ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

987 ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರ

ಸ್ಥಳೀಯ ಸಂಸ್ಥೆ: ಮತದಾನ ಶಾಂತಿಯುತ, ಸೆ.3ರಂದು ಫಲಿತಾಂಶ
Last Updated 31 ಆಗಸ್ಟ್ 2018, 12:11 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಗೋಕಾಕ ಹಾಗೂ ನಿಪ್ಪಾಣಿ ನಗರಸಭೆಗಳು ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳ 329 ವಾರ್ಡ್‌ಗಳ ಸದಸ್ಯರ ಆಯ್ಕೆಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು. 987 ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತ ಯಂತ್ರಗಳಲ್ಲಿ (ಇವಿಎಂ) ಭದ್ರವಾಗಿದೆ.

ಈ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇವಿಎಂಗಳನ್ನು ಬಳಸಲಾಗಿತ್ತು. ಈ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಘಟನೆಗಳು ವರದಿಯಾಗಿಲ್ಲ. ಒಟ್ಟು 453 ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ಸಂಜೆ 5ರ ಒಳಗೆ ಸರದಿಯಲ್ಲಿ ನಿಂತಿದ್ದ ಮತದಾರರಿಗೆ ಮತ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿತ್ತು.

ರಾಮದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಮತ ಯಾಚಿಸುತ್ತಿದ್ದರು. ಇದನ್ನು ಮಾಜಿ ಶಾಸಕ ಕಾಂಗ್ರೆಸ್‌ನ ಅಶೋಕ ಪಟ್ಟಣ ಪ್ರಶ್ನಿಸಿದ್ದಾರೆ. ಈ ವೇಳೆ, ಇಬ್ಬರು ಹಾಗೂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು, ಎರಡೂ ಪಕ್ಷದ ಕಾರ್ಯಕರ್ತರನ್ನು ಅಲ್ಲಿಂದ ಕಳುಹಿಸಿದ್ದಾರೆ. ಇದು ಬಿಟ್ಟರೆ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮತಗಟ್ಟೆಗಳ ಸಮೀಪದಲ್ಲಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಬೆಂಬಲಿಗರು ಮತದಾರರ ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತುಗಳನ್ನು ನಡೆಸುತ್ತಿದ್ದುದು ಸಾಮಾನ್ಯವಾಗಿತ್ತು.

ವಾರ್ಡ್‌ಗಳ ಮಾಹಿತಿ: ಗೋಕಾಕ ಹಾಗೂ ನಿಪ್ಪಾಣಿ ನಗರಸಭೆಯ ತಲಾ 31, ಪುರಸಭೆಗಳಾದ ಬೈಲಹೊಂಗಲ–27, ಸವದತ್ತಿ 27, ರಾಮದುರ್ಗ–27, ಕೊಣ್ಣೂರು–23, ಮೂಡಲಗಿ–23, ಸಂಕೇಶ್ವರ–23, ಹುಕ್ಕೇರಿ–23, ಚಿಕ್ಕೋಡಿ–23, ಸದಲಗಾ–23, ಕುಡಚಿಯ 23, ರಾಯಬಾಗ ಪಟ್ಟಣ ಪಂಚಾಯ್ತಿ 19 ಹಾಗೂ ಖಾನಾಪುರ ಪಟ್ಟಣ ಪಂಚಾಯ್ತಿಯ 20 ವಾರ್ಡ್‌ಗಳು ಸೇರಿ ಒಟ್ಟು 343 ವಾರ್ಡ್‌ಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಪೈಕಿ, ಗೋಕಾಕ ನಗರಸಭೆಯಲ್ಲಿ 6, ಕೊಣ್ಣೂರ ಪುರಸಭೆಯಲ್ಲಿ 6, ಸಂಕೇಶ್ವರ ಹಾಗೂ ಸದಲಗಾ ಪುರಸಭೆಯಲ್ಲಿ ತಲಾ 1 ವಾರ್ಡ್‌ಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಇದರಿಂದಾಗಿ, ಉಳಿದ 32 ವಾರ್ಡ್‌ಗಳಿಗೆ ಚುನಾವಣೆ ನಡೆಯಿತು.

ಮತ ಚಲಾಯಿಸಿದವರ ಎಡಗೈ ಉಂಗುರ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಯಿತು.

ವಿದ್ಯುನ್ಮಾನ ಮತಯಂತ್ರಗಳನ್ನು ಪೊಲೀಸ್‌ ಭದ್ರತೆಯಲ್ಲಿ ತಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಇಡಲಾಗಿದೆ. ಸ್ಟ್ರಾಂಗ್‌ ರೂಂಗಳಿಗೂ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಸೆ. 3ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಅಂದು ಅಭ್ಯರ್ಥಿಗಳ ಭವಿಷ್ಯ ಬಹಿರಂಗಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT