ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತವರಿಗೆ ಬೇಡವಾದ 7 ಹಸುಗೂಸುಗಳ ರಕ್ಷಣೆ

ಹತ್ತು ವರ್ಷಗಳಲ್ಲಿ 76 ಮಕ್ಕಳ ದತ್ತು ನೀಡಿಕೆ;
Last Updated 24 ಜುಲೈ 2019, 14:28 IST
ಅಕ್ಷರ ಗಾತ್ರ

ಬೆಳಗಾವಿ: ವಿವಿಧ ಕಾರಣಗಳಿಗಾಗಿ ಹೆತ್ತವರೇ ತಮ್ಮ ಹಸುಗೂಸುಗಳನ್ನು ದೂರ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಒಂದೇ ತಿಂಗಳಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 7 ಹಸುಗೂಸುಗಳನ್ನು ಬಿಟ್ಟು ಹೋಗಿದ್ದಾರೆ. ಈ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಿಸಿದ್ದು, ಆರೈಕೆ ಮಾಡುತ್ತಿದ್ದಾರೆ.

ಇದುವರೆಗೆ ಅಪರೂಪಕ್ಕೊಮ್ಮೆ ಅಲ್ಲೊಂದು, ಇಲ್ಲೊಂದು ಹಸುಗೂಸುಗಳು ಪತ್ತೆಯಾಗುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ ಇಷ್ಟೊಂದು ಸಂಖ್ಯೆಯ ಮಕ್ಕಳು ಸಿಕ್ಕಿವೆ. ಇವುಗಳಲ್ಲಿ 4 ಹೆಣ್ಣು ಹಾಗೂ 3 ಗಂಡುಮಕ್ಕಳಿವೆ. ಕಳೆದ ಆರು ತಿಂಗಳಲ್ಲಿ 15 ಮಕ್ಕಳು ದೊರೆತಿವೆ. ಇವುಗಳ ರಕ್ಷಣೆ ಹಾಗೂ ಲಾಲನೆ, ಪಾಲನೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ.

ಈ ಮಕ್ಕಳಲ್ಲಿ ಹೆಚ್ಚಿನವು ಅನೈತಿಕಸಂಬಂಧದಿಂದ ಅ ಥವಾ ಲೈಂಗಿಕ ದೌರ್ಜನ್ಯದಿಂದಾಗಿ ಹುಟ್ಟಿದಂತಹವು. ಗಂಡು ಮಕ್ಕಳ ಬಗ್ಗೆ ವ್ಯಾಮೋಹ ಹೊಂದಿದ್ದ ಪಾಲಕರು, ತಮಗೆ ಹುಟ್ಟಿದ ಹೆಣ್ಣು ಮಕ್ಕಳನ್ನು ಕೂಡ ಬಿಟ್ಟು ಹೋಗಿದ್ದಾರೆ. ಇದಲ್ಲದೇ, ಕೆಲವು ಪ್ರಕರಣಗಳಲ್ಲಿ ಮಕ್ಕಳನ್ನು ಸಾಕಲು ಸಾಧ್ಯವಾಗದ ಬಡ ಪೋಷಕರು ಕೂಡ ತಮ್ಮ ಮಕ್ಕಳನ್ನು ಬಿಟ್ಟು ಹೋದ ಉದಾಹರಣೆಗಳಿವೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿ ಕಾರ್ಯನಿರ್ವಹಿಸುತ್ತಿರುವ ಹಲವು ಅನಾಥಾಶ್ರಮಗಳು ಇಂತಹ ಮಕ್ಕಳಿಗೆ ಆಶ್ರಯ ನೀಡಿವೆ. ಊಟ– ವಸತಿ ನೀಡುತ್ತಿವೆ. ಪ್ರೀತಿ– ವಾತ್ಸಲ್ಯದಿಂದ ಆರೈಕೆ ಮಾಡುತ್ತಿವೆ. ಮಕ್ಕಳನ್ನು ದತ್ತು ಪಡೆಯಲು ಬಯಸುವ ದಂಪತಿಗೆ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ನೀಡುತ್ತಿವೆ.

ದತ್ತು ಪ್ರಕ್ರಿಯೆಗೆ ಒತ್ತು:

ಮಕ್ಕಳನ್ನು ದತ್ತು ಪಡೆಯಲು ಬಯಸುವ ದಂಪತಿಗೆ ‘ಕಾರಾ’ (ಸೆಂಟ್ರಲ್‌ ಅಡಾಪ್ಟೆಷನ್‌ ರಿಸೋರ್ಸ್‌ ಅಥಾರಿಟಿ) ಮೂಲಕ ನೀಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ದತ್ತು ಪಡೆಯುವ ದಂಪತಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 76 ಮಕ್ಕಳನ್ನು ದತ್ತು ನೀಡಲಾಗಿದೆ. ಇದರಲ್ಲಿ ಮೂರು ಮಕ್ಕಳನ್ನು ಅನಿವಾಸಿ ಭಾರತೀಯರಿಗೂ ನೀಡಲಾಗಿದೆ. ಇಲ್ಲಿನ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರದ ಮೂಲಕ ಮಕ್ಕಳನ್ನು ದತ್ತು ನೀಡಲಾಗುತ್ತಿದೆ.

‘ಹೆತ್ತವರಿಗೆ ಬೇಡವಾದ 7 ಮಕ್ಕಳು ಒಂದೇ ತಿಂಗಳಿನಲ್ಲಿ ದೊರೆತಿವೆ. ಇಷ್ಟೊಂದು ಪ್ರಮಾಣದಲ್ಲಿ ದೊರೆತಿರುವುದು ಇದೇ ಮೊದಲು. ಬಾಲಕಲ್ಯಾಣ ಕೇಂದ್ರಗಳಲ್ಲಿ ಇವುಗಳನ್ನು ಇಟ್ಟು ಸಾಕುತ್ತಿದ್ದೇವೆ. ದತ್ತು ಪಡೆಯಲು ಬಯಸುವ ದಂಪತಿಗೆ ಕಾನೂನು ಪ್ರಕಾರ, ಮಕ್ಕಳನ್ನು ಹಸ್ತಾಂತರಿಸುತ್ತೇವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭಾರತಿ ಶೆಟ್ಟರ್‌ ತಿಳಿಸಿದರು.

ದತ್ತು ನೀಡಿರುವ ಮಾಹಿತಿ;

ವರ್ಷ; ಗಂಡು; ಹೆಣ್ಣು

2009–10; 4; 3

2010–11; 1; 5

2011–12; 2; 5

2012–13; 6; 5

2013–14; 1; 4

2014–15; –; 3

2015–16; 2; 3

2016–17; 1; 6

2017–18; 5; 6 (ವಿದೇಶ– 1 ಹೆಣ್ಣು)

2018–19; 4; 5 (ವಿದೇಶ– 2 ಹೆಣ್ಣು)

2019–20; 1;1

ಒಟ್ಟು; 27; 46; 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT