ಸವದತ್ತಿ;3,731;₹ 87.40 ಲಕ್ಷ

(ಮಾಹಿತಿ: ಕೃಷಿ ಇಲಾಖೆ)

***

ಯೋಜನೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಬಹುದು. ಕಾಲೇಜುಗಳಲ್ಲಿ ಹೆಚ್ಚಿನ ಮಾಹಿತಿ ದೊರೆಯಲಿದೆ. ಇದನ್ನು ಬಳಸಿಕೊಳ್ಳಬೇಕು.

–ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT